More

    ಯುವಕರು ಸಂಸ್ಕಾರ, ಸಂಸ್ಕೃತಿ ಬಿಟ್ಟು ಬೇರೆ ಹಾದಿ ಹಿಡಿದರೆ ದೇಶಕ್ಕೆ ನಷ್ಟ ಎಂದು ವಿಷಾದಿಸಿದ ಸಾಹಿತಿ ಡಾ. ಪದ್ಮಾವಿಠಲ್

    ಕೊಟ್ಟೂರು: ಯುವಕರು ಸಂಸ್ಕೃತಿ ಮತ್ತು ಸಂಸ್ಕಾರದೊಂದಿಗೆ ಶೈಕ್ಷಣಿಕ ಹಾಗೂ ತಾಂತ್ರಿಕವಾಗಿ ಪ್ರಗತಿ ಸಾಧಿಸಿ ವಿಶ್ವದಲ್ಲಿ ಭಾರತಕ್ಕೆ ಅಗ್ರಮಾನ್ಯ ಸ್ಥಾನಕ್ಕೇರಿಸಬೇಕೆಂದು ಸಾಹಿತಿ ಹಾಗೂ ಸಿಂಡಿಕೇಟ್ ಸದಸ್ಯೆ ಡಾ. ಪದ್ಮಾವಿಠಲ್ ಕರೆ ನೀಡಿದರು.

    ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಶನಿವಾರ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಹಾಗೂ ಕೊಟ್ಟೂರೇಶ್ವರ ಮಹಾ ವಿದ್ಯಾಲಯದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯುವ ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಇದು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಎತ್ತಿಹಿಡಿಯುವ ಯುವಜನೋತ್ಸವ ಇದು. ಇಂದಿನ ಯುವಕರು ಸಂಸ್ಕಾರ ಮತ್ತು ಸಂಸ್ಕೃತಿ ಬಿಟ್ಟು ಬೇರೆ ಹಾದಿ ಹಿಡಿದರೆ ದೇಶಕ್ಕೆ ನಷ್ಟ. ಇದರಿಂದ ಯುವಕರು ದೂರವಿರಬೇಕು ಎಂದು ಮನವಿ ಮಾಡಿದರು. ವಿಶ್ವದಲ್ಲಿ ಪರಕೀಯರ ದಾಳಿಯಿಂದ ಆ ಪ್ರದೇಶದ ಸಂಸ್ಕೃತಿ, ಸಂಸ್ಕಾರ ನಾಶವಾಗಿವೆ. ಆದರೆ, ನಮ್ಮ ದೇಶದಲ್ಲಿ ನೂರಾರು ವರ್ಷಗಳಿಂದ ಶತೃಗಳು ಆಕ್ರಮಮಾಡಿ ದೇಗುಲ, ಆಸ್ತಿ, ಸಂಪತ್ತನ್ನು ನಾಶಮಾಡಿರಬಹುದು. ಆದರೆ, ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ನಾಶವಾಗದೆ ಶಾಶ್ವತವಾಗಿ ಉಳಿದಿದೆ. ಇದೇ ನಮ್ಮ ಶಕ್ತಿ ಎಂದರು.

    ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಯುವಜನೋತ್ಸವ ವಿಭಾಗದ ಸಂಚಾಲಕ ಶಾಂತನಾಯ್ಕ ಮಾತನಾಡಿ, ವಿಶ್ವವಿದ್ಯಾಲಯದಿಂದ ಯುವಜನೋತ್ಸವಕ್ಕೆ 4 ಬಾರಿ ದಕ್ಷಿಣಭಾರತ ಯುವಜನೋತ್ಸವದಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಸಿದ್ದಾರೆ. 2 ಸಾರಿ ರಾಷ್ಟ್ರೀಯ ಯುವಜನೋತ್ಸವದಲ್ಲಿ ಸ್ಪರ್ಧಿಸಿದ ಕೀರ್ತಿ ನಮ್ಮ ವಿಶ್ವವಿದ್ಯಾಲಯದ್ದು ಎಂದರು. ನಾಡೋಜ ಬೆಳಗಲ್ಲು ವೀರಣ್ಣ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುರುಸಿದ್ದಸ್ವಾಮಿ ಮಾತನಾಡಿದರು.

    ಯುವಜನೋತ್ಸವ ಅರಂಭವಾಗುವ ಮೊದಲು ಪಟ್ಟಣದ ಆರಾಧ್ಯ ದೈವ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಿಂದ ಕೊಟ್ಟೂರೇಶ್ವರ ಕಾಲೇಜ್ ತನಕ ಕೊಟ್ಟೂರೇಶ್ವರ ಸ್ವಾಮಿ ಭಾವಚಿತ್ರದಿಂದೊಂದಿಗೆ ನಂದಿಕೋಳು, ಸಮಳ, ಡೊಳ್ಳು, ಮೇಳದೊಂದಿಗೆ ಅದ್ದೂರಿಯಾಗಿ ವಿದ್ಯಾರ್ಥಿಗಳು ನೃತ್ಯಮಾಡುತ್ತ ಆಗಮಿಸಿದ್ದು ಹಬ್ಬದ ವಾತಾವರಣವನ್ನು ಸೃಷ್ಠಿಸಿತ್ತು.

    ವೇದಿಕೆ ಕಾರ್ಯಕ್ರಮದಲ್ಲಿ ವೀವಿ ಸಂಘದ ಉಪಾಧ್ಯಕ್ಷ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಅಸುಂಡಿ ನಾಗರಾಜ್, ಏಳಬೆಂಚಿ ನಾಗರಾಜ್ ಗೌಡ, ಕಾಲೇಜ್ ಆಡಳಿತ ಮಂಡಳಿ ಸದಸ್ಯರಾದ ಅವಂತಿ ಬಸವರಾಜ್, ಕೆ.ಬಿ. ಮಲ್ಲಿಕಾರ್ಜುನ, ಎಸ್.ಎಂ. ಗುರುಪ್ರಸಾದ್ ಹಾಗೂ ಕೊಟ್ಟೂರೇಶ್ವರ ಪ.ಪೂ. ಕಾಲೇಜ್ ಪ್ರಾಚಾರ್ಯ ಪ್ರಶಾಂತ ಕುಮಾರ್ ಮುಂತಾದವರಿದ್ದರು. ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮಯ್ಯ ಕಲ್ಮಠ ಸ್ವಾಗತಿಸಿದರೆ, ಕೊಟ್ಟೂರೇಶ್ವರ ಪದವಿ ಕಾಲೇಜ್ ಪ್ರಾಚಾರ್ಯ ಪ್ರೊ.ಶಾಂತಮೂರ್ತಿ ಬಿ. ಕುಲಕರ್ಣಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮಿ ಸಜ್ಜನ್ ನಿರೂಪಿಸಿದರೆ, ಕುಸುಮಾ ಸಜ್ಜನ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts