More

    ಶ್ರೀಗಂಧ ಬೆಳೆಗಾರರಿಗೆ ಸರ್ಕಾರ ಮುಕ್ತ ಮಾರುಕಟ್ಟೆ ಕಲ್ಪಿಸಸುವಂತೆ ನಿವೃತ್ತ ಜಿಲ್ಲಾಧಿಕಾರಿ ಅಮರನಾರಾಯಣ ಆಗ್ರಹ

    ಕೊಟ್ಟೂರು: ಶ್ರೀಗಂಧ ಬೆಳೆಗಾರರಿಗೆ ಸರ್ಕಾರ ವಿಧಿಸಿರುವ ಕಠಿಣ ಷರತ್ತುಗಳನ್ನು ಸರಳೀಕರಣಗೊಳಿಸಿ, ಮುಕ್ತ ಮಾರುಕಟ್ಟೆಯನ್ನು ಕಲ್ಪಿಸಬೇಕೆಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಜಿಲ್ಲಾಧಿಕಾರಿ ಅಮರನಾರಾಯಣ ಒತ್ತಾಯಿಸಿದರು.

    ತಾಲೂಕಿನ ತೂಲಹಳ್ಳಿಯಲ್ಲಿ ಮಂಗಳವಾರ ಪ್ರಗತಿಪರ ಕೃಷಿಕ ಹೇಮಣ್ಣ ತೋಟದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಮತ್ತು ಒಐಎಸ್‌ಸಿಎ ಸಂಘಟನೆ ಜಂಟಿಯಾಗಿ ಆಯೋಜಿಸಿದ್ದ ವಿಜಯನಗರ ಜಿಲ್ಲೆ ಶ್ರೀಗಂಧದ ಬೆಳೆಗಾರರ ಕಾರ್ಯಾಗಾರರದಲ್ಲಿ ಮಾತನಾಡಿದರು. ಎರಡು ದಶಕಗಳ ಹಿಂದೆ ಸರ್ಕಾರ ಶ್ರೀಗಂಧ ಸರ್ಕಾರದ ಸ್ವತ್ತು ಎಂಬ ಕಾನೂನನ್ನು ರದ್ದು ಪಡಿಸುವುದು ನಮ್ಮ ಸಂಘದ ಮೂಲ ಉದ್ದೇಶವಾಗಿದ್ದು, ಶ್ರೀಗಂಧ ಬೆಳೆದ ರೈತರು ಮುಕ್ತವಾಗಿ ಮಾರಾಟ ಮಾಡಲು ಕಾನೂನು ರೂಪಿಸಬೇಕೆಂದು ಆಗ್ರಹಿಸಿದರು.

    ನಮ್ಮ ಸಂಘದ ಅವಿರತ ಹೋರಾಟದ ಫಲವಾಗಿ ಶ್ರೀಗಂಧ ಬೆಳೆಗಾರರ ಮೇಲೆ ಸರ್ಕಾರ ವಿಧಿಸಿರುವ ಕಾನೂನುನ್ನು ರದ್ದು ಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಇನ್ನು ಒಂದು ತಿಂಗಳೊಳಗಾಗಿ ಶ್ರೀಗಂಧದ ಬೆಳೆಗಾರರಿಗೆ ಅನುಕೂಲಕರ ಕಾನೂನು ತಿದ್ದುಪಡಿಯನ್ನು ಸರ್ಕಾರ ಮಾಡಲಿದೆ ಆಶಾಭಾವನೆ ವ್ಯಕ್ತಪಡಿಸಿದರು.

    ಸರ್ಕಾರ ರೈತರಿಂದ ಶ್ರೀಗಂಧವನ್ನು ಏಳು ಸಾವಿರ ರೂ.ಗೆ ಖರೀದಿಸಿ 30 ಸಾವಿರ ರೂ.ಗೆ ಮಾರಾಟ ಮಾಡುವ ಮೂಲಕ ಶ್ರೀಗಂಧ ಬೆಳೆಗಾರರು ಶೋಷಣೆಗೆ ಒಳಗಾಗುತ್ತಿದ್ದಾರೆ. ಕಾನೂನು ತಿದ್ದ್ದುಪಡಿಯಾಗುವ ತನಕ, ಶ್ರೀಗಂಧವನ್ನು ಅರಣ್ಯ ಇಲಾಖೆಯಿಂದ ಬೇರ್ಪಡಿಸಿ ತೋಟಗಾರಿಕೆ ಇಲಾಖೆಗೆ ಸೇರಿಸಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದ ಶ್ರೀಗಂಧ ಬೆಳಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.

    ಸರ್ಕಾರ ನಮ್ಮ ಸಂಘಕ್ಕೆ ಅವಕಾಶ ಕಲ್ಪಿಸಿದರೆ, ವರ್ಷಕ್ಕೆ ಒಂದು ಕೋಟಿ ಶ್ರೀಗಂಧ ಗುಣಮಟ್ಟದ ಗಿಡಗಳನ್ನು ಬೆಳೆಸಿ ಸರ್ಕಾರ ನೀಡುವ ಬೆಲೆಗಿಂಗಲೂ ಕಮ್ಮಿ ಬೆಲೆಗೆ ರೈತರಿಗೆ ಮಾರಾಟ ಮಾಡುವುದಾಗಿ ಹೇಳಿದರು.

    ಶ್ರೀಗಂಧ ಬೆಳೆಗಾರರ ಉಪಾಧ್ಯಕ್ಷ ನಿವೃತ್ತ ಎಸ್ಪಿ ಶರಣಪ್ಪ ಮಾತನಾಡಿ, ಶ್ರೀಗಂಧ ಕಳ್ಳತನ ಮಾಡುವವರಿಗೆ 10 ವರ್ಷ ಕಠಿಣ ಶಿಕ್ಷೆ ಇದೆ. ಶ್ರೀಗಂಧವನ್ನು ರಕ್ಷಿಸಲು ಹೊಲದ ಸುತ್ತಲು ಬಿದಿರು, ಗಜ್ಜುಗ, ಕತ್ತಾಳೆ ಬೆಳೆಸಬೇಕು, ಹೊಲದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾವನ್ನು ಅಳವಡಿಸಿಕೊಳ್ಳಬೇಕು. ನಾಯಿಗಳನ್ನು ಸಾಕಬೇಕು ಎಂದು ರೈತರಿಗೆ ಸಲಹೆ ನೀಡಿದರು.

    ಸಂಘದ ಉಪಾಧ್ಯಕ್ಷ ಈಶ್ವರಪ್ಪ, ವಿಶುಕುಮಾರ, ಅರಣ್ಯ ಇಲಾಖೆ ಎಸಿಎಫ್ ಬಾಬು ಮೆಹತಾ, ಆರ್‌ಎಫ್‌ಒಗಳಾದ ಮಂಜುನಾಥ್, ಗಂಟೆ ರಾಜೇಶ, ಗುಡ್ಡಪ್ಪ, ರೋಷನ್ ಕುಮಾರ್, ನಾಗರಾಜ್, ಪ್ರಗತಿಪರ ಕೃಷಿಕರಾದ ನಿಂಬಳಗೆರೆ ಕಲ್ಲೇಶಪ್ಪ, ಸಂಗಣ್ಣ, ತೂಲಹಳ್ಳಿ ಹೇಮಣ್ಣ, ಎ.ಸಿ. ಚನ್ನಬಸಪ್ಪ, ಶಶಿಧರ, ಆಲದಹಳ್ಳಿ ಮುನಿಯಪ್ಪ, ಹುಣಸಿಕಟ್ಟೆ ಭೀಮಪ್ಪ, ಬೆನಕನಹಳ್ಳಿ ಸೋಮಣ್ಣ ಇತರರಿದ್ದರು. ಕೆ.ಎಂ. ಚಂದ್ರು ಪ್ರಾರ್ಥಿಸಿದರು. ಪ್ರಗತಿಪರ ಕೃಷಿಕ ಆಲದಹಳ್ಳಿ ಷಣ್ಮುಖಪ್ಪ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts