More

    ಪ್ರಜ್ವಲ್ ಕರೆತರಲು ಕೇಂದ್ರ ಸರ್ಕಾರ ಕ್ರಮವಹಿಸಲಿ ರಾಜ್ಯ ಮಹಿಳಾ ಕಾಂಗ್ರೆಸ್ ಒತ್ತಾಯ

    ದಾವಣಗೆರೆ: ಪೆನ್‌ಡ್ರೈವ್ ಪ್ರಕರಣದ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ರಾಜ್ಯಕ್ಕೆ ಕರೆತರಲು ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸ್ವಾತಿ ಚಂದ್ರಶೇಖರ್ ಆಗ್ರಹಿಸಿದರು.
    ಪ್ರಕರಣ ಕುರಿತಂತೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಕೊಟ್ಟ ನಂತರ ರಾಜ್ಯ ಸರ್ಕಾರ ಎಸ್‌ಐಟಿ ಮೂಲಕ ನ್ಯಾಯಯುತ ತನಿಖೆ ನಡೆಸುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಪ್ರಕರಣದ ತನಿಖೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿರುವುದು ಸರಿಯಲ್ಲ. ಅವರು ದೇಶ ಬಿಟ್ಟು ಹೋಗಲು ಕೇಂದ್ರ ಸರ್ಕಾರದಿಂದ ರಾಜತಾಂತ್ರಿಕ ವೀಸಾ ಅನುಮತಿ ದೊರೆತಿದೆ. ಪ್ರಧಾನಮಂತ್ರಿ ಹಾಗೂ ಗೃಹ ಸಚಿವರು ಇದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
    ಶ್ರೀರಾಮನ ಜಪ ಮಾಡುವ ಬಿಜೆಪಿ ದೇಶದಲ್ಲಿ ಸುಮಾರು 10 ವರ್ಷಗಳ ಕಾಲ ಆಡಳಿತ ನಡೆಸಿದರೂ ಶ್ರೀರಾಮ ನವಮಿಗೆ ರಜೆ ಘೋಷಿಸಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸದ ಬಿಜೆಪಿ ಸಂಸದರಿಗೆ ಚುನಾವಣೆಯಲ್ಲಿ ಮತ ಕೇಳಲು ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.
    ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾಮಲ್ಲಿಕಾರ್ಜುನ್ ಅವರು ಜಿಲ್ಲೆಯಲ್ಲಿ ಸುಮಾರು 70 ಸಾವಿರ ಆರೋಗ್ಯ ಶಿಬಿರ ನಡೆಸಿದ್ದಾರೆ. ಆರೋಗ್ಯದ ಜತೆಗೆ ಶಿಕ್ಷಣಕ್ಕೂ ಸಾಕಷ್ಟು ಒತ್ತು ನೀಡಿದ್ದು, ಅಧಿಕಾರದ ಹಪಾಹಪಿ ಇಲ್ಲದೇ ಸೇವೆ ಕೈಗೊಂಡಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲಿದ್ದಾರೆ ಎಂದರು.
    ಜಿಲ್ಲೆಯಲ್ಲಿ ಸುಮಾರು 30 ವರ್ಷ ಅಧಿಕಾರ ನಡೆಸಿರುವ ಬಿಜೆಪಿಯವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಬಹಿರಂಗ ಚರ್ಚೆಗೆ ಸಿದ್ಧ ಎಂದ ಅವರು, ರಾಮನಗರ ಶಾಸಕರ ವಾಟ್ಸಾಪ್ ಕರೆ ವಿಷಯದ ಕುರಿತಂತೆ ಮಹಿಳಾ ಆಯೋಗಕ್ಕೆ ದೂರು ಬಂದರೆ ಸರ್ಕಾರ ಕ್ರಮ ವಹಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
    ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಸುಷ್ಮಾ ಪಾಟೀಲ್, ಕವಿತಾ ಚಂದ್ರಶೇಖರ್, ಸಲ್ಮಾಬಾನು, ಸುನೀತಾ ಭೀಮಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts