ಕೊಟ್ಟೂರು: ಪಟ್ಟಣದ ರೇಣುಕಾ ಟಾಕೀಸ್ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಕಟ್ಟಡಗಳ ತೆರವು ಕಾರ್ಯ ಜೋರಾಗಿ ನಡೆದಿದೆ. ಇದರಲ್ಲಿ ಬಜಾರ್ ಅಂಚೆ ಕಚೇರಿಯೂ ಸೇರಿದ್ದು, ಬಾಡಿಗೆ ಕಟ್ಟಡಕ್ಕೆ ಹುಡುಕಾಟ ನಡೆದಿದೆ. ಆದರೆ, ಎಲ್ಲೂ ಸಿಗದ ಕಾರಣ ಸಂಕಷ್ಟ ಎದುರಾಗಿದೆ.
ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಬಜಾರ್ ಅಂಚೆ ಕಚೇರಿ ಭಾಗಶಃ ಕಟ್ಟಡ ತೆರವಾಗಲಿದ್ದು, ಬೇರೆಡೆ ಸ್ಥಳಾಂತರ ಆಗುವುದು ಅನಿವಾರ್ಯ. ಆದರೆ, ಅಂಚೆ ಇಲಾಖೆ ನೀಡುವ ಬಾಡಿಗೆ ಕಡಿಮೆ. ಅಲ್ಲದೆ ಇಲಾಖೆ ನಿಯಮದಂತೆ ಕಟ್ಟಡ ಇರಬೇಕು ಎಂಬುದು ಸೇರಿ ಇತರ ಷರತ್ತುಗಳನ್ನು ವಿಧಿಸುತ್ತಿರುವುದೇ ಬಾಡಿಗೆ ಸಿಗದಿರಲು ಕಾರಣ ಎಂದು ಹೇಳಲಾಗುತ್ತಿದೆ.
ಈ ನಡುವೆ ಅಂಚೆ ಇಲಾಖೆ, ಎಪಿಎಂಸಿ ಆವರಣದಲ್ಲಿರುವ ಪ್ರಧಾನ ಅಂಚೆ ಕಚೇರಿಗೆ ಸ್ಥಳಾಂತರವಾಗಲು ಆದೇಶ ನೀಡಿದೆ. ಅಲ್ಲಿ ಈಗಿರುವ ಸಿಬ್ಬಂದಿಗೆ ಕೆಲಸ ಮಾಡಲು ಜಾಗದ ಕೊರತೆ ಇದೆ. ಇದರೊಳಗೆ ಬಜಾರ್ ಅಂಚೆ ಕಚೇರಿ ಸೇರ್ಪಡೆಯಾದರೆ ಮತ್ತಷ್ಟು ಇಕ್ಕಟ್ಟಾಗಲಿದೆ. ಅಷ್ಟೇ ಅಲ್ಲ ಗ್ರಾಹಕರಿಗೂ ತೊಂದರೆಯಾಗಲಿದೆ. ಮಠದ ಪ್ರದೇಶ, ಉಜ್ಜಿನಿ ಸರ್ಕಲ್, ಬಸವೇಶ್ವರ ನಗರ, ವಾಲ್ಮೀಕಿ ನಗರ, ತೆಳಗೇರಿ, ರಾಜೀವಗಾಂಧಿ ನಗರವಾಸಿಗಳಿಗೆ ದೂರವಾಗಲಿದೆ. ಅಂಚೆ ಇಲಾಖೆಗೆ ಸ್ವಂತ ಜಾಗವಿದ್ದರೂ ಇಲಾಖೆ ಬಿಲ್ಡಿಂಗ್ ನಿರ್ಮಿಸಿಲ್ಲ.
ಗ್ರಾಹಕರ ಹಿತದೃಷ್ಟಿಯಿಂದ ಉಜ್ಜಿನಿ ಸರ್ಕಲ್ ಭಾಗದಲ್ಲಿಯೇ ಅಂಚೆ ಕಚೇರಿ ಮುಂದುವರಿಯಬೇಕು ಎಂದ ಪಟ್ಟಣ ಪಂಚಾಯಿತಿ ಸದಸ್ಯ ತೋಟದ ರಾಮಣ್ಣ ಸೇರಿ ಗ್ರಾಹಕರು ಒತ್ತಾಯಿಸಿದ್ದಾರೆ.
ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಅಂಚೆ ಕಚೇರಿಗೆ ಸೂಕ್ತವಾದ ಕಟ್ಟಡ ಹುಡುಕುತ್ತಿದ್ದೇವೆ. ಈಗ ಪ್ರಧಾನ ಅಂಚೆ ಕಚೇರಿಗೆ ಸ್ಥಳಾಂತರಗೊಳ್ಳಲು ಇಲಾಖೆಯಿಂದ ಆದೇಶ ಬಂದಿದೆ. ಮೇಲಧಿಕಾರಿಗಳ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
| ಅಂಚೆ ಕೊಟ್ರೇಶ ಪೋಸ್ಟ್ ಮಾಸ್ಟರ್, ಬಜಾರ್ ಅಂಚೆ ಕಚೇರಿ, ಕೊಟ್ಟೂರು