More

    ಬಿಸಿಲ ನಾಡಲ್ಲಿ ಅಕ್ಷರ ಬಿತ್ತಿಬೆಳೆದ ಕೊಟ್ಟೂರೇಶ್ವರ

    ಕೊಟ್ಟೂರು: ಬಿಸಿಲ ನಾಡು, ಬರದ ಬೀಡು ಕೊಟ್ಟೂರಿನಲ್ಲಿ 31 ಜುಲೈ 1967ರಂದು ಮೈಸೂರು ರಾಜ್ಯಪಾಲರಾಗಿದ್ದ ಜಿ.ಎಸ್. ಪಾಠಕ್ ಅವರ ಅಮೃತ ಹಸ್ತದಿಂದ ಪಟ್ಟಣದಲ್ಲಿ ಆರಂಭವಾದ ಕೊಟ್ಟೂರೇಶ್ವರ ಕಾಲೇಜು ಹೆಮ್ಮರವಾಗಿ ಬೆಳೆದು ಇಂದು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.

    ಕೊಟ್ಟೂರು ಸ್ವಾತಂತ್ರ್ಯ ಪೂರ್ವದಿಂದಲೂ ಧಾರ್ಮಿಕ, ವಾಣಿಜ್ಯ ಕೇಂದ್ರವಾಗಿತ್ತಲ್ಲದೆ, ಇಲ್ಲಿನ ದೇವಾಲಯಗಳಲ್ಲಿ ವರ್ಗ, ವರ್ಣಬೇಧವಿಲ್ಲದೆ ನಡೆಯುತ್ತಿದ್ದ ಗುರುಕುಲ ಮಾದರಿಯ ಅಯ್ಯನವರ ಶಾಲೆಗಳು ಈ ಭಾಗದಲ್ಲಿ ಶಿಕ್ಷಣದ ದೀವಿಯನ್ನೇ ಹಚ್ಚಿದ್ದವು. ಇಲ್ಲಿ ಅಕ್ಷರ ಕಲಿತು ಬೆಂಗಳೂರು, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಉನ್ನತ ಶಿಕ್ಷಣ ಮುಗಿಸಿಕೊಂಡು ಬಂದ, ಎಂ.ಎಂ.ಜೆ. ಸದ್ಯೋಜಾತ, ಬಿ.ಎಸ್. ವೀರಭದ್ರಪ್ಪ, ಡಾ.ಅ.ನಂಜಪ್ಪ, ಗೊರ್ಲಿಶರಣಪ್ಪ, ಡಾ.ಜೆ.ಎಂ. ಸಿದ್ದರಾಮಯ್ಯ, ವಿ.ಜಿ. ಈರಣ್ಣ ಅನೇಕ ಶಿಕ್ಷಣ ಪ್ರೇಮಿಗಳು, ಕಾಲೇಜಿಲ್ಲದ ತಮ್ಮೂರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಬೇಕೆಂಬ ಚಿಂತನೆ ಮೂಡಿದಾಗ ಕಂಡುಬಂದಿದ್ದು, ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘ.
    ಸಂಘದಡಿ 1967ರಲ್ಲಿ ಆರಂಭವಾದ ಕೊಟ್ಟೂರೇಶ್ವರ ಕಾಲೇಜಿಗೆ 56 ವರ್ಷಗಳು ತುಂಬಿದ್ದು, ಇಲ್ಲಿ ಶಿಕ್ಷಣ ಪಡೆದ ಅನೇಕ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ರಾಜ್ಯ ಮತ್ತು ಅಂತಾರಾಜ್ಯ, ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಕಾಲೇಜು ಆರಂಭಕ್ಕೆ ಅಂದಿನ ಮೈಸೂರು ರಾಜ್ಯದ ಸಚಿವ ಪಿ.ಎಂ. ನಾಡಗೌಡರ ಸಹಕಾರ-ಕೊಡುಗೆ ಸದಾ ಸ್ಮರಣಾರ್ಹ. ಇದಲ್ಲದೆ ಹೊಸಪೇಟೆ ಬಿಡಿಸಿಸಿ ಬ್ಯಾಂಕ್ 10 ಸಾವಿರ ರೂ. ಪಟ್ಟಣದ ಪುರಸಭೆಯಿಂದ 25 ಸಾವಿರ ರೂ. ವಿ.ಎಫ್. ಹಾಸ್ಟೆಲ್‌ನವರು 10 ಸಾವಿರ ರೂ. ಹಾಗೂ ಸ್ಥಳೀಯ ದಾನಿಗಳಿಂದ 1 ಲಕ್ಷ ರೂ., ಕೂಡ್ಲಿಗಿ ತಾಲೂಕು ಅಭಿವೃದ್ಧಿ ಮಂಡಳಿ 50 ಸಾವಿರ ರೂ. ಹೀಗೆ ಹನಿ ಹನಿಯಾಗಿ ಸಂಗ್ರಹವಾದ ಹಣದಿಂದ ಕಾಲೇಜು ಸರ್ವತೋಮುಖವಾಗಿ ಅಭಿವೃದ್ಧಿಗೊಂಡಿತು.

    ಆರಂಭದಲ್ಲಿ ಕಲಾ, ವಿಜ್ಞಾನ ವಿಷಯಗಳನ್ನು ಮಾತ್ರ ಹೊಂದಿತ್ತು. ನಂತರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರಾಸಾಯನ ಶಾಸ್ತ್ರ, 1974ರಲ್ಲಿ ವಾಣಿಜ್ಯ ವಿಭಾಗಗಳು ಆರಂಭಗೊಂಡು ಹಂತ ಎಂಕಾಂ ಪ್ರಾರಂಭವಾಯಿತು. ಎಪ್ಪತ್ತು-ಎಂಬತ್ತರ ದಶಕದಲ್ಲಿ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಓದಿದವರಿಗೆ ಗುಲ್ಬರ್ಗಾ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿಶೇಷ ಗೌರವಿತ್ತು. ರ‌್ಯಾಂಕ್‌ಗಳಿಗೂ ಬರವಿರಲಿಲ್ಲ. ಇಂದಿಗೂ ಈ ಕಾಲೇಜಿನ ವಿದ್ಯಾರ್ಥಿ ಎಂದರೆ ಗೌರವವಿದೆ.
    1967ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಆಡಳಿತಕ್ಕೆ ಒಳಪಟ್ಟಿದ್ದ ಕಾಲೇಜು, 1980ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ, 2010ರಲ್ಲಿ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯಕ್ಕೆ ಸೇರಿದೆ. ಮುಂಬರುವ ದಿನಗಳಲ್ಲಿ ಪ್ಯಾರಮೆಡಿಕಲ್ ಕೋರ್ಸ್ ಆರಂಭಿಸುವ ಚಿಂತನೆ ಕಾಲೇಜು ಆಡಳಿತ ಮಂಡಳಿಗಿದೆ. ಎರಡು ವರ್ಷದ ಹಿಂದೆಯೇ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಬೇಕಿದ್ದ ಕಾಲೇಜಿಗೆ, ಕರೊನಾ ಕಾರಣ ಈಗ ಕಾಲ ಕೂಡಿ ಬಂದಿದೆ.

    ಪ್ರಸ್ತುತ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ್ ಕಲ್ಮಠ ನೇತೃತ್ವದಲ್ಲಿ ಕಾಲೇಜು ಸರ್ವತೋಮುಖ ಅಭಿವೃದ್ಧಿಯತ್ತ ಮುಖಮಾಡಿದೆ. ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹೆಚ್ಚಿಸುವ ಇತಿಹಾಸ, ಸಾಂಸ್ಕೃತಿ ಚರಿತ್ರೆ ಉಪನ್ಯಾಸಗಳು ನಡೆಯುತ್ತಿರುವುದು, ಅಧ್ಯಕ್ಷರ ದೂರದೃಷ್ಟಿಯ ಫಲವಾಗಿದೆ.

    ಕಾಲೇಜು ಬೆಟ್ಟದಷ್ಟು ಬೆಳೆಯಲು ತನು, ಮನ, ಧನ ಸಹಾಯ ಮಾಡಿರುವ ಡಾ.ಅ. ನಂಜಪ್ಪ, ಟಿ. ಸಿದ್ದನಗೌಡ, ಅಲ್ಲಂ ಕರಿಬಸಪ್ಪ, ಎನ್. ತಿಪ್ಪಣ್ಣ, ಟಿ.ಎಸ್. ಶಿವನಾಗಪ್ಪ, ಗೊರ್ಲಿ ಶರಣಪ್ಪ, ಬಿ.ಎಸ್. ವೀರಭದ್ರಪ್ಪ, ಹಳೆ ಗುರುಪ್ಪ ಮುಂತಾದವರನ್ನು ಇಲ್ಲಿ ಸ್ಮರಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts