More

    ಸ್ತ್ರೀಭೂಣ ಹತ್ಯೆ ತಕ್ಷಣ ನಿಲ್ಲಲಿ; ಸಿರಿಗೆರೆ ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಒತ್ತಾಸೆ

    ಕೊಟ್ಟೂರು: ಹೆಣ್ಣು ಎಂಬ ಕಾರಣಕ್ಕೆ ಸಾವಿರಾರು ಭ್ರೂಣ ಹತ್ಯೆಯಾಗುತ್ತಿರುವುದನ್ನು ಸಮೀಕ್ಷೆಯೊಂದು ಬಹಿರಂಗ ಪಡಿಸಿದೆ. ಇದು ಇಡೀ ಮಾನವ ಜನಾಂಗ ತಲೆ ತಗ್ಗಿಸುವ ಅತ್ಯಂತ ಕ್ರೂರ ಕೆಲಸ. ಸ್ತ್ರೀಭೂಣ ಹತ್ಯೆ ತಕ್ಷಣ ನಿಲ್ಲಬೇಕು. ಹೆಣ್ಣಿಲ್ಲದೆ ಜಗತ್ತಿಲ್ಲ ಎಂಬ ವಾಸ್ತವವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಸಿರಿಗೆರೆ ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಕೊಟ್ಟೂರಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ಐದನೇ ದಿನವಾದ ಬುಧವಾರ ಆಯೋಜಿಸಿದ್ದ ಸಾಹಿತ್ಯ ಚಿಂತನಾ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಿತ್ತೂರುರಾಣಿ ಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಅನೇಕ ವಚನಗಾರ್ತಿಯರು ಹೆಣ್ಣಾಗಿ, ಸಮಾಜಕ್ಕೆ ಕಣ್ಣಾಗಿದ್ದಾರೆ ಎಂದರು. ತಾವು ರಚಿಸಿದ ‘ಅಮ್ಮ ನೀನಾದರೂ ಜೋಕೆ…’ ಕವಿತೆ ಓದಿದರು. ಇದು ಹೆಣ್ಣು ಭ್ರೂಣ ಹತ್ಯೆಯ ಬರ್ಬರತೆ ಮತ್ತು ಕರಾಳಮುಖವನ್ನು ಬಹಿರಂಗಪಡಿಸಿತು.

    ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ.ದೊಡ್ಡರಂಗೇಗೌಡ ಮಾತನಾಡಿ, ಈ ತರಳಬಾಳು ಹುಣ್ಣಿಮೆ ಮಹೋತ್ಸವ, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕಿಂತಲೂ ಮಿಗಿಲಾಗಿದೆ. ಕನ್ನಡದ ಒಂದೊಂದು ಶಾಸನ ಇಡೀ ಕನ್ನಡಿಗರ ಆದರ್ಶ ಬದುಕು, ಸಂಸ್ಕೃತಿ, ಸಂಸ್ಕಾರಕ್ಕೆ ಕನ್ನಡಿಯಂತಿದೆ. ಕನ್ನಡ ಸಾಹಿತ್ಯದಲ್ಲಿ ಜೈನ ಸಾಹಿತ್ಯ ಸರ್ವಧರ್ಮ ಸಹಿಷ್ಣುತೆಯನ್ನು ತೋರುತ್ತದೆ. 12ನೇ ಶತಮಾನದ ವಚನಗಳ ಕುರಿತು ಆಂಗ್ಲ ಸಾಹಿತ್ಯ ಕ್ಷೇತ್ರದಲ್ಲಿ ಬಹುವಿಧವಾಗಿ ಚರ್ಚೆಯಾಗುತ್ತಿದೆ. ವಚನಕಾರರನ್ನು ಸಮಾಜ ವಿಜ್ಞಾನಿಗಳೆಂದರೆ ತಪ್ಪಾಗಲಾದರು. ವಚನಗಳ ಸಾರದಿಂದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಡಾ.ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ ಆಧುನಿಕ ಬಸವೇಶ್ವರ ಎಂದು ಬಣ್ಣಿಸಿದರು.

    ಮಾಜಿ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ಸಮಾಜದ ಎಲ್ಲ ವರ್ಗದ ಸದ್ಭಕರಿಗೆ ತರಳ ಬಾಳು ಎಂದು ಆಶೀರ್ವದಿಸುವ ವಿಶೇಷ ಮಹೋತ್ಸವ ಇದು ಎಂದರು. ನಾಡೋಜ ಡಾ. ದೊಡ್ಡರಂಗೇಗೌಡ ರಚಿಸಿರುವ ‘ಪಿರಿಮಿಡ್‌ಗಳ ಪರಿಸರದಲ್ಲಿ’ ಕೃತಿಯನ್ನು ಬಿಡುಗಡೆ ಮಾಡಿದ ಹನಿಗವಿ ಧುಂಡಿರಾಜ್ ಮಾತನಾಡಿ, ವಚನ ಸಾಹಿತ್ಯ ಚುಟುಕು ಸಾಹಿತ್ಯಕ್ಕೆ ಬಹುದೊಡ್ಡ ಸ್ಪೂರ್ತಿಎಂದರು.

    ಡಾ.ಮೃತ್ಯುಂಜಯ ರುಮಾಲೆ ಮಾತನಾಡಿ, ವಚನ ಸಾಹಿತ್ಯ ಅಪರೂಪವಾದದ್ದು. ಇದು ಒಂದು ಕಾಲ ಘಟ್ಟಕ್ಕೆ ಸೀಮಿತವಾಗಿಲ್ಲ. ಇಂದಿನ ನೂರಾರು ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ. ‘ಉಳ್ಳುವರು ಶಿವಾಲಯ ಮಾಡುವರಯ್ಯ…’ ಎಂಬ ವಚನ 150 ವಿಶ್ಲೇಷಣೆಗೆ ಒಳಗಾಗಿದೆ ಎಂದರೆ ಆ ವಚನಕ್ಕೆ ಇರುವ ಅದಮ್ಯ ಶಕ್ತಿ ಎಂಥದ್ದು ಎಂದು ತಿಳಿದು ಬರುತ್ತದೆ ಎಂದರು.

    ಶಿವಮೊಗ್ಗ ಕ್ರೈಸ್ತಧರ್ಮಾಧ್ಯಕ್ಷ ಡಾ.ಎಸ್.ಜೆ. ಫ್ರಾನ್ಸಿಸ್ ಸೆರಾವೋ ಆಶೀರ್ವಚನ ನೀಡಿದರು. ಕನ್ನಡ ಹಾಸ್ಯಭಾಷಣಕಾರರು ಮತ್ತು ಜೀವನದಲ್ಲಿ ಹಾಸ್ಯ ಕುರಿತು ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಮತನಾಡಿ, ಸಭಿಕರನ್ನು ನಗಿಸಿದರು.

    ಸ್ವಾಗತ ಸಮಿತಿ ಅಧ್ಯಕ್ಷ ಡಾ.ಬಿ.ಸಿ ಮೂಗಪ್ಪ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ, ಶೆಟ್ಟಿ ತಿಂದಪ್ಪ ಇತರರು ಇದ್ದರು. ತರಳಬಾಳು ಕಲಾ ಸಂಘದಿಂದ ಗಾರ್ಬ ನೃತ್ಯ, ಶ್ರೀ ಚನ್ನಪ್ಪ ಫಕ್ಕೀರಪ್ಪ ಗುಂಜಾಳ್ ಪ್ರೌಢ ಶಾಲೆ ವಿದ್ಯಾರ್ಥಿಗಳು ದೊಡ್ಡಾಟವನ್ನು ಪ್ರದರ್ಶಿಸಿದರು. ಸಿರಿಗೆರೆ ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವಚನ ನೃತ್ಯ ಪ್ರದರ್ಶನ ನಡೆಯಿತು. 7ನೇ ತರಗತಿ ವಿದ್ಯಾರ್ಥಿನಿ ಯು.ಶುಭಶ್ರೀ ಕೋಟೆ, ಪುರಾತನ ಸಾಹಿತ್ಯ ಕುರಿತು ಭಾಷಣ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts