More

    ಕೊಡುವವರ ನಾಡೇ ಕೊಟ್ಟೂರು

    ಕೊಟ್ಟೂರು: ಕೊಡುವವರು ಹೆಚ್ಚಿರುವ ನಾಡೇ ಕೊಟ್ಟೂರು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತ ಕುಂ. ವೀರಭದ್ರಪ್ಪ ಹೇಳಿದರು.

    ಪಟ್ಟಣದಲ್ಲಿ ಬೀಡು ಬಿಟ್ಟಿರುವ ಜೇವರ್ಗಿ ರಾಜಣ್ಣ ಅವರ ನಾಟಕ ಕಂಪನಿಯ ಯಶಸ್ವಿ ‘ರೈತ ಮನೆತನ ಅರ್ಥಾತ ಕುಡುಕ ಮಲ್ಲ ಸಿಡುಕು ಮಲ್ಲಿ’ ನಾಟಕದ 31 ಪ್ರಯೋಗದ ವೀಕ್ಷಣೆಗೆ ಶುಕ್ರವಾರ ರಾತ್ರಿ ಆಗಮಿಸಿ ಮಾತನಾಡಿದರು. ಕೊಟ್ಟೂರು ಕಲಾ ಆರಾಧಕರ ತವರು. ಸಾಹಿತಿಗಳು, ಸಂಸ್ಕೃತಿಯನ್ನು ಪೋಷಿಸಿದ ಶರಣರ ನಾಡು. ಇಲ್ಲಿ ಕೊಡುವವರೇ ಹೆಚ್ಚಿರುವುದರಿಂದ ಈ ಊರಿಗೆ ಕೊಟ್ಟೂರೆಂದು ಹೆಸರು ಬಂದಿದೆ ಎಂದರು.

    ಜಿ.ವಿ. ಅಯ್ಯರ್ ಅವರ ನಾಟಕ ಕಂಪನಿ ಸಂಕಷ್ಟದಲ್ಲಿದ್ದಾಗ, ಕೊಟ್ಟೂರಿಗೆ ಬಂದು ತಿಂಗಳಕಾಲ ಪ್ರದರ್ಶಿಸಿ ಸಮೃದ್ಧಿ ಹೊಂದಿದ್ದನ್ನು ಡಾ. ರಾಜಕುಮಾರ್ ನಮ್ಮ ಮುಂದೆ ನೆನಪುಮಾಡಿದ್ದನ್ನು ಕುಂವೀ ಈ ಸಂದರ್ಭದಲ್ಲಿ ಸ್ಮರಿಸಿದರು. ಇಷ್ಟೇ ಅಲ್ಲ ರಾಜಕುಮಾರ್ ನಾಟಕ ಕಂಪನಿಯಲ್ಲಿದ್ದಾಗ ಪ್ರತಿ ದಿನ ಬೆಳಗ್ಗೆ ಶ್ರೀ ಕೊಟ್ಟೂರೇಶ್ವರ ಸ್ವಾಮಿ ದರ್ಶನ ಮಾಡಿ, ನನ್ನ ಮತ್ತು ಕಂಪನಿ ಮೇಲೆ ಆಶೀರ್ವಾದವಿರಲೆಂದು ಪ್ರಾರ್ಥಿಸುತ್ತಿದ್ದರೆಂದು ತಿಳಿಸಿದರು.

    ಕಳೆದ ಎಂಬ್ಬತ್ತು ದಶಕಗಳಿಂದಲೂ ಕೊಟ್ಟೂರು ಹಾಗೂ ಸುತ್ತಮುತ್ತಲ ಗ್ರಾಮೀಣ ಜನರು ಕೊಟ್ಟೂರೇಶ್ವರ ಸ್ವಾಮಿ ಜಾತ್ರೆಗೆ ಬರುವ ನಾಟಕ ಕಂಪನಿಗಳಿಗೆ ಪ್ರೋತ್ಸಾಹ ಕೊಡುತ್ತಾ ಬಂದಿದ್ದಾರೆ. ಮುಂದೆನೂ ಕೊಡುತ್ತಾರೆ ಎಂದು ಆಶಯ ವ್ಯಕ್ತಪಡಿಸಿದರು.

    ಜೇವರ್ಗಿ ರಾಜಣ್ಣ ಕಳೆದ 35 ವರ್ಷಗಳಿಂದ ಕಲಾವಿದರಾಗಿ, ನಾಟಕ ಕಂಪನಿ ಕಟ್ಟಿ ಯಶಸ್ವಿ ನಾಟಕಗಳನ್ನು ಬರೆದು ಪ್ರೇಕ್ಷರನ್ನು ರಂಜಿಸಿರುವುದಲ್ಲದೆ, ಸಮಾಜಕ್ಕೆ ಉತ್ತಮ ಸಂದೇಶವನ್ನೂ ತಮ್ಮ ನಾಟಕಗಳ ಮೂಲಕ ನೀಡಿದ್ದಾರೆ. ಇಂತಹ ಅನುಭವಿಗಳನ್ನು ಸರ್ಕಾರ ನಾಟಕ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

    ನಮ್ಮೂರಿನಲ್ಲಿದ್ದ ಸಿನಿಮಾ ಟಾಕೀಸ್‌ಗಳು ಬಂದ್ ಆಗಿವೆ. ಆದ್ದರಿಂದ ಪಟ್ಟಣದಲ್ಲಿ ಸುಸಜ್ಜಿತ ನಾಟಕ ಮಂದಿರವನ್ನು ಜನಪ್ರತಿನಿಧಿಗಳು ಸ್ಥಾಪಿಸಿದರೆ, ಇಲ್ಲಿ ಸದಾ ನಾಟಕಗಳ ಪ್ರದರ್ಶನವಾಗುತ್ತವೆ. ಕಲಾವಿದರು ಮತ್ತು ನಾಟಕ ಕಂಪನಿಗಳು ಬದುಕುತ್ತವೆ ಎಂದರು.

    ನಾಟಕ ಕಂಪನಿ ಮಾಲೀಕ, ನಟ, ನಾಟಕಕಾರ ಜೀವರ್ಗಿ ರಾಜಣ್ಣ ಮಾತನಾಡಿ, ಇತ್ತೀಚಿಗೆ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ನಾವು ನಾಟಕಗಳನ್ನು ರಚಿಸಬೇಕಿದೆ. ರಂಗಭೂಮಿ ಕಲಾವಿದರ ಕೊರತೆಯೂ ಹೆಚ್ಚಾಗಿದೆ. ಇದಕ್ಕೆ ಮೊಬೈಲ್, ವಾಟ್ಸ್‌ಆ್ಯಪ್ ಕಾರಣವಾಗಿದೆ. ನಮ್ಮ ಕಂಪನಿ ಆಶ್ಲೀಲ ಪದಗಳನ್ನಾಗಲಿ, ದ್ವಂದಾರ್ಥದ ಶಬ್ದಗಳನ್ನು ನಾಟಕದಲ್ಲಿ ಬಳಸುವುದಿಲ್ಲ. ಮೇಲಾಗಿ ಐಟಂ ಸಾಂಗ್ ಇಲ್ಲ. ಇಡೀ ಕುಟುಂಬ ಯಾವುದೇ ಸಂಕೋಚವಿಲ್ಲದೆ ವೀಕ್ಷಿಸಿ ನಕ್ಕು ಮನಸಂತೋಷಗೊಂಡು ಹೋಗುವಂತಹ ನಾಟಕಗಳನ್ನು ಮಾತ್ರ ನಾವು ಪ್ರದರ್ಶನ ಮಾಡುತ್ತೇವೆ ಎಂದರು.

    ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎಂ. ಪ್ರಕಾಶ, ಉಪಾಧ್ಯಕ್ಷ ಜಂಬೂರು ಮರುಳಸಿದ್ದಪ್ಪ, ಜಿಲ್ಲಾ ಗೌರವಾಧ್ಯಕ್ಷ ಚಪ್ಪರದಹಳ್ಳಿ ಕೊಟ್ರೇಶಪ್ಪ, ಬಂಡ್ರಿ ಹನುಮಂತಪ್ಪ, ಭೀಮಣ್ಣ, ಬಿ.ಎಂ. ಅಜ್ಜಯ್ಯ, ಎ. ಸಿದ್ದೇಶ, ಲಕ್ಷ್ಮೀದೇವಿ, ಎಂ. ಮಂಜುನಾಥ, ಬಸವರಾಜ, ಕೆಂಚಪ್ಪ, ಕುಬೇರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts