More

    ಸಕ್ಕರೆನಾಡಲ್ಲಿ ಕೋಟಿ ಕಂಠಕ್ಕೆ ದನಿಯಾದ ಜನರು: ಸರ್ಕಾರಿ ಕಚೇರಿಗಳಲ್ಲೂ ಕಾರ್ಯಕ್ರಮ

    ಮಂಡ್ಯ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ‘ಕೋಟಿ ಕಂಠ ಗಾಯನಕ್ಕೆ’ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
    ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು(ಕಲ್ಲುಕಟ್ಟಡ)ದ ಹೊರಾವರಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕೋಟಿ ಕಂಠ ಗಾಯನಕ್ಕೆ ವಿವಿಧ ಕಾಲೇಜಿನ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದನಿಯಾದರು. ಇವರಿಗೆ ಹಲವು ಸಂಘಟನೆಗಳ ಪದಾಧಿಕಾರಿಗಳು ಸಾಥ್ ನೀಡಿದರು.
    ಎಲ್ಲರೂ ಒಟ್ಟಾಗಿ ಜಯ ಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವ, ಉದಯವಾಗಲಿ ನಮ್ಮ ಚಲುವ ಕನ್ನಡನಾಡು, ವಿಶ್ವ ವಿನೂತನ ವಿದ್ಯಾ ಚೇತನ, ಹಚ್ಚೇವು ಕನ್ನಡದ ದೀಪ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಹಾಡುವ ಮೂಲಕ ಹೊಸ ದಾಖಲೆ ಬರೆದರು. ಎಲ್ಲರಿಂದಲೂ ಸಂಕಲ್ಪ ವಿಧಿ ಸ್ವೀಕರಿಸಲಾಯಿತು. ನೋಂದಣಿಯನ್ನೂ ಮೀರಿ ಒಟ್ಟಾರೆ ಸುಮಾರು ನಾಲ್ಕು ಲಕ್ಷ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸರ್ಕಾರಿ ಕಚೇರಿ, ಶಾಲೆಗಳಲ್ಲಿಯೂ ಗಾಯನ ನಡೆಯಿತು.
    ಉಪವಿಭಾಗಾಧಿಕಾರಿ ಆರ್.ಐಶ್ವರ್ಯಾ, ತಹಸೀಲ್ದಾರ್ ಕುಂಞ ಅಹಮದ್, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಡಿಡಿಪಿಐ ಎಸ್.ಟಿ.ಜವರೇಗೌಡ ಇತರರಿದ್ದರು.
    ಕನ್ನಡ ನಮ್ಮ ಅಸ್ಮಿತೆ: ನಗರದ ಜಿಲ್ಲಾ ಬಾಲಭವನದಲ್ಲಿ ಆಯೋಜಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮಾತನಾಡಿ, ಕನ್ನಡ ಭಾಷೆಯನ್ನು ಬಳಸುವುದರ ಮೂಲಕ ಕನ್ನಡ ಘನತೆ-ಅಸ್ಮಿತೆ ಬೆಳೆಸುವುದು ಅವಶ್ಯಕ. ರಾಜ್ಯ ಸರ್ಕಾರ ಕೋಟಿ ಕಂಠ ಗಾಯನ ಅಭಿಯಾನವನ್ನು ಆಚರಿಸಲು ಕರೆ ಕೊಟ್ಟ ಹಿನ್ನೆಲೆಯಲ್ಲಿ ವಿಶ್ವದ ವಿವಿಧ ರಾಷ್ಟ್ರಗಳಲ್ಲಿರುವ ಕೋಟಿ ಕೋಟಿ ಕನ್ನಡಿಗರು ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದು ನುಡಿದರು.
    ಜಿಲ್ಲಾ ಗಾಯಕರ ಟ್ರಸ್ಟ್ ಅಧ್ಯಕ್ಷ ಡಾ.ಮಾದೇಶ್ ಮಾತನಾಡಿ, ಯಾವುದೇ ಭಾಷೆ ಉಳಿವಿಗೆ ಪದಗಳ ಬಳಕೆ ಮಾಡುವುದು ಬಹಳ ಮುಖ್ಯ. ಕನ್ನಡ ಭಾಷೆಗೆ ಐತಿಹ್ಯ ಹಾಗೂ ವೈಭವವಿದೆ. ಮಾತನಾಡಿದಂತೆ ಬರೆಯುವ ಅಕ್ಷರಗಳಿವೆ. ಹೆಚ್ಚು ಹೆಚ್ಚು ಕನ್ನಡ ಪದಗಳನ್ನು ಬಳಸಿದರೆ ಬೆಳೆಯುತ್ತ ಉಳಿದುಕೊಳ್ಳುತ್ತದೆ ಎಂದು ನುಡಿದರು.
    ಬಿಜೆಪಿ ನಗರಾಧ್ಯಕ್ಷ ವಿವೇಕ್, ಜಿಲ್ಲಾ ಮಾಜಿ ಅಧ್ಯಕ್ಷ ಎಚ್.ಪಿ.ಮಹೇಶ್, ಶಿವಕುಮಾರ್, ಕೆಂಪಯ್ಯ, ಪ್ರಸನ್ನ, ಗಾಯಕರಾದ ಹನಿಯಂಬಾಡಿ ಶೇಖರ್, ವೈರಮುಡಿ, ಯರಹಳ್ಳಿ ಪುಟ್ಟಸ್ವಾಮಿ, ನೀನಾ ಪಟೇಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts