More

    ಸ್ವಚ್ಛ ಕೋಟೆಕಾರ್‌ಗೆ ಸುಭದ್ರ ಅಡಿಪಾಯ

    ಅನ್ಸಾರ್ ಇನೋಳಿ ಉಳ್ಳಾಲ
    ಸ್ವಚ್ಛತಾ ಜಾಗೃತಿ ದಿನದಿಂದ ದಿನಕ್ಕೆ ತ್ವರಿತಗತಿಯಲ್ಲಿ ಮುನ್ನಡೆಯುತ್ತಿದೆ. ಎಲ್ಲ ಭಾಗಗಳಲ್ಲೂ ಸ್ವಚ್ಛತಾ ಪ್ರೇಮಿಗಳು ಸೃಷ್ಟಿಯಾಗುತ್ತಿದ್ದಾರೆ. ಅದರ ಭಾಗವಾಗಿ ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ-ಉಪಾಧ್ಯಕ್ಷೆ ಮತ್ತು ಅಧಿಕಾರಿಗಳ ತಂಡ ಗುರುವಾರ ಬಾಳೆಪುಣಿಯಲ್ಲಿ ರೌಂಡ್ ಹೊಡೆದಿದೆ.
    ಉಳ್ಳಾಲ ವ್ಯಾಪ್ತಿಯಲ್ಲಿ ನಗರಸಭೆ, ಸೋಮೇಶ್ವರ ಪುರಸಭೆ ಹಾಗೂ ಕೋಟೆಕಾರ್ ಪಟ್ಟಣ ಪಂಚಾಯಿತಿಯಲ್ಲಿ ಮನೆ ಮನೆ ಕಸ ಸಂಗ್ರಹ ವಾಹನದ ವ್ಯವಸ್ಥೆ ಇದೆ. ಆದರೆ ಇಲ್ಲೇ ಕಸ ನಿರ್ವಹಿಸುವ ವ್ಯವಸ್ಥೆ ಇಲ್ಲ. ಮಂಗಳೂರು ಮಹಾನಗರ ಪಾಲಿಕೆ ಜತೆ ಹೊಂದಾಣಿಕೆಯೊಂದಿಗೆ ಇಲ್ಲಿಂದಲೂ ತ್ಯಾಜ್ಯ ಪಚ್ಚನಾಡಿ ಸೇರುತ್ತಿದೆ. ಆದರೆ ಇತ್ತೀಚೆಗೆ ಮನಪಾ ಸಭೆಯಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿರುವುದರಿಂದ ಆಯಾ ಸ್ಥಳೀಯಾಡಳಿತಗಳು ತಮ್ಮ ವ್ಯಾಪ್ತಿಯಲ್ಲೇ ತ್ಯಾಜ್ಯ ನಿರ್ವಹಣೆ ಮಾಡುವುದು ಅನಿವಾರ್ಯ ಎನಿಸಿದೆ. ಜಾಗದ ಸಮಸ್ಯೆ, ವಿರೋಧಗಳು ಈ ಪ್ರಕ್ರಿಯೆಗೆ ಅಡ್ಡಿಯಾಗಿವೆ ಎನ್ನುವುದೂ ಸತ್ಯ.

    ಕೋಟೆಕಾರ್ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ 45 ಸೆಂಟ್ಸ್ ಜಮೀನಿನಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಆಗುತ್ತಿದ್ದು ಮುಂದಿನ ತಿಂಗಳು ಆರಂಭಗೊಳ್ಳುವ ನಿರೀಕ್ಷೆ ಇದೆ. ಆದರೂ ಜನರಲ್ಲಿ ಗೊಂದಲ, ಆತಂಕ ಇದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಹಸಿ ಮತ್ತು ಒಣ ಕಸ ನಿರ್ವಹಣೆ ಮಾಡಿದರೆ ಸ್ಥಳೀಯಾಡಳಿತಕ್ಕೆ ದೊಡ್ಡ ಟೆನ್ಶನ್ ಕಡಿಮೆಯಾಗಲಿದೆ. ಇದಕ್ಕಾಗಿ ಕಾರ್ಯಪ್ರವೃತ್ತರಾಗಿರುವ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

    ಅಧಿಕಾರಿಗಳ ತಂಡ: ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಪ್ರಫುಲ್ಲ ದಾಸ್, ಉಪಾಧ್ಯಕ್ಷೆ ಭಾರತಿ ರಾಘವ, ಆರೋಗ್ಯ ನಿರೀಕ್ಷಕ ವಿಕ್ರಂ, ಹಿರಿಯ ಅಭಿಯಂತ ದಿನೇಶ್, ಕಾಮಗಾರಿ ನಿರ್ವಾಹಕ ಆನಂದ್ ಬಾಬು, ಪ್ರಭಾರ ಕಂದಾಯ ನಿರೀಕ್ಷಕ ರವಿ ಕೊಂಡಾಣ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಶೀನ ಶೆಟ್ಟಿ, ಕೃಷ್ಣ ಮೂಲ್ಯ ಮೊದಲಾದವರು ತಂಡದಲ್ಲಿದ್ದರು.

    ಜನಶಿಕ್ಷಣ ಟ್ರಸ್ಟ್ ಮಾರ್ಗದರ್ಶನ: ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅಧಿಕಾರಿಗಳು ಜನಶಿಕ್ಷಣ ಟ್ರಸ್ಟ್ ಮಾರ್ಗದರ್ಶನಕ್ಕೆ ಮೊರೆ ಹೋಗಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಅಜ್ಜಿನಡ್ಕ ನಿವಾಸಿ ಜಮಾಲ್ ಮುತುವರ್ಜಿಯಲ್ಲಿ ಮೊದಲ ಹಂತದಲ್ಲಿ ಈ ಪರಿಸರದ ಮನೆಗಳಲ್ಲೇ ಕಸ ನಿರ್ವಹಣೆ ಮಾಡುವ ಮೂಲಕ ಸ್ವಚ್ಛತೆಯಲ್ಲಿ ಮಾದರಿಯಾಗಿಸುವ ಪಣ ತೊಡಲಾಗಿದೆ. ಇದಕ್ಕೆ ಜನಶಿಕ್ಷಣ ಟ್ರಸ್ಟ್, ಪಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಾಥ್ ನೀಡಿದ್ದಾರೆ. ಪ್ರಥಮ ಹಂತದ ಸಭೆ ಕಳೆದ ವಾರ ಅಜ್ಜಿನಡ್ಕ ಶಾಲೆಯಲ್ಲಿ ನಡೆದಿದ್ದು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸ್ವಚ್ಛತೆಗೆ ಸಹಕಾರ ಘೋಷಿಸಿದ್ದಾರೆ. ಇದೇ ಉತ್ಸಾಹದಲ್ಲಿ ಮನೆಯಲ್ಲೇ ತ್ಯಾಜ್ಯ ನಿರ್ವಹಣೆ ಹೇಗೆನ್ನುವುದನ್ನು ಅರಿಯಲು ಬಾಳೆಪುಣಿ ಗ್ರಾಮವನ್ನು ಮಾದರಿಯಾಗಿಟ್ಟುಕೊಂಡು ಗುರುವಾರ ಗ್ರಾಮಕ್ಕೆ ಸುತ್ತಾಡಿದ್ದಾರೆ. ಬಾಳೆಪುಣಿ ಪಂಚಾಯಿತಿ ಆವರಣದಲ್ಲಿರುವ ಕಸ ನಿರ್ವಹಣಾ ಘಟಕ, ಸ್ವಚ್ಛತಾ ಪ್ರೇಮಿಗಳಾದ ಇಸ್ಮಾಯಿಲ್, ಗರಡಿಪಳ್ಳದ ಸ್ವ ಉದ್ಯೋಗಿ ವಿದ್ಯಾ, ಸೆಮಿಮಾ ಇವರ ಮನೆ, ಅನಂಗಾ ಅಂಗನವಾಡಿ, ಹೂಹಾಕುವ ಕಲ್ಲು ಶಾಲಾ ಪರಿಸರ ಹೀಗೆ ಗ್ರಾಮದಲ್ಲಿರುವ ಮಾದರಿ ಮನೆಗಳಿಗೆ ಭೇಟಿ ಕೊಟ್ಟು ಪ್ರೇರಣೆ ಪಡೆದಿದ್ದಾರೆ. ಇಸ್ಮಾಯಿಲ್ ತಮ್ಮ ಮನೆಯಲ್ಲಿ ನಿರ್ಮಿಸಿದ ಇಂಗುಗುಂಡಿ, ದ್ರವ ಮತ್ತು ಹಸಿತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ಕೃಷಿ, ಸ್ವ ಉದ್ಯೋಗಕ್ಕಾಗಿ ಕುಕ್ಕುಟ ಸಾಕಣೆ, ತ್ಯಾಜ್ಯ ಸಂಪನ್ಮೂಲ, ಸೋಲಾರ್ ವ್ಯವಸ್ಥೆ ಬಗ್ಗೆ ತಂಡಕ್ಕೆ ಮಾಹಿತಿ ನೀಡಿದ್ದಾರೆ.

    ಸ್ವಚ್ಛತೆ ಬಗ್ಗೆ ಎಲ್ಲರಿಗೂ ಗೊತ್ತಿದ್ದರೂ ಅದನ್ನು ಇನ್ಯಾರಾದರೂ ಮಾಡಲಿ ಎಂಬ ಯೋಚನೆ ಮಾಡುತ್ತಿದ್ದೇವೆ. ಪರಿಸ್ಥಿತಿ ಬದಲಾಯಿಸುವ ಮುನ್ನ ಜನರ ಮನಸ್ಥಿತಿಯಲ್ಲಿ ಸ್ವಚ್ಛತೆ ಬಗ್ಗೆ ಕಲ್ಪನೆ ಮೂಡಿಸಬೇಕಾಗಿದೆ. ನಮ್ಮ ಊರು, ನಮ್ಮ ತ್ಯಾಜ್ಯ ನಮ್ಮ ಜವಾಬ್ದಾರಿ ಎನ್ನುವ ವಿಷಯ ಜನರಿಗೆ ತಿಳಿಸಿ, ಸ್ವಚ್ಛತೆಯಲ್ಲಿ ಕೋಟೆಕಾರ್ ಮಾದರಿಯಾಗಿಸುವ ಸಂಕಲ್ಪ ಮಾಡಿದ್ದೇವೆ.
    – ವಿಕ್ರಂ, ಆರೋಗ್ಯ ನಿರೀಕ್ಷಕ, ಕೋಟೆಕಾರ್ ಪಪಂ

    ಕೋಟೆಕಾರ್ ಸಂಪೂರ್ಣ ಸ್ವಚ್ಛಗೊಳಿಸಲು ಅಜ್ಜಿನಡ್ಕ ವಾರ್ಡ್ ಪ್ರಾಯೋಗಿಕವಾಗಿ ಕಾರ್ಯಪ್ರವೃತ್ತಗೊಳಿಸಲಿದ್ದೇವೆ. ಇಲ್ಲಿನ ಪ್ರತಿ ಮನೆಯವರಿಗೂ ಅರಿವು ಮೂಡಿಸುತ್ತೇವೆ. ಹತ್ತು ಮನೆಗಳಿಗೆ ಹಸಿತ್ಯಾಜ್ಯ ನಿರ್ವಹಣೆಗೆ ಬೇಕಾದ ವ್ಯವಸ್ಥೆ ಒದಗಿಸಿ ಕೊಡಲು ಸಿದ್ಧನಿದ್ದೇನೆ.
    – ಜಮಾಲ್ ಅಜ್ಜಿನಡ್ಕ, ಸ್ವಚ್ಛ ಅಜ್ಜಿನಡ್ಕ ಕಾರ್ಯಕ್ರಮ ರುವಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts