More

    ಸಭಾಪತಿ ಮೇಲೆ ಕಾಂಗ್ರೆಸ್ ಒತ್ತಡ, ಗೊಂದಲಕ್ಕೆ ‘ಕೈ’ ನೇರ ಹೊಣೆ ಎಂದ ಸಚಿವ ಕೋಟ

    ಉಡುಪಿ: ವಿಧಾನ ಪರಿಷತ್ ಸಭಾಪತಿ ಸ್ಥಾನದ ಬಗ್ಗೆ ಎಲ್ಲರಿಗೂ ಗೌರವವಿದೆ. ಆದರೆ ಕಾಂಗ್ರೆಸ್ ಸಭಾಪತಿಯವರನ್ನು ನಿಯಂತ್ರಿಸಿ ರಾಜಕಾರಣ ಮಾಡಿದ ಕಾರಣ ಈ ಸ್ಥಿತಿ ಉಂಟಾಗಿದೆ. ಈ ಗೊಂದಲಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದು ವಿಧಾನ ಪರಿಷತ್ ಸಭಾನಾಯಕ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೊತ್ತುವಳಿಯನ್ನು ಪುರಸ್ಕಾರ ಅಥವಾ ತಿರಸ್ಕಾರ ಮಾಡುವ ಅಧಿಕಾರ ಇರುವುದು ಸದನಕ್ಕೇ ಹೊರತು ಸಭಾಪತಿ ಪೀಠಕ್ಕೆ ಅಲ್ಲ. ಹೀಗಾಗಿ ತಕ್ಷಣ ಅವಿಶ್ವಾಸ ಗೊತ್ತುವಳಿ ಚರ್ಚೆ ಮತ್ತು ಮತದಾನಕ್ಕೆ ಅವಕಾಶ ನೀಡಬೇಕು ಎಂದರು.

    ವಿಧಾನ ಪರಿಷತ್ ರದ್ದತಿ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರಿಂದ ನೇರವಾಗಿ ಆಯ್ಕೆಯಾದ ವಿಧಾನಸಭಾ ಸದಸ್ಯರು ಕಾಯ್ದೆಗಳಿಗೆ ಒಪ್ಪಿಗೆ ಸೂಚಿಸಿ ವಿಧಾನ ಪರಿಷತ್‌ಗೆ ತಂದಾಗ ತಿರಸ್ಕಾರವೂ ಮಾಡದೆ, ಅನುಮೋದನೆಯೂ ನೀಡದೆ ಸದನ ಸಮಿತಿಗಳಿಗೆ ಒಪ್ಪಿಸಿ ಕಾಲಹರಣ ಮಾಡುವ ಇತ್ತೀಚಿನ ದಿನಗಳ ಪರಿಪಾಠ ಒಳ್ಳೆಯದಲ್ಲ. ವಿಧಾನ ಪರಿಷತ್ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಗೋಹತ್ಯೆ ನಿಷೇಧ ಕಾಯ್ದೆ ಕೆಳಮನೆಯಲ್ಲಿ ಅಂಗೀಕಾರವಾಗಿರುವುದರಿಂದ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತರುತ್ತೇವೆ ಎಂದರು.

    ಪ್ರತಿ ತಿಂಗಳು ಸಪ್ತಪದಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸಪ್ತಪದಿ ಪ್ರತೀ ತಿಂಗಳು ನಡೆಯಲಿದೆ. ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ತಲಾ ಎರಡು ದಿನ ನಡೆಯಲಿದೆ ಎಂದು ಸಚಿವ ಕೋಟ ತಿಳಿಸಿದರು.

    ಚುನಾವಣಾ ಬಹಿಷ್ಕಾರ ಫ್ಯಾಷನ್!
    ಚುನಾವಣೆ ಬಹಿಷ್ಕಾರ ಕೆಲವರಿಗೆ ಫ್ಯಾಶನ್ ಆಗಿದೆ ಎಂದು ಸಚಿವ ಕೋಟ ಹೇಳಿದರು. ಉಡುಪಿ ಜಿಲ್ಲೆಯ ಕೋಡಿ-ಕನ್ಯಾಣ ಗ್ರಾಪಂನಲ್ಲಿ ಚುನಾವಣಾ ಬಹಿಷ್ಕಾರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಹಳ ಒತ್ತಾಯ ಮಾಡುವ ಅನಿವಾರ್ಯತೆಯೂ ನಮಗಿಲ್ಲ. ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಲಿದೆ ಎಂದರು. ಆ ಭಾಗದ ಜನರ ಬೇಡಿಕೆಗೆ ಸರ್ಕಾರ ಉತ್ತಮ ರೀತಿಯಲ್ಲಿ ಸ್ಪಂದಿಸಿದೆ. ಕೋಡಿ ಬಂದರು ಹೂಳೆತ್ತುವ ಕಾಮಗಾರಿ ಸಂದರ್ಭ ಈ ಹೂಳನ್ನು ಸಮುದ್ರ ಮಧ್ಯದಲ್ಲಿ ಹಾಕಬೇಕು. ಆದರೆ ಗುತ್ತಿಗೆದಾರರು ದಡದಲ್ಲಿ ಹಾಕಿದ್ದಾರೆ. ಈ ಬಗ್ಗೆ ಹಸಿರುಪೀಠಕ್ಕೆ ದೂರು ಹೋಗಿ ತಡೆಯಾಜ್ಞೆ ಬಂದಿದೆ. ಮೀನುಗಾರಿಕಾ ದೋಣಿಗಳಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಹಸಿರು ಪೀಠಕ್ಕೆ ಮನವರಿಕೆ ಮಾಡಿ ಮತ್ತೆ ಹೊಸ ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ. 1 ವಾರದಲ್ಲಿ ಪೂರ್ಣಪ್ರಮಾಣದ ಅನುಮೋದನೆ ಲಭಿಸಲಿದೆ. ಅದೇ ರೀತಿ ಹಕ್ಕುಪತ್ರಗಳನ್ನು 18 ಜನರಿಗೆ ವಿತರಿಸಲಾಗಿದೆ. ಹಕ್ಕುಪತ್ರ ಶುಲ್ಕ ರಿಯಾಯಿತಿಗೆ ಮೀನುಗಾರರು ಕೋರಿಕೆ ಸಲ್ಲಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. ಸಚಿವ ಸಂಪುಟದಲ್ಲಿ ಅನುಮೋದನೆಗೆ 1-2 ತಿಂಗಳು ಅವಕಾಶ ಬೇಕಾಗಿದೆ. ಈ ಎಲ್ಲ ವಿಚಾರ ಚುನಾವಣೆ ಬಹಿಷ್ಕಾರಕ್ಕೆ ಕರೆಕೊಟ್ಟವರಿಗೆ ಗೊತ್ತಿದೆ ಎಂದರು.

    ಮೀನಿಗೆ ರಾಸಾಯನಿಕ ಬಳಕೆ ತನಿಖೆ: ಮೀನಿಗೆ ರಾಸಾಯನಿಕ ಸಿಂಪಡಣೆ ಮಾಡುವ ಬಗ್ಗೆ ದೂರುಗಳು ಬಂದಿವೆ. ಇಲಾಖೆ ಮೂಲಕ ತನಿಖೆ ಮಾಡುತ್ತೇವೆ. ಪಂಜರಕೃಷಿಯಲ್ಲಿ ವೈರಸ್‌ನಿಂದ ಮೀನುಗಳು ಸಾಯುತ್ತಿವೆ. ಈ ಬಗ್ಗೆ ಮೀನುಗಾರಿಕಾ ಕಾಲೇಜಿನ ತಜ್ಞರು ತಪಾಸಣೆ ಮಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts