More

    ನೇಕಾರಿಕೆಗೆ ಮತ್ತೆ ಆವರಿಸಿದ ಕರೊನಾ ಕರಿನೆರಳು

    ಮಲ್ಲು ಕಳಸಾಪುರ ಲಕ್ಷ್ಮೇಶ್ವರ
    ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕೃಷಿ ನಂತರ ನೇಕಾರಿಕೆಯೇ ಪ್ರಮುಖ ಉದ್ಯೋಗ. ನೇಕಾರಿಕೆ ನಂಬಿ ಬದುಕುತ್ತಿರುವ ಕುಟುಂಬಗಳ ಮೇಲೆ ಮತ್ತೆ ಕರೊನಾ 2ನೇ ಅಲೆಯ ಕರಿನೆರಳು ಆವರಿಸಿದೆ. ಇದರಿಂದ ನೇಕಾರರ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.
    ತಲೆಮಾರುಗಳಿಂದ ನೇಕಾರಿಕೆ ವೃತ್ತಿ ಮಾಡಿಕೊಂಡು ನೂರಾರು ಕುಟುಂಬಗಳು ಬದುಕು ಸಾಗಿಸಿಕೊಂಡು ಬಂದಿವೆ. ತಮ್ಮ ಹಿರಿಯರ ಕಾಲದಿಂದ ಕೈಮಗ್ಗದಿಂದ ನೇಯ್ಗೆ ಕೆಲಸ ಮಾಡುತ್ತ ಬಂದ ನೇಕಾರರು ಈಗ ವಿನೂತನ ಮಾದರಿಯಲ್ಲಿ ಪವರ್​ಲೂಮ್ಳಿಂದ ಪಾಲಿಸ್ಟರ್, ಕಾಟನ್ ಸೀರೆ ಇತರ ಉತ್ಪನ್ನಗಳ ನೇಯ್ಗೆ ಕೆಲಸ ಮಾಡುತ್ತಿದ್ದಾರೆ. ವರ್ಷದುದ್ದಕ್ಕೂ ತಮ್ಮ ಕುಟುಂಗಳೊಂದಿಗೆ ನೂರಾರು ಕೂಲಿಕಾರರು ಬದುಕು ಕಟ್ಟಿಕೊಳ್ಳಲು ಆಸರೆಯಾಗಿದ್ದಾರೆ.
    ನೇಕಾರಿಕೆಗೆ ಹೆಸರಾದ ಶಿಗ್ಲಿ: ಶಿಗ್ಲಿ ಗ್ರಾಮದಲ್ಲಿ 300ಕ್ಕೂ ಹೆಚ್ಚು ನೇಕಾರಿಕೆ ಕುಟುಂಬಗಳಿವೆ. 1000 ಸಂಖ್ಯೆಯಷ್ಟು ಪವರಲೂಮ್ಳು (ವಿದ್ಯುತ್ ಕೈಮಗ್ಗ) ಕಾರ್ಯ ನಿರ್ವಹಿಸುತ್ತವೆ. ನೇಕಾರ ಕುಟುಂಬಗಳನ್ನು ಹೊರತುಪಡಿಸಿ ಪರೋಕ್ಷವಾಗಿ 400ಕ್ಕೂ ಹೆಚ್ಚು ಕೂಲಿಕಾರರು ಬದುಕು ಸಾಗಿಸುತ್ತಿದ್ದಾರೆ. ಸದ್ಯ ಬೇಡಿಕೆ ಕುಸಿದಿದ್ದರಿಂದ ಕಾಯಂ ಕೂಲಿಕಾರರಿಗೆ ಕೆಲಸ ಕೊಡುವ ಅನಿವಾರ್ಯತೆ ನೇಕಾರಿಕೆ ಕುಟುಂಬದವರದ್ದಾಗಿದೆ. ಹುಬ್ಬಳ್ಳಿ, ರಾಮದುರ್ಗ, ಬೆಳಗಾವಿಯಿಂದ ಕಚ್ಚಾನೂಲು ತರಲಾಗುತ್ತದೆ. ಮೊದಲು 5 ಕೆಜಿ (1 ಮೂಟೆ) ತೂಕದ ಕಚ್ಚಾನೂಲಿಗೆ 2700ರಿಂದ 3000 ರೂಪಾಯಿ ಇತ್ತು. ಈಗ 4500-4600 ರೂಪಾಯಿವರೆಗೆ ದರವಿದೆ. 1 ಸೀರೆಗೆ ಗುಣಮಟ್ಟಕ್ಕೆ ತಕ್ಕಂತೆ 450ರಿಂದ 550 ರೂಪಾಯಿಗೆ ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಬೆಂಗಳೂರು, ಗಂಗಾವತಿ ಸೇರಿ ದೊಡ್ಡ ದೊಡ್ಡ ಪಟ್ಟಣಗಳ ವ್ಯಾಪಾರಸ್ಥರು ಖರೀದಿಸುತ್ತಿದ್ದರು.
    ಈಗ ಕಚ್ಚಾನೂಲಿನ ದರ ಹೆಚ್ಚಳ, ಆಳಿನ ಪಗಾರ, ವಿದ್ಯುತ್, ಸಾಗಣೆ ವೆಚ್ಚ ಲೆಕ್ಕ ಹಾಕಿದರೆ ಲಾಭಾಂಶ ಇಲ್ಲದಂತಾಗಿದೆ. ಹೀಗಾಗಿ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿದೆ. ಆದರೆ, ಹಳೆಯ ದರಕ್ಕೂ ಸೀರೆ ಖರೀದಿಸಲು ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ.
    ಗಾಯದ ಮೇಲೆ ಬರೆ: ಏಪ್ರಿಲ್, ಮೇ ತಿಂಗಳಲ್ಲಿ ಮದುವೆ ಇತರ ಶುಭ ಕಾರ್ಯಗಳಿಗೆ ಮುಹೂರ್ತಗಳು ಹೆಚ್ಚಾಗಿರುವುದರಿಂದ ಬಟ್ಟೆಗಳಿಗೆ ಬೇಡಿಕೆ ಇರುತ್ತಿತ್ತು. ಆದರೀಗ ಕರೊನಾ ಕರಿನೆರಳು ಆವರಿಸಿದ್ದರಿಂದ ಜೀವನ ನಿರ್ವಹಣೆ ದುಸ್ತರವಾಗಿದೆ. ರಾಜ್ಯಾದ್ಯಂತ ಬಟ್ಟೆ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಮದುವೆ ಮತ್ತಿತರ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಸಾರಿಗೆ ಸಂಪರ್ಕದಲ್ಲೂ ವ್ಯತ್ಯಯವಾಗಿದೆ.
    ಬಟ್ಟೆಗಳಿಗೆ ಬೇಡಿಕೆ ಇಲ್ಲದ್ದರಿಂದ ನೇಯ್ಗೆ ಕೆಲಸ ಕುಂಟುತ್ತ ಸಾಗಿದೆ. ಈಗಾಗಲೇ ಸಿದ್ಧಪಡಿಸಿದ ಸೀರೆಗಳ ವ್ಯಾಪಾರವೂ ನಿಂತಿದೆ. ಉತ್ಪನ್ನಗಳು ಮೂಲೆ ಸೇರಿ ಬಂಡವಾಳ, ಬದುಕು ನಿಂತ ನೀರಾಗಿದೆ. ಈ ಮೊದಲು ಉದ್ರಿ ಕೊಟ್ಟ ಹಣವೂ ವಾಪಸ್ ಬಾರದೆ, ಸೀರೆ ಮತ್ತಿತರ ಉತ್ಪನ್ನಗಳೂ ಮಾರಾಟವಾಗದೆ, ಕಾಯಂ ಕೂಲಿಕಾರರನ್ನು ಕೈಬಿಡದ ಮತ್ತು ಜೀವನ ನಿರ್ವಹಣೆಗೆ ಕಷ್ಟಪಡಬೇಕಾದ ಪರಿಸ್ಥಿತಿ ನೇಕಾರ ಕುಟುಂಬದವರದ್ದಾಗಿದೆ.
    ಇತರ ಉದ್ಯೋಗದತ್ತ ಮುಖ
    ಲಕ್ಷ್ಮೇಶ್ವರ ಪಟ್ಟಣದಲ್ಲೂ ಹತ್ತಾರು ನೇಕಾರಿಕೆ ಕುಟುಂಬಗಳಿವೆ. ನಿರ್ವಹಣೆ ವೆಚ್ಚ ಹೆಚ್ಚಳ, ಆಳಿನ ಸಮಸ್ಯೆ, ದುಡಿಮೆಗೆ ತಕ್ಕ ಪ್ರತಿಫಲ ಇಲ್ಲದ್ದರಿಂದ ಈ ಕುಟುಂಬದವರು ಇತರ ಉದ್ಯೋಗಗಳತ್ತ ಮುಖ ಮಾಡಿದ್ದಾರೆ.

    ಕಳೆದ ವರ್ಷ ಲಾಕ್​ಡೌನ್ ಸಂಕಷ್ಟದಿಂದ ಹೊರಬರುವ ಮೊದಲೇ ಮತ್ತೆ ಕರೊನಾ 2ನೇ ಅಲೆ ಕರಿನೆರಳು ನೇಕಾರಿಕೆ ಉದ್ಯಮದ ಮೇಲೆ ಆವರಿಸಿದೆ. ನೇಕಾರಿಕೆ ವೃತ್ತಿ ಬಿಟ್ಟು ಬೇರೇನೂ ಆಧಾರವಿಲ್ಲದ ಬಹುತೇಕ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಶಿಗ್ಲಿ ಸೀರೆಗಳಿಗೆ ಡಿಮಾಂಡ್ ಇದ್ದರೂ ಕಚ್ಚಾನೂಲಿನ ದರ ಹೆಚ್ಚಳ, ಲಾಕ್​ಡೌನ್​ನಿಂದ ವ್ಯಾಪಾರ ಸ್ಥಗಿತದಿಂದ ನೇಕಾರರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ನೇಕಾರರ ಹಿತ ಕಾಪಾಡಲು ಕಚ್ಚಾನೂಲಿನ ದರ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ನೇಕಾರಿಕೆ ಉತ್ಪನ್ನಗಳ ಪ್ರೋತ್ಸಾಹಕ್ಕಾಗಿ ಸರ್ಕಾರವೇ ಉತ್ಪನ್ನ ಖರೀದಿಸಿ ಬಡವರಿಗೆ, ಕೃಷಿ, ಅಸಂಘಟಿತ ಕೂಲಿಕಾರ್ವಿುಕರಿಗೆ ವಿತರಿಸಲು ವಿಶೇಷ ಯೋಜನೆ ರೂಪಿಸಬೇಕು.
    | ವೀರಣ್ಣ ಪವಾಡದ, ದೇವರಾಜ ಬೆಟಗೇರಿ, ನೇಕಾರಿಕೆ ವೃತ್ತಿ ಅವಲಂಬಿತರು

    ಕರೊನಾ 2ನೇ ಅಲೆಯಿಂದಾಗಿ ಕೈಮಗ್ಗ ನೇಕಾರರ ಬದುಕು ಮತ್ತೆ ಅತಂತ್ರವಾಗಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ನೇಕಾರ ಸಮ್ಮಾನ ಯೋಜನೆಯಡಿ 2 ಸಾವಿರ ರೂಪಾಯಿ ಸಹಾಯಧನ ನೀಡಲಾಗಿತ್ತು. ಈ ವರ್ಷವೂ ಈ ಸಹಾಯಧನ ಮತ್ತು ನೇಕಾರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ ಕರೊನಾ ಸೇನಾನಿಗಳು, ಬಡ ಕೂಲಿಕಾರರಿಗೆ ಕೊಡುವ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾಪವಿದ್ದು, ಆರ್ಥಿಕ ಇಲಾಖೆಯಿಂದ ಅನುಮೋದನೆಯಾಗಬೇಕು.
    | ಡಿ.ಡಿ. ನೆಗಳೂರ ಉಪನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಗದಗ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts