More

    ಕೊರಗರ ಪರಿಹಾರ ಹಣ ನುಂಗಿದ ಮಧ್ಯವರ್ತಿ

    ವೇಣುವಿನೋದ್ ಕೆ.ಎಸ್. ಮಂಗಳೂರು

    ಒಂದೊಮ್ಮೆ ಕಾಡಿನಲ್ಲೇ ವಾಸವಿದ್ದವರು ಸರ್ಕಾರದ ಕರೆಗೆ ಓಗೊಟ್ಟು ಹೊರಗೆ ಬಂದು ಯೋಜನೆಯಿಂದ ಸಿಕ್ಕಿದ ಮನೆಗಳಲ್ಲಿ ಬದುಕು ಕಟ್ಟಿಕೊಂಡವರೀಗ ಅತಂತ್ರರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಇದ್ದ ಜಾಗ-ಮನೆಯನ್ನು ಬಿಟ್ಟುಕೊಟ್ಟಾಗ, ಅದಕ್ಕಾಗಿ ಬಂದ ಪರಿಹಾರವನ್ನು ಮಧ್ಯವರ್ತಿಯೋರ್ವ ಲಪಟಾಯಿಸಿದ್ದಾನೆ.
    ಅವರದ್ದು ಈಗ ಜಾಗನೂ ಇಲ್ಲ, ಮನೆನೂ ಇಲ್ಲ, ಪರಿಹಾರವೂ ಇಲ್ಲ ಎನ್ನುವ ಪರಿಸ್ಥಿತಿ. ಮನೆ ಜಾಗವನ್ನು ಹೆದ್ದಾರಿ ಕೆಲಸಕ್ಕೆಂದು ಅಗೆದು ಹಾಕಲಾಗಿದೆ. ಪರಿಹಾರವಾಗಿ ಸಿಕ್ಕಿದ ಲಕ್ಷಗಟ್ಟಲೆ ರೂಪಾಯಿ ಮೊತ್ತ ಇವರ ಮುಗ್ಧತೆ, ಅನಕ್ಷರಸ್ಥತೆ ದುರುಪಯೋಗ ಪಡಿಸಿಕೊಂಡ ಮಧ್ಯವರ್ತಿ ಪಾಲಾಗಿದೆ. ಸದ್ಯ ಹೊಸ ಮನೆಯೂ ನಿರ್ಮಿಸಲಾಗದೆ ಕಾಡುಪಾಲಾಗಿದ್ದು, ಅಲೆದಾಡುವಂತಹ ಸ್ಥಿತಿಗೆ ತಲುಪಿದ್ದಾರೆ.

    ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ನೀರಕಟ್ಟೆಯ ಕೊರಗ ಜನಾಂಗದವರ ಕರುಣಾಜನಕ ಕಥೆ ಇದು.
    ಉಪ್ಪಿನಂಗಡಿಯಿಂದ ಸುಮಾರು 5 ಕಿ.ಮೀ ದೂರ, ಮಂಗಳೂರು- ಬೆಂಗಳೂರು ಹೆದ್ದಾರಿ ಬದಿಯಲ್ಲಿರುವ ಸ್ಥಳವೇ ನೀರಕಟ್ಟೆ. ಈ ಪ್ರದೇಶದಲ್ಲಿ ಹಲವು ಆದಿವಾಸಿ ಕೊರಗ ಕುಟುಂಬಗಳು ದಶಕಗಳಿಂದ ನೆಲೆಸಿವೆ.
    2015-16ರ ಸಾಲಿನಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆಂದು ಅನೇಕರ ಜಮೀನು ವಶಪಡಿಸಿಕೊಳ್ಳಲು ಹಾಸನದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಭಾಗ ಮುಂದಾಗಿದ್ದು, ಅದರಲ್ಲಿ ನಾಲ್ಕು ಕೊರಗ ಕುಟುಂಬಗಳ ಜಮೀನು ಕೂಡ ಸೇರಿತ್ತು.

    ಸೇರಿಕೊಂಡ ಮಧ್ಯವರ್ತಿ!
    ಭೂಮಿ/ಮನೆ ನೀಡಲು ಒಪ್ಪಿಕೊಂಡ ಕೊರಗರನ್ನು ಹೆದ್ದಾರಿ ಪ್ರಾಧಿಕಾರದ ಹಾಸನ ಕಚೇರಿಗೆ ಕರೆದೊಯ್ದದ್ದು ಉಪ್ಪಿನಂಗಡಿ ಭಾಗದ ಮಧ್ಯವರ್ತಿ. ಈತ ಗುತ್ತಿಗೆದಾರನೂ ಹೌದು. ಈತನೇ ಹಿಂದೆ ಐಟಿಡಿಪಿ(ಇಂಟಿಗ್ರೇಟೆಡ್ ಟ್ರೈಬಲ್ ಡೆವಲಪ್‌ಮೆಂಟ್ ಪ್ರೋಗ್ರಾಮ್) ಯೋಜನೆಯಡಿ ಕೊರಗರಿಗೆ ಮನೆ ನಿರ್ಮಿಸಿಕೊಟ್ಟಿದ್ದ. ಹಾಗಾಗಿ ಈ ಕುಟುಂಬಗಳಿಗೆ ಆತನ ಮೇಲೆ ವಿಶ್ವಾಸವಿತ್ತು. ಅದರಂತೆ ಭೂಮಿ ಬಿಟ್ಟುಕೊಟ್ಟ ಈ ಕೊರಗ ಕುಟುಂಬಗಳಿಗೆ 2016ರಲ್ಲಿ ಪರಿಹಾರ ವಿತರಣೆಯಾಯಿತು. ನೇರವಾಗಿ ಅವರೆಲ್ಲರ ಖಾತೆಗಳಿಗೆ ಹಣ ಡಿಪಾಸಿಟ್ ಮಾಡಲಾಯಿತು. ವಿದ್ಯಾವಂತರಲ್ಲದ ಕೊರಗ ಕುಟುಂಬಗಳಿಗೆ ಮಧ್ಯವರ್ತಿಯೇ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ಮಾಡಿಕೊಟ್ಟಿದ್ದ. ಆದರೆ ಹಣ ಡಿಪಾಸಿಟ್ ಆದ ಒಂದು ವಾರದಲ್ಲೇ ಈ ಮಧ್ಯವರ್ತಿ ಶೇ.70ರಿಂದ 90ರಷ್ಟನ್ನು ಡ್ರಾ ಮಾಡಿದ್ದಾನೆ. ಹೀಗೆ ಹಣ ಕಳೆದುಕೊಂಡ ಕುಟುಂಬಗಳದ್ದು ಒಂದೊಂದು ವ್ಯಥೆ.

    ಟೆರೇಸ್ ಮನೆ ಬೇಕೆಂದವರು ಟಾರ್ಪಾಲಿನಲ್ಲಿ: ಮನೆ ಹೋಗಿದ್ದಕ್ಕೆ ಪರಿಹಾರವಾಗಿ 7.19 ಲಕ್ಷ ರೂ. ಮೊತ್ತ ಪರಿಹಾರ ಪಡೆದುಕೊಂಡವರು ಮಾಂಕು – ಬಾಗಿ ದಂಪತಿ. ಇವರ ಖಾತೆಗೆ 20-10-2016ಕ್ಕೆ ಈ ಮೊತ್ತ ಜಮಾವಾಗಿತ್ತು . ಮರುದಿನವೇ 5 ಲಕ್ಷ ರೂ. ಹಾಗೂ 26ರಂದು 2 ಲಕ್ಷ ರೂ. ಡ್ರಾ ಮಾಡಲಾಗಿದೆ. ಅದರಲ್ಲಿ ಸುಮಾರು 50 ಸಾವಿರ ರೂ. ಮೊತ್ತವನ್ನಷ್ಟೇ ಮಧ್ಯವರ್ತಿ ಮಾಂಕು ಅವರಿಗೆ ನೀಡಿದ್ದಾರೆ. ನಮಗೆ ಟೆರೇಸ್ ಮನೆ ನಿರ್ಮಿಸಿಕೊಡಿ ಎಂದು ಮಾಂಕು ಕೇಳಿಕೊಂಡಾಗ ಮಧ್ಯವರ್ತಿ ಒಪ್ಪಿಕೊಂಡಿದ್ದಾನೆ. ಆದರೆ ಐದು ಮಳೆಗಾಲವನ್ನು ಈ ದಂಪತಿ ಹೆದ್ದಾರಿ ಪಕ್ಕದ ಪರಂಬೋಕು ಕಾಡಿನ ನಡುವೆ ಟಾರ್ಪಾಲ್ ಕಟ್ಟಿ, ಅದರಡಿ ಕಳೆದಿದ್ದಾರೆ. ಇದುವರೆಗೆ ಮನೆ ಬಿಡಿ, ಗುಡಿಸಲನ್ನೂ ಕಂಡಿಲ್ಲ. ಪ್ರತೀ ಬಾರಿ ಮಧ್ಯವರ್ತಿ ಮನೆಗೆ ಈ ದಂಪತಿ ಹೋದಾಗಲೂ ಒಂದಷ್ಟು ಸಣ್ಣ ಮೊತ್ತವನ್ನು ಕೊಟ್ಟು ಹಿಂದೆ ಕಳುಹಿಸಲಾಗಿದೆ, ಮನೆಯೂ ಇಲ್ಲ, ಹಣವೂ ಇಲ್ಲ ಎನ್ನುವ ಪರಿಸ್ಥಿತಿ ಸದ್ಯ ಇವರದ್ದು.

    ಮನೆ ಹೋಯ್ತು ಆಮ್ನಿ ಸಿಕ್ತು!: ಐತಪ್ಪ ಕೊರಗ ಎಂಬವರಿಗೆ ಹಳೇ ಮನೆಯೊಂದಿತ್ತು. ಹೆದ್ದಾರಿಗೆ ಬಿಟ್ಟು ಕೊಟ್ಟ ಹಿನ್ನೆಲೆಯಲ್ಲಿ 8.27 ಲಕ್ಷ ರೂ. ಮೊತ್ತ ಪರಿಹಾರ ಸಿಕ್ಕಿದೆ. ಹೊಸ ಮನೆ ನಿರ್ಮಿಸುವ ಬದಲು ಮಧ್ಯವರ್ತಿ ಹಳೇ ಆಮ್ನಿ ಕಾರನ್ನು ನೀಡಿದ್ದಾನೆ. ಡ್ರೈವಿಂಗ್ ಕಲಿಸುವುದಕ್ಕೆ ಓರ್ವ ಸ್ಥಳೀಯನನ್ನೂ ನಿಯೋಜಿಸಿದ್ದಾನೆ. ಆತನಿಗೆ ಐತಪ್ಪರೇ ದಿನಕ್ಕೆ 500ರಂತೆ ನೀಡಿ ಕಾರು ಕಲಿತಿದ್ದಾರೆ. ಅಷ್ಟು ಬಿಟ್ಟರೆ ಏನೂ ಆಗಿಲ್ಲ. ಕೈಸೇರಿದ್ದ ಸ್ವಲ್ಪ ಹಣ ಕರಗಿದೆ. ಪ್ರಸ್ತುತ ಕಾರು ಸ್ತಬ್ಧವಾಗಿ ನಿಂತಿದೆ, ಓಡಿಸಲು ಪೆಟ್ರೋಲ್‌ಗೆ ಹಣವಿಲ್ಲ, ಹಾಲೊ ಬ್ಲಾಕ್‌ನ ಶೆಡ್‌ವೊಂದರಲ್ಲಿ ವಾಸಿಸುತ್ತಿದ್ದಾರೆ.

    ಮನೆ ಇದ್ದರೂ ಹಣ ಕೊಟ್ಟರು!
    ತನಿಯಪ್ಪ ಕೊರಗ ಅವರ ಹಳೇ ಮನೆ ಹೆದ್ದಾರಿಗೆ ಹೋಗಿದೆ. ಆದರೆ ಅದೇ ವೇಳೆಗೆ ಅವರು ಕೊಂಚ ಈಚೆಗೆ ಇನ್ನೊಂದು ಮನೆಯನ್ನು ಐಟಿಡಿಪಿ ನೆರವಲ್ಲಿ ನಿರ್ಮಿಸಿದ್ದರು. ಬಳಿಕ ಹಳೇ ಮನೆಯ ಪರಿಹಾರ ಮೊತ್ತವೇನೋ ಸಿಕ್ಕಿತು. ಅದನ್ನು ಮಧ್ಯವರ್ತಿ, ‘ಟರ್ನ್‌ಓವರ್‌ಗೆ ಒಮ್ಮೆ ಕೊಡಿ, ಮತ್ತೆ ಹಿಂದಿರುಗಿಸುವೆ’ ಎಂದು ಕೇಳಿ ಪಡೆದಿದ್ದಾನೆ. ಆ ಹಣದಲ್ಲಿ ಸ್ವಲ್ಪ ಹಣವಷ್ಟೇ ಸಿಕ್ಕಿದೆ, ಪೂರ್ತಿ ಮರಳಿಸಲು ಸತಾಯಿಸುತ್ತಿದ್ದಾನೆ ಮಧ್ಯವರ್ತಿ.

    ತೋಡಿನ ಬದಿ ಬದುಕು: ಬಾಬು -ಲಲಿತಾ ದಂಪತಿಯದ್ದು ಇನ್ನೊಂದು ರೀತಿಯ ವೇದನೆ. ಹೊಸ ಮನೆ ನಿರ್ಮಿಸಿಕೊಡುತ್ತೇನೆ ಎಂದ ಮಧ್ಯವರ್ತಿ ಅವರಿಗೆ ಸಿಕ್ಕಿದ 5.16 ಲಕ್ಷ ರೂ. ಮೊತ್ತ ಪಡೆದಿದ್ದ. ಮನೆ ಕಟ್ಟಿ ಕೊಡುವುದಾಗಿ ಹೇಳಿ ಪರಿಚಯಸ್ಥರೊಬ್ಬರ ಚಿಕ್ಕ ಶೀಟ್‌ನ ಶೆಡ್‌ನಲ್ಲಿ ಕುಟುಂಬವನ್ನು ಇರಿಸಿದ್ದ. ಆ ಪರಿಚಯಸ್ಥರು ಈಗ ದಿನವೂ, ಯಾವಾಗ ಬಿಟ್ಟುಕೊಡುತ್ತೀರಿ ಎಂದು ಕುಟುಂಬಕ್ಕೆ ಕಿರಿಕಿರಿ ಮಾಡುತ್ತಿದ್ದಾರೆ. ಶೆಡ್‌ಗೆ ಬಾಗಿಲು ಕೂಡ ಇಲ್ಲ, ಹಳೇ ಮನೆ ಮುರಿದಾಗ ತೆಗೆದಿರಿಸಿದ ಬಾಗಿಲನ್ನೇ ಅಡ್ಡ ಇರಿಸುತ್ತೇವೆ ಎನ್ನುತ್ತಾರೆ ಲಲಿತಾ. ಮನೆ ನಿರ್ಮಿಸಿ ಎಂದು ಮಧ್ಯವರ್ತಿಗೆ ಒತ್ತಾಯಿಸಿದರೆ ಆತ ಜಾಗ ಎಲ್ಲಿದೆ ಎಂದು ಕೈಚೆಲ್ಲುತ್ತಾನೆ ಎನ್ನುತ್ತಾರೆ ಸಂತ್ರಸ್ತರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts