More

    ಸ್ಮಗ್ಲಿಂಗ್ ಚಿನ್ನ ಪ್ರಕರಣ ಮುಚ್ಚಿಹಾಕಲು ಸಂಧಾನ?

    ಬೆಳಗಾವಿ: ಸ್ಮಗ್ಲಿಂಗ್ ಚಿನ್ನ ಕಳ್ಳತನ ಮತ್ತು ವಾಹನ ಬಿಡುಗಡೆಗೆ ಲಕ್ಷಾಂತರ ರೂ. ನಗದು ಪಡೆದಿರುವ ಪ್ರಕರಣದ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿಯು ಮಧ್ಯವರ್ತಿ ಕಿರಣ ವೀರನಗೌಡರ ಜತೆಗೂಡಿ ಶನಿವಾರ ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟಿರುವುದು ಕುತೂಹಲ ಹೆಚ್ಚಿಸಿದೆ. ಮೂಲಗಳ ಪ್ರಕಾರ, ವಿವಾದಿತ ಚಿನ್ನದ ಮಾಲೀಕ ತಿಲಕ ಪೂಜಾರಿ ಚಿನ್ನ ನಾಪತ್ತೆಯಾಗಿರುವ ಬಗ್ಗೆ ಇನ್ನೂ ಅಧಿಕೃತವಾಗಿ ದೂರು ದಾಖಲಿಸಿಲ್ಲ. ಚಿನ್ನ ಕಳ್ಳತನ ಆಗಿದೆ ಎಂದು ಮಾಲೀಕ ಅನುಮಾನ ವ್ಯಕ್ತಪಡಿಸಿದ್ದಾಗ ಐಜಿಪಿ ತನಿಖೆ ನಡೆಸುವಂತೆ ಎಸ್ಪಿ ಅವರಿಗೆ ಆದೇಶಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಸ್ವತಃ ಐಜಿಪಿಯೂ ತಪ್ಪಿತಸ್ಥರು ಎಂಬ ಸಾಕ್ಷಾೃಧಾರ ದೊರೆತಿದ್ದರಿಂದ ಸಿಒಡಿ ತನಿಖೆ ನಡೆಯುತ್ತಿದೆ. ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ನಾಲ್ವರು ಅಧಿಕಾರಿಗಳ ವರ್ಗಾವಣೆಯಾಗಿದೆ. ಒಂದು ವೇಳೆ ತಮ್ಮ ವಿರುದ್ಧ ಎಫ್‌ಐಆರ್ ದಾಖಲಾದರೆ, ಅಧಿಕಾರದಲ್ಲಿ ಮುಂದುವರಿಯಲು ಕಾನೂನಾತ್ಮಕ ತೊಡಕಾಗಲಿದೆ ಎಂಬ ಲೆಕ್ಕಾಚಾರದಿಂದ ಮತ್ತೆ ಕಿರಣ ಮಧ್ಯಸ್ಥಿಕೆಯಲ್ಲಿ ಮಾಲೀಕರೊಂದಿಗೆ ಮತ್ತೊಮ್ಮೆ ರಾಜೀ ಸಂಧಾನಕ್ಕೆ ಯತ್ನ ಮುಂದುವರಿಸಿದ್ದಾರೆ. ಅಲ್ಲದೆ, ಕಳ್ಳತನವಾಗಿದ್ದ ಸ್ಮಗ್ಲಿಂಗ್ ಚಿನ್ನವನ್ನು ಹುಬ್ಬಳ್ಳಿ ವ್ಯಾಪಾರಿಗೆ ಮಾರಾಟ ಮಾಡಲಾಗಿತ್ತು ಎಂಬ ಅಂಶ ಅನುಮಾನ ಹುಟ್ಟುಹಾಕಿದೆ.

    ಎಫ್‌ಐಆರ್‌ಗೆ ವಿಳಂಬವೇಕೆೆ?: ಕಿರಣ ಹಾಗೂ ಡಿವೈಎಸ್ಪಿ ಜಾವೀದ್ ಇನಾಂದಾರ್ ಅವರಿಂದ ತನಗೆ ಮೋಸ ಆಗಿರುವ ಬಗ್ಗೆ ಈಗಾಗಲೇ ಮಾಲೀಕ ತಿಲಕ ಪೂಜಾರಿಗೆ ತಿಳಿದುಬಂದಿದೆ. ಅಲ್ಲದೆ, ಪಡೆದಿದ್ದ 27 ಲಕ್ಷ ರೂ. ವಾಪಸ್ ನೀಡಿ ನಂಬಿಕೆ ಉಳಿಸಿಕೊಂಡಿರುವ ನಾಟಕವಾಡಿದ್ದಾರೆ. ತಾವೇ ಕಳ್ಳತನ ಮಾಡಿ, ಇತರ ಅಧಿಕಾರಿಗಳನ್ನು ತಪ್ಪಿತಸ್ಥರನ್ನಾಗಿಸಲು ಯತ್ನಿಸಿದ್ದಾರೆ ಎಂದು ಹಲವು ಪೊಲೀಸ್ ಅಧಿಕಾರಿಗಳ ಬಳಿ ಖುದ್ದು ತಿಲಕ ಹೇಳಿಕೊಂಡಿದ್ದಾನೆ. ಇಷ್ಟೆಲ್ಲ ಆದರೂ, ಇನ್ನು ಮಾಲೀಕರು ಏಕೆ ಅಧಿಕೃತ ಎಫ್‌ಆರ್‌ಐ ದಾಖಲಿಸುತ್ತಿಲ್ಲ ಎಂಬ ಪ್ರಶ್ನೆ ಮೂಡಿದೆ.

    ದೃಶ್ಯಾವಳಿ ಲಭ್ಯ: ಏ. 9ರಂದು ಯಮಕನಮರಡಿ ಠಾಣೆಯಲ್ಲಿನ ವಾಹನ (ಏರ್‌ಬ್ಯಾಗ್‌ನಲ್ಲಿನ ಚಿನ್ನ) ಕಳ್ಳತನದ ವಿಫಲ ಯತ್ನ ನಡೆದಿದ್ದ ರಾತ್ರಿ ಮಧ್ಯವರ್ತಿ ಕಿರಣ, ಡಿವೈಎಸ್ಪಿ ಜಾವೀದ್ ಹುಕ್ಕೇರಿ ತಾಲೂಕಿನ ಐಬಿಯೊಂದರಲ್ಲಿ ಊಟ ಮಾಡಿದ್ದಾರೆ. ಅಲ್ಲಿಯೇ ಉನ್ನತ ಅಧಿಕಾರಿಯೊಂದಿಗೆ ಮೊಬೈಲ್‌ನಲ್ಲಿ ಚರ್ಚಿಸಿರುವ ದೃಶ್ಯಾವಳಿ ಹಾಗೂ ಕಾಲ್ ರೆಕಾರ್ಡಿಂಗ್ ತನಿಖಾಧಿಕಾರಿಗಳಿಗೆ ಲಭ್ಯವಾಗಿವೆ ಎಂಬ ಮಾಹಿತಿ ಇದೆ.

    ಐಜಿಪಿ ಕಚೇರಿಗೆ ಬರುತ್ತಿದ್ದ ಕಿರಣ: ಸ್ಮಗ್ಲಿಂಗ್ ಚಿನ್ನ ಕಳ್ಳತನ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಶನಿವಾರ ವೈರಲ್ ಆಗಿರುವ ಫೋಟೋ ಇನ್ನೂ ಅನೇಕ ಅನುಮಾನ ದಟ್ಟಗೊಳಿಸಿದೆ. ಚಿತ್ರದಲ್ಲಿ ಮಧ್ಯವರ್ತಿ ಕಿರಣ ವೀರನಗೌಡ ಹಾಗೂ ಐಪಿಎಸ್ ಅಧಿಕಾರಿ ರಾಘವೇಂದ್ರ ಸುಹಾಸ್ ಇದ್ದಾರೆ. ಐಜಿಪಿ ಕಚೇರಿಯಲ್ಲೇ ಪೊಲೀಸ್ ಅಧಿಕಾರಿಯನ್ನು ಅವರು ಸನ್ಮಾನಿಸಿರುವುದು ಇಬ್ಬರಿಗೂ ಪರಿಚಯ ಇತ್ತು ಎಂಬುದಕ್ಕೆ ಫೋಟೋ ಪುಷ್ಟಿ ನೀಡಿದೆ.

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts