More

    ಮಹಿಳೆಯರು ಕಿರು ಉದ್ದಿಮೆ ಆರಂಭಿಸಿ ಜೀವನದಲ್ಲಿ ಸದೃಢರಾಗುವಂತೆ ಸಚಿವ ಹಾಲಪ್ಪ ಆಚಾರ್ ಸಲಹೆ

    ಕೊಪ್ಪಳ: ಮಹಿಳೆಯರು ಕುಟುಂಬ ನಡೆಸುವುದರ ಜತೆಗೆ ಕಿರು ಉದ್ದಿಮೆ ಆರಂಭಿಸಿ ಆರ್ಥಿಕವಾಗಿ ಸದೃಢರಾಗಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗಣಿ ಮತ್ತು ಭು ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಹೇಳಿದರು.

    ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಆಜಾದಿಕ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಬುಧವಾರ ಆಯೋಜಿಸಿದ್ದ ಕೌಶಲ ಮತ್ತು ಉದ್ಯಮಶೀಲತಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಸ್ವಾತಂತ್ರೃ ಅಮೃತ ಮಹೋತ್ಸವ ಅಂಗವಾಗಿ ಸರ್ಕಾರ ಅನೇಕ ಯೋಜನೆ ಜಾರಿ ಮಾಡಿದೆ. ಗ್ರಾಮೀಣ ಭಾಗದ ಸ್ವ-ಸಹಾಯ ಗುಂಪುಗಳು ಮಹಿಳೆಯರು ಆರ್ಥಿಕವಾಗಿ ಸಧೃಢವಾಗಲು ಕಾರಣವಾಗಿವೆ. ರಾಜ್ಯದಲ್ಲಿ 7500 ಸ್ವ-ಸಹಾಯ ಗುಂಪುಗಳಿವೆ. ಜಿಲ್ಲೆಯ 210 ಸ್ವ-ಸಹಾಯ ಗುಂಪುಗಳಿಗೆ ತಲಾ ಒಂದು ಲಕ್ಷ ರೂ.ಯಂತೆ ಇಡಿಗಂಟು ನೀಡಲಾಗುತ್ತಿದೆ. ಈ ಆರ್ಥಿಕ ಸಹಾಯದ ಮೂಲಕ ಮಹಿಳೆಯರು ಕಿರು ಉದ್ದಿಮೆ ಆರಂಭಿಸಿಕೊಂಡು ಜೀವನದಲ್ಲಿ ಸಧೃಡರಾಗಬೇಕು ಎಂದರು.

    ವಿಪ ಸದಸ್ಯೆ ಹೇಮಲತಾ ನಾಯಕ, ಶಾಸಕ ರಾಘವೇಂದ್ರ ಹಿಟ್ನಾಳ್, ಜಿಪಂ ಸಿಇಒ ಫೌಜಿಯಾ ತರನ್ನುಮ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಹಾಗೂ ನೂತನ ಜಿಲ್ಲಾಧಿಕಾರಿ ಸುಂದರೇಶ ಬಾಬುಗೆ ಸನ್ಮಾನ ಮಾಡಲಾಯಿತು. ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಜಿ.ಪದ್ಮಾವತಿ, ಜಿಲ್ಲಾ ಸ್ತ್ರೀ-ಶಕ್ತಿ ಒಕ್ಕೂಟದ ಕಾರ್ಯದರ್ಶಿ ಸುಮಂಗಲಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ, ಜಿಲ್ಲೆಯ ಸ್ವ-ಸಹಾಯ ಗುಂಪುಗಳ ಅಧ್ಯಕ್ಷರು ಮತ್ತು ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts