More

    ಕೊಪ್ಪಳಕ್ಕೆ ವಿವಿ ಸ್ಥಳಾಂತರಿಸದಿದ್ದರೆ ಹೋರಾಟ: ಕೆಕೆಎಚ್‌ಎಸ್ ಯುವ ಘಟಕ ಜಿಲ್ಲಾಧ್ಯಕ್ಷ ರಮೇಶ ತುಪ್ಪದ್ ಎಚ್ಚರಿಕೆ



    ಕೊಪ್ಪಳ: ಸರ್ಕಾರ ಮಂಜೂರು ಮಾಡಿರುವ ನೂತನ ಮಾದರಿ ವಿಶ್ವವಿದ್ಯಾಲಯವನ್ನು ಜಿಲ್ಲಾ ಕೇಂದ್ರ ಕೊಪ್ಪಳದಲ್ಲೇ ಆರಂಭಿಸಬೇಕು. ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ರಮೇಶ ತುಪ್ಪದ್ ತಿಳಿಸಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಗೆ ನೂತನ ವಿವಿ ಮಂಜೂರು ಮಾಡಿದಾಗ ನಾವೆಲ್ಲ ಖುಷಿ ಪಟ್ಟಿದ್ದೆವು. ಆದರೆ, ಈಗಿರುವ ಸ್ನಾತಕೋತ್ತರ ಕೇಂದ್ರದ ಹೆಸರನ್ನೇ ವಿವಿ ಎಂದು ಬದಲಾಯಿಸಿರುವುದು ಬಿಟ್ಟರೆ ಬೇರೇನೂ ವಿಶೇಷತೆಗಳಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸುತ್ತೇವೆ. ಆದರೆ, ಘೋಷಣೆಯಾದ ವಿವಿಯನ್ನಾದರೂ ಜಿಲ್ಲಾ ಕೇಂದ್ರದಲ್ಲಿ ಆರಂಭಿಸಬೇಕು. ಯಲಬುರ್ಗಾದಲ್ಲಿ ಈಗಾಗಲೇ ಸುಸಜ್ಜಿತ ಪಿಜಿ ಕೇಂದ್ರವಿದೆ. ಇದೀಗ ಕುಕನೂರು ತಾಲೂಕಿನ ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ನಾಲ್ಕನೇ ಮಹಡಿಯಲ್ಲಿ ವಿವಿ ಆರಂಭಿಸಲು ಆದೇಶಿಸಿರುವುದು ಸಮಂಜಸವಲ್ಲ. ವಿದ್ಯಾರ್ಥಿಗಳು ಅಷ್ಟು ದೂರ ತೆರಳಿ ಅಭ್ಯಾಸ ಮಾಡುವುದು ಕಷ್ಟವಾಗಲಿದೆ ಎಂದರು.

    ಸಚಿವ ಹಾಲಪ್ಪ ಆಚಾರ್ ಯಲಬುರ್ಗಾ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ಸಂಗಣ್ಣ ಕರಡಿ ವಿವಿ ಬೇರೆಡೆ ಸ್ಥಳಾಂತರವಾದರೂ ತುಟಿ ಬಿಚ್ಚುತ್ತಿಲ್ಲ. ಜನಪ್ರತಿನಿಧಿಗಳು ಶಿಕ್ಷಣ ಕ್ಷೇತ್ರದ ಬಗ್ಗೆ ಅಸಡ್ಡೆ ತೋರುತ್ತಿದ್ದು, ಮಕ್ಕಳ ಭವಿಷ್ಯಕ್ಕೆ ಹಿನ್ನಡೆಯಾಗಲಿದೆ. ಈ ಬಗ್ಗೆ ಸಂಸದ ಸಂಗಣ್ಣ ಕರಡಿ ಹಾಗೂ ವಿಪ ಸದಸ್ಯೆ ಹೇಮಲತಾ ನಾಯಕ ಜತೆ ಚರ್ಚಿಸಿದ್ದು, ಅವರು ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಒಂದು ತಿಂಗಳೊಳಗೆ ಕೊಪ್ಪಳಕ್ಕೆ ವಿವಿ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಹೋರಾಟ ಹಮ್ಮಿಕೊಳ್ಳುತ್ತೇವೆಂದು ಎಚ್ಚರಿಸಿದರು. ಜಿಲ್ಲಾ ಸಂಚಾಲಕರಾದ ಶಿವಕುಮಾರ ಕುಕನೂರು, ಸಂತೋಷ ದೇಶಪಾಂಡೆ, ತಾಲೂಕು ಅಧ್ಯಕ್ಷ ಮಂಜುನಾಥ ಅಂಗಡಿ, ನಗರ ಘಟಕ ಅಧ್ಯಕ್ಷ ಹಬೀಬ್ ಬಿಸರಳ್ಳಿ, ಹುಲುಗಪ್ಪ ಕಟ್ಟಿಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts