More

    ಎಲ್ಲ ಮತಗಟ್ಟೆಗಳಲ್ಲಿ ಮೂಲಸೌಕರ್ಯ ಪರಿಶೀಲಿಸಿ: ಅಧಿಕಾರಿಗಳಿಗೆ ಡಿಸಿ ಎಂ.ಸುಂದರೇಶ ಸೂಚನೆ

    ಕೊಪ್ಪಳ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ಎಂ.ಸುಂದರೇಶ ಬಾಬು ಸೂಚನೆ ನೀಡಿದರು.

    ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಚುನಾವಣಾ ಪೂರ್ವಸಿದ್ಧತೆ ಕುರಿತು ಎಲ್ಲ ವಿಧಾನಸಭೆ ಕ್ಷೇತ್ರಗಳ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು. ಚುನಾವಣಾಧಿಕಾರಿಗಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಮತಗಟ್ಟೆಗಳನ್ನು ಪರಿಶೀಲಿಸಬೇಕು. ಅಲ್ಲಿ ಅಂಗವಿಕಲರಿಗೆ ರ‌್ಯಾಂಪ್ ಸೌಲಭ್ಯ, ಶೌಚಗೃಹ, ವಿದ್ಯುತ್ ಸಂಪರ್ಕ, ಕುಡಿವ ನೀರಿನ ವ್ಯವಸ್ಥೆ ಇರುವ ಬಗ್ಗೆ ಪರಿಶೀಲಿಸಬೇಕು. ಇಲ್ಲದಿದ್ದರೆ ಅಗತ್ಯ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಚುನಾವಣೆ ಸಂಬಂಧ ತರಬೇತಿಗಾಗಿ ಮಾಸ್ಟರ್ ಟ್ರೇನರ್ಸ್‌ಗಳನ್ನು ನೇಮಿಸಬೇಕು. ಅಲ್ಲದೆ ತರಬೇತಿ ಕೇಂದ್ರಗಳು ಹಾಗೂ ಇವಿಎಂಗಳನ್ನು ಸಂಗ್ರಹಿಸಲು ಸ್ಟ್ರಾಂಗ್ ರೂಮ್‌ಗಳನ್ನೂ ಗುರುತಿಸಬೇಕು ಎಂದು ತಿಳಿಸಿದರು.

    ತಾಪಂ ಇಒಗಳು ಜಿಲ್ಲೆಯಲ್ಲಿ ನೋಂದಣಿಯಾಗದೇ ಇರುವ ಯುವ ಮತದಾರರನ್ನು ಗುರುತಿಸಿ ಪಟ್ಟಿಯಲ್ಲಿ ಸೇರಿಸಬೇಕು. ಅವರನ್ನು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈಗಾಗಲೇ ಜಿಲ್ಲೆಗೆ ಹಂಚಿಕೆಯಾಗಿರುವ ಇವಿಎಂ-ವಿವಿಪ್ಯಾಟ್‌ಗಳನ್ನು ಇಸಿಐಎಲ್ ಹೈದರಾಬಾದ್‌ನ ಇಂಜಿನಿಯರ್‌ಗಳಿಂದ ಪ್ರಥಮ ಹಂತದ ತಪಾಸಣೆ ಮಾಡಲಾಗಿದೆ. ಚುನಾವಣಾ ಆಯೋಗವು ಮತಯಂತ್ರ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲು ನಿರ್ದೇಶನ ನೀಡಿದ್ದು, ಅದರಂತೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಇವಿಎಂ-ವಿವಿ ಪ್ಯಾಟ್‌ಗಳ ಜಾಗೃತಿ ಮೂಡಿಸಲು ಕೇಂದ್ರ ಸ್ಥಾಪಿಸಬೇಕು. ಪ್ರತ್ಯೇಕ ಮೊಬೈಲ್ ವ್ಯಾನ್‌ಗಳ ಮೂಲಕ ಪ್ರತಿ ಗ್ರಾಪಂಗಳಿಗೆ ತೆರಳಿ ಮತದಾರರಲ್ಲಿ ಅರಿವು ಮೂಡಿಸುವಂತೆ ಡಿಸಿ ಸುಂದರೇಶ ಬಾಬು ಸೂಚಿಸಿದರು.

    ಎಡಿಸಿ ಸಾವಿತ್ರಿ ಬಿ.ಕಡಿ ಮಾತನಾಡಿ, ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಕೊಪ್ಪಳ ಕ್ಷೇತ್ರಗಳಲ್ಲಿ 1,322 ಮತಗಟ್ಟೆಗಳಿದ್ದು, 5,57,308 ಪುರುಷ, 5,60,894 ಮಹಿಳಾ ಹಾಗೂ 49 ಇತರೆ ಮತದಾರರು ಸೇರಿ ಒಟ್ಟು 11,18,251 ಮತದಾರರಿದ್ದಾರೆ ಎಂದರು. ಎಸಿ ಬಸವಣ್ಣೆಪ್ಪ ಕಲಶೆಟ್ಟಿ, ಜಿಪಂ ಉಪಕಾರ್ಯದರ್ಶಿ ಸಮೀರ ಮುಲ್ಲಾ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts