More

    ಮಾದರಿ ನ್ಯಾಯಾಲಯ ಸಂಕೀರ್ಣ ನಿರ್ಮಿಸಿ: ಅಧಿಕಾರಿಗಳಿಗೆ ಹೈಕೋರ್ಟ್ ನ್ಯಾಯಾಧೀಶ ಸಂಜೀವ ಕುಮಾರ್ ಸೂಚನೆ

    ಕೊಪ್ಪಳ: ಕೊಪ್ಪಳ ಜಿಲ್ಲೆಯಾಗಿ 25 ವರ್ಷಗಳಾಗಿದ್ದು, ಈವರೆಗೆ ಜಿಲ್ಲಾ ಕೋರ್ಟ್ ನಿರ್ಮಾಣವಾಗಿಲ್ಲ. ಇದೀಗ ಕಾಲ ಕೂಡಿ ಬಂದಿದ್ದು, ದೇಶದಲ್ಲಿಯೇ ಮಾದರಿ ನ್ಯಾಯಾಲಯ ನಿರ್ಮಿಸಿ ಎಂದು ಅಧಿಕಾರಿಗಳಿಗೆ ಹೈಕೋರ್ಟ್ ನ್ಯಾಯಾಧೀಶ ಹಂಚಾಟೆ ಸಂಜೀವ ಕುಮಾರ ಸೂಚಿಸಿದರು.

    ನಗರದ ಕುಷ್ಟಗಿ ರಸ್ತೆಯಲ್ಲಿನ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು. ಕೊಪ್ಪಳ ಜಿಲ್ಲೆಗೆ 10 ವಿವಿಧ ಕೋರ್ಟ್‌ಗಳು ಮಂಜೂರಾಗಿವೆ. ಜಾಗ ಕೊರತೆ ಕಾರಣ ಆರು ಕಾರ್ಯನಿರ್ವಹಿಸುತ್ತಿವೆ. ಭವಿಷ್ಯದಲ್ಲಿ ಇನ್ನಷ್ಟು ಕೋರ್ಟ್‌ಗಳು ಮಂಜೂರಾಗಲಿವೆ. ನ್ಯಾಯಾಲಯದಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ. ನಾವು ಸರ್ಕಾರದ ಒಂದು ಭಾಗ. 11.15 ಎಕರೆ ಇದ್ದು, ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿ ಕಟ್ಟಡ ನಿರ್ಮಿಸಬೇಕು. ನಾವು ಬಂದು ಅನುದಾನ ಬಿಡುಗಡೆ ಮಾಡಿ ಎಂದು ಕೇಳಲು ಬರುವುದಿಲ್ಲ. ಅಧಿಕಾರಿಗಳ ಮೇಲೆ ಆ ಜವಾಬ್ದಾರಿ ಇದೆ. ಈಗಾಗಲೇ ನ್ಯಾಯಾಲಯ ನಿರ್ಮಾಣವಾಗಬೇಕಿತ್ತು. ನಮ್ಮೆಲ್ಲರ ನಿರ್ಲಕ್ಷೃದಿಂದ ವಿಳಂಬವಾಗಿದೆ. ಜನವರಿಯೊಳಗೆ ಕಾಮಗಾರಿ ಆರಂಭಿಸಬೇಕು. ಚುನಾವಣೆ ಘೋಷಣೆಯಾದರೆ ಹೊಸ ಸರ್ಕಾರ ಬರುವವರೆಗೆ ಕಾಮಗಾರಿ ಆರಂಭಿಸಲಾಗುವುದಿಲ್ಲವೆಂದು ತಾಕೀತು ಮಾಡಿದರು.

    ನ್ಯಾಯಾಲಯ, ಸಭಾಂಗಣ, ವಸತಿ ನಿಲಯ, ಪಾರ್ಕಿಂಗ್, ಕಕ್ಷಿದಾರರ ಕೊಠಡಿ, ಗ್ರಂಥಾಲಯ, ಕುಡಿವ ನೀರು, ಶೌಚಗೃಹ ಸೌಲಭ್ಯಗಳಿರಬೇಕು. ಜನರ ಅವಶ್ಯಕತೆಗೆ ತಕ್ಕಂತೆ ಸೌಕರ್ಯಗಳನ್ನು ಹೆಚ್ಚಿಸಬೇಕು. ಭವಿಷ್ಯದಲ್ಲಿ 20ಕ್ಕೂ ಅಧಿಕ ನ್ಯಾಯಾಲಯಗಳನ್ನು ಆರಂಭಿಸಬೇಕಾಗಬಹುದು. ಅದಕ್ಕೆ ತಕ್ಕಂತೆ ನಮ್ಮ ನೀಲಿನಕ್ಷೆ ಇರಬೇಕು. ಕಲಬುರಗಿ, ಬೆಂಗಳೂರು ಹೈಕೋರ್ಟ್ ಮುಂತಾದವುಗಳನ್ನು ಗಮನಿಸಿ. ಮುಖ್ಯ ಯೋಜನಾಧಿಕಾರಿಗಳಿಂದ ಯೋಜನೆ ರಚಿಸಿಕೊಳ್ಳಿ. ದೇಶದಲ್ಲಿಯೇ ಮಾದರಿ ನ್ಯಾಯಾಲಯವಾಗಿ ಕೊಪ್ಪಳ ಕೋರ್ಟ್ ನಿರ್ಮಾಣವಾಗಬೇಕೆಂಬುದು ನಮ್ಮ ಬಯಕೆ. ಫೆಬ್ರವರಿಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಕೊಪ್ಪಳಕ್ಕೆ ಬರಲಿದ್ದಾರೆ. ಅಷ್ಟರೊಳಗೆ ಕಾಮಗಾರಿ ಆರಂಭಿಸುವಂತೆ ತಿಳಿಸಿದರು.

    ನ್ಯಾಯಾಲಯಕ್ಕೆ ಗುರುತಿಸಿದ ಜಾಗದ ಕೆಲ ಮಾಲೀಕರು ಸ್ಥಳ ಕಳೆದುಕೊಳ್ಳುವ ಹಾಗೂ ಇತರ ಸಮಸ್ಯೆಗಳ ಬಗ್ಗೆ ನ್ಯಾಯಾಧೀಶರ ಮುಂದೆ ಹೇಳಿಕೊಳ್ಳಲು ಯತ್ನಿಸಿದರು. ಈ ವೇಳೆ ಪೊಲೀಸರು ಭೇಟಿಗೆ ನಿರಾಕರಿಸಿದ್ದು ಕಂಡುಬಂತು.

    ಜಿಲ್ಲಾ ನ್ಯಾಯಾಧೀಶೆ ಬಿ.ಎಸ್.ರೇಖಾ, ಎಸಿ ಬಸವಣ್ಣಪ್ಪ ಕಲಶೆಟ್ಟಿ, ತಹಸೀಲ್ದಾರ್ ಅಮರೇಶ ಬಿರಾದಾರ, ಎಸ್ಪಿ ಅರುಣಾಂಗ್ಷು ಗಿರಿ, ಡಿವೈಎಸ್ಪಿ ಶರಣಪ್ಪ ಸುಬೇದಾರ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ಕಾರ್ಯದರ್ಶಿ ಬಿ.ವಿ.ಸಜ್ಜನ, ಉಪಾಧ್ಯಕ್ಷ ದಿವಾಕರ ಬಾಗಲಕೋಟೆ, ಖಜಾಂಚಿ ಸಿ.ಎಂ.ಪೊಲೀಸ್ ಪಾಟೀಲ್, ಜಂಟಿ ಕಾರ್ಯದರ್ಶಿ ಎಲ್.ಎಚ್.ಹಿರೇಗೌಡರ್ ಇತರರಿದ್ದರು.

    10.61 ಕೋಟಿ ರೂ. ಅಗತ್ಯ: ಜಾಗ ಪರಿಶೀಲನೆ ಬಳಿಕ ಜಿಲ್ಲಾ ನ್ಯಾಯಾಲಯಕ್ಕೆ ತೆರಳಿದ ಹೈಕೋರ್ಟ್ ನ್ಯಾಯಾಧೀಶರು ವಕೀಲರೊಂದಿಗೆ ಸಮಾಲೋಚನೆ ನಡೆಸಿದರು. ಹೊಸ ಕೋರ್ಟ್ ಕಟ್ಟಡಕ್ಕೆ 10.61 ಕೋಟಿ ರೂ. ಅನುದಾನ ಅಗತ್ಯವಿದ್ದು, ಈಗಾಗಲೇ 1.42 ಕೋಟಿ.ರೂ. ಬಿಡುಗಡೆಯಾಗಿದೆ. ಬಾಕಿ 9.18 ಕೋಟಿ ರೂ. ಬಿಡುಗಡೆಗೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಹಾಗೂ ನ್ಯಾಯಾಲಯ ಕಟ್ಟಡವಿಲ್ಲದ ಕಾರಣ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಕೀಲರ ಸಂಘದಿಂದ ನ್ಯಾಯಾಧೀಶರಿಗೆ ಮನವಿ ಸಲ್ಲಿಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts