More

    ಹುಲಿಹೈದರ್ ಮಾರಾಮಾರಿಗೆ ಪೊಲೀಸ್ ವೈಫಲ್ಯವೇ ಕೊಲೆಗೆ ಕಾರಣ: ಸಿಪಿಐಎಂಎಲ್ ಆರೋಪ

    ಕೊಪ್ಪಳ: ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಗಲಾಟೆ ನಡೆಯುವ ಮುನ್ಸೂಚನೆ ಇದ್ದರೂ ಪೊಲೀಸರು ನಿರ್ಲಕ್ಷೃವಹಿಸಿದ್ದಕ್ಕೆ ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಪ್ರಕರಣದಲ್ಲಿ ಒಳ ಸಂಚು ರೂಪಿಸಿದವರನ್ನು ಬಿಟ್ಟು ಅಮಾಯಕರನ್ನು ಬಂಧಿಸಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ.ರೋಜಾರಿಯೋ ಆಗ್ರಹಿಸಿದರು.
    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಳೇ ವೈಷಮ್ಯ, ರಾಜಕೀಯ ಸ್ಥಿರತೆ ಕಾಪಾಡಿಕೊಳ್ಳಲು ಅಮಾಯಕರನ್ನು ಬಲಿಮಾಡಲಾಗಿದೆ. ಗ್ರಾಮದ ಜನ ಭಯಗೊಂಡು ಹೊರ ಬರಲು ಹೆದರುತ್ತಿದ್ದಾರೆ. ಘಟನೆಗೆ ಕಾರಣ ಯಾರೆಂದು ಇಡೀ ಗ್ರಾಮಕ್ಕೆ ಗೊತ್ತಿದೆ. ಮೂಲ ಸೂತ್ರಧಾರರನ್ನು ಕೈಬಿಟ್ಟು ಅಮಾಯಕರನ್ನು ಬಂಧಿಸಲಾಗುತ್ತಿದೆ. ಗ್ರಾಮದಲ್ಲಿ ಶಾಂತಿ ಸ್ಥಾಪಿಸುವ ಕೆಲಸ ಮಾಡಬೇಕು. ಪೊಲೀಸರು ಸರಿಯಾದ ದಿಕ್ಕಿನಲ್ಲಿ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
    ಎಐಟಿಯುಸಿ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ್ ಮಾತನಾಡಿ, ಯಲ್ಲಾಲಿಂಗನ ಕೊಲೆ ಆರೋಪಿಗಳೇ ಘಟನೆಗೆ ಕಾರಣ. ರಾಜಕೀಯಕ್ಕಾಗಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಗಲಾಟೆ ನಡೆಯುವ ಮುನ್ನ ಕೆಲವರು ಚಾಕು, ಚೂರಿ ಹಿಡಿದು ಓಡಾಡಿದ್ದಾರೆ. ತಕ್ಷಣವೇ ಅಂಥವರ ವಿರುದ್ಧ ಕ್ರಮ ಕೈಗೊಂಡಿದ್ದಲ್ಲಿ ಕೊಲೆಗಳನ್ನು ತಡೆಯಬಹುದಿತ್ತು. ಹೋರಾಟಗಾರ ಸಣ್ಣ ಹನುಮಂತಪ್ಪನನ್ನು ಪ್ರಕರಣದಲ್ಲಿ ಬೇಕೆಂದೇ ಸಿಕ್ಕಿಸಲಾಗಿದೆ. ಇಡೀ ಪ್ರಕರಣದಲ್ಲಿ ಪೊಲೀಸ್ ವೈಫಲ್ಯವೇ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

    ರಾಜ್ಯ ರೈತ ಸಂಘದ ಅಧ್ಯಕ್ಷ ಡಿ.ಎಚ್.ಪೂಜಾರ ಮಾತನಾಡಿ, ಮೃತರ ಕುಟುಂಬಕ್ಕೆ ತಲಾ 50 ಲಕ್ಷ ರೂ. ಹಾಗೂ ಗಾಯಾಳು ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ವಿತರಿಸಬೇಕು. ಗ್ರಾಮದಲ್ಲಿ ಶಾಂತಿ, ಸಹಬಾಳ್ವೆ, ಸಾಮರಸ್ಯ ಸ್ಥಾಪಿಸಬೇಕು. ಗಲಾಟೆಗೆ ಕಾರಣವಾಗುವವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಸಣ್ಣ ಹನುಮಂತಪ್ಪನನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.ಪ್ರಗತಿಪರ ಸಂಘಟನೆಗಳ ಮುಖಂಡರಾದ ಕರಿಯಪ್ಪ ಗುಡಿಮನಿ, ಶರಣಪ್ಪ ಕೊತಬಾಳ, ಪಿ.ಪಿ.ಅಪ್ಪಣ್ಣ, ನಾಗರಾಜ ಪೂಜಾರ, ಪಾಮಣ್ಣ ಕನಕಗಿರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts