More

    ಮಕ್ಕಳ ಆರೋಗ್ಯ ತಪಾಸಣೆ ಕೈಗೊಳ್ಳಿ; ಅಧಿಕಾರಿಗಳಿಗೆ ಜಿಪಂ ಸಿಇಒ ಫೌಜಿಯಾ ತರನ್ನುಮ್ ಸೂಚನೆ

    ಕೊಪ್ಪಳ: ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಗಮನಹರಿಸಿ ತಪಾಸಣೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಪಂ ಸಿಇಒ ಫೌಜಿಯಾ ತರನ್ನುಮ್ ಸೂಚನೆ ನೀಡಿದರು.

    ನಗರದ ಜಿಲ್ಲಾಡಳಿತ ಭವನದ ಕೃಷಿ ಇಲಾಖೆ ಸಭಾಂಗಣದಲ್ಲಿ ರಾಷ್ಟ್ರೀಯ ಬಾಲ ವಿಕಾಸ್ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳಿಗೆ ಕೋವಿಡ್ ವ್ಯಾಕ್ಸಿನ್ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.

    ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಮೊದಲು ಅಂಗನವಾಡಿ ಕೇಂದ್ರ, ನಂತರ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಮಕ್ಕಳಲ್ಲಿ ಕಂಡುಬರುವ ನ್ಯೂನತೆಗಳನ್ನು ಶಾಲಾ ಹಂತದಲ್ಲಿ ದಾಖಲಿಸಿ, ನಂತರ ‘ಸ್ವಾಸ್ಥ್ಯ ವೆಬ್ ಕಿರಣ್’ ಪೋರ್ಟಲ್‌ಗೂ ಅಪ್‌ಲೋಡ್ ಮಾಡಬೇಕು. ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಿ, ಆರೋಗ್ಯವಂತರನ್ನಾಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾಳಜಿ ವಹಿಸಬೇಕು. ಕಾರ್ಯಕ್ರಮದ ಬಗ್ಗೆ 10 ದಿನಗಳಿಗೊಮ್ಮ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್-19 ಲಸಿಕೆಯ ಪ್ರಗತಿ ಕುರಿತು 12 ರಿಂದ 14 ವಯಸ್ಸಿನ ಹಾಗೂ 15 ರಿಂದ 17 ವಯಸ್ಸಿನ ಮಕ್ಕಳಲ್ಲಿ ಮೊದಲ ಮತ್ತು ಎರಡನೇ ಡೋಸ್ ಹಾಗೂ ಇನ್ನೂ ವ್ಯಾಕ್ಸಿನ್ ಪಡೆಯದ ಮಕ್ಕಳ ಪಟ್ಟಿ ಬಿಇಒಗಳು ತಮ್ಮ ವ್ಯಾಪ್ತಿಯ ಶಾಲೆಗಳಿಂದ ಪಡೆಯಬೇಕು. ತಾಲೂಕು ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರ ಜತೆ ಚರ್ಚಿಸಿ ಮಕ್ಕಳಿಗೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕು. ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕಿರುವ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಮಾಹಿತಿಯನ್ನು ಪಪೂ ಶಿಕ್ಷಣ ಇಲಾಖೆಯಿಂದ ಪಡೆದು ಆ ಮಕ್ಕಳಿಗೂ ಲಸಿಕೆ ನೀಡುವಂತೆ ಕ್ರಮ ಕೈಗೊಳ್ಳಬೇಕು. ಗಂಟಲು ಮಾರಿ ಹಾಗೂ ಧನುರ್ವಾಯು ರೋಗದ ಮುಂಜಾಗ್ರತಾ ಕ್ರಮವಾಗಿ ಮಕ್ಕಳಿಗೆ ನೀಡುವ ಡಿಪಿಟಿ-5, ಟಿಡಿ-10 ಹಾಗೂ ಟಿಡಿ-16 ಲಸಿಕೆ ನೀಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

    ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ ಪ್ರಕಾಶ ವಿ. ಮಾತನಾಡಿದರು. ಜಿಪಂ ಉಪಕಾರ್ಯದರ್ಶಿ ಸಮೀರ್ ಮುಲ್ಲಾ, ಡಿಎಚ್‌ಒ ಡಾ. ಅಲಕನಂದಾ ಮಳಗಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ, ಡಿಡಿಪಿಐ ಎಂ.ರೆಡ್ಡೆರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts