More

    ಹಿಂದುಳಿದ ವರ್ಗಗಳ ಹಿತರಕ್ಷಣೆಗೆ ಹಾಲುಮತ ಬದ್ಧ; ಬೇವಿನಹಳ್ಳಿಯಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿಕೆ

    ಕೊಪ್ಪಳ: ದೇಶದಲ್ಲಿ ಕುರುಬರ ಜನಸಂಖ್ಯೆ 12 ಕೋಟಿ ಇದ್ದು, ಕರ್ನಾಟಕದಲ್ಲಿ ಮೂರನೇ ಅತಿದೊಡ್ಡ ಸಮುದಾಯವಾಗಿದೆ. ಆದರೆ, ಅದಕ್ಕೆ ತಕ್ಕಂತೆ ಶಾಸಕರನ್ನು ಗೆಲ್ಲಿಸಿಕೊಳ್ಳದಿರುವುದು ದುರಂತ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

    ಬೇವಿನಹಳ್ಳಿಯಲ್ಲಿ ಹಾಲುಮತ ಧರ್ಮ ಪ್ರಚಾರ ಯಾತ್ರೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ದೊಡ್ಡಣ್ಣನಂತಿರುವ ಕುರುಬ ಸಮುದಾಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದೆ. ದೇಶದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ ಸೇರಿ ಇತರ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಿದ್ದೇವೆ. ರಾಜ್ಯದಲ್ಲಿ ಅನೇಕ ಹಿಂದುಳಿದ ಸಮುದಾಯಗಳಿವೆ. ಅವುಗಳ ಹಿತರಕ್ಷಣೆ ಹಾಲುಮತ ಸಮುದಾಯದ ಮೇಲಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡಲು ಬದ್ಧವಾಗಿದೆ ಎಂದು ತಿಳಿಸಿದರು.

    ಕನ್ನಡ ವಿವಿ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಮಾತನಾಡಿ, ರಾಜ್ಯದಲ್ಲಿ ಕುರುಬ ಸಮುದಾಯ ಸಂಘಟನೆಯಾಗಿದೆ. ಆದ್ದರಿಂದ ವಿಧಾನಸೌಧದಲ್ಲಿ ಡೊಳ್ಳು ಬಾರಿಸಿದ್ದೇವೆ. ಆದರೆ, ಸಂಸತ್‌ನಲ್ಲಿ ಸದ್ದು ಮಾಡಬೇಕಿದೆ. ಅದಕ್ಕಾಗಿ ಸಮುದಾಯ ಮತ್ತಷ್ಟು ಸಂಘಟಿತವಾಗಬೇಕು. ಅಕ್ಷರ ಎಂಬುದು ಹುಲಿಯ ಹಾಲು ಇದ್ದಂತೆ. ಈ ಹಾಲು ಕುಡಿದವರು ಅನ್ಯಾಯದ ವಿರುದ್ಧ ಗರ್ಜಿಸಲೇಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಸಂವಿಧಾನ ವಿರೋಧಿಗಳ ಬಗ್ಗೆ ಸದಾ ಗರ್ಜಿಸುತ್ತಿದ್ದಾರೆ. ಆದ್ದರಿಂದಲೇ ಮೊಟ್ಟೆ ಎಸೆಯುವಂತಹ ದುಷ್ಕೃತ್ಯ ನಡೆದಿದೆ. ಇದಕ್ಕೆ ಹೆದರುವ ಅಗತ್ಯವಿಲ್ಲ ಎಂದರು.

    ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಮಾತನಾಡಿದರು. ಕಾಗಿನೆಲೆ ಕನಕ ಗುರುಪೀಠದ ತಿಂಥಣಿ ಬ್ರಿಡ್ಜ್ ಶಾಖಾಮಠದ ಸಿದ್ಧರಾಮಾನಂದಪುರಿ ಸ್ವಾಮೀಜಿ ತುಲಾಭಾರ ನೆರವೇರಿಸಲಾಯಿತ. ಮೈಸೂರು ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ, ಜಡೇಶ್ವರ ಶಾಖಾಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯುವ ಮುಖಂಡ ನಿಕೇತ್‌ರಾಜ್ ಉಪನ್ಯಾಸ ನೀಡಿದರು.

    ಮಾಜಿ ಶಾಸಕರಾದ ಬಸವರಾಜ ಹಿಟ್ನಾಳ್, ದೊಡ್ಡನಗೌಡ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷರಾದ ಕೆ.ರಾಜಶೇಖರ್ ಹಿಟ್ನಾಳ್, ಜನಾರ್ದನ ಹುಲಿಗಿ, ಮುಖಂಡರಾದ ಸಿದ್ದಪ್ಪ ನೀರಲೂಟಿ, ಭರಮಪ್ಪ ನಗರ, ವೀರನಗೌಡ ಬಳೂಟಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts