More

  ಸೆಟ್ಟೇರಿತ್ತು ದುನಿಯಾ ವಿಜಯ್​ ನಟನೆಯ 29ನೇ ಚಿತ್ರ; ಅಪ್ಪನ ಚಿತ್ರದ ಮೂಲಕವೇ ಸ್ಯಾಂಡಲ್​ವುಡ್​ಗೆ ಮಗಳ ಎಂಟ್ರಿ

  ಬೆಂಗಳೂರು: ಸಲಗ ಬಳಿಕ ಭೀಮಾ ಚಿತ್ರದಲ್ಲಿ ಬ್ಯುಸಿಯಾಗಿದ್ದ ದುನಿಯಾ ವಿಜಯ್​ ನಟನೆಯ 29ನೇ ಚಿತ್ರ ಗುರುವಾರ (ಏಪ್ರಿಲ್​ 11) ಸೆಟ್ಟೇರಿದೆ. ಈ ಚಿತ್ರದ ಮೂಲಕ ದುನಿಯಾ ವಿಜಯ್​ ಅವರ ಪುತ್ರಿ ರಿತನ್ಯ (ಮೋನಿಕಾ) ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

  ಜೆಂಟಲ್​ಮ್ಯಾನ್​, ಗುರುಶಿಷ್ಯರು ನಿರ್ದೇಶಿಸಿದ್ದ ಕಾಟೇರ ಚಿತ್ರದಲ್ಲಿ ಬರಹಗಾರರಾಗಿ ಕೆಲಸ ಮಾಡಿದ್ದ ಜಡೇಶ್​ ಕುಮಾರ್​ ಹಂಪಿ ನಿರ್ದೇಶಿಸುತ್ತಿದ್ದು, ಈ ಹಿಂದೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟೆಯ ಸಾರಥಿ ಸಿನಿಮಾ ನಿರ್ಮಿಸಿದ್ದ ಕೆ‌.ವಿ. ಸತ್ಯಪ್ರಕಾಶ್ ಅವರು 12 ವರ್ಷಗಳ ಬಳಿಕ ಸಾರಥಿ ಫಿಲ್ಮ್ಸ್​ ಮೂಲಕ ಹೊಸ ಸಿನಿಮಾ ನಿರ್ಮಿಸುತ್ತಿದ್ದಾರೆ. 

  ಈ ವೇಳೆ ಮಾತನಾಡಿರುವ ನಟ ದುನಿಯಾ ವಿಜಯ್​, ಇಂದು ನಾನು ಚಿತ್ರರಂಗಕ್ಕೆ ಕಾಲಿಟ್ಟು 30 ವರ್ಷಗಳು ಕಳೆದವು. ಅದೇ ನಾನು ಮಗಳಿಗೆ ಹೇಳುತ್ತಿದ್ದೆ. ನಾನು ಸರ್ಕಸ್ ಮಾಡಿ ಇವತ್ತಿಗೆ 30 ವರ್ಷ ಆಯ್ತು. ಈ ಸ್ಥಾನಕ್ಕೆ ಬರುವುದಕ್ಕೆ 18 ವರ್ಷ ಬೇಕಾಯ್ತು. ಅದಕ್ಕೂ ಮುಂಚೆ ಹೀರೋ ಆಗುವುದಕ್ಕೆ ಸರ್ಕಸ್ ಹೊಡೆದಿದ್ದು, ಇಲ್ಲಿವರೆಗೂ ಬರೋಕೆ ನನಗಾದ ಆ ಅವಮಾನ ಹಾಗೂ ನೋವುಗಳು ನನ್ನ ಮೆಟ್ಟಿಲು ಅದನ್ನು ಸುಲಭವಾಗಿ ಹತ್ತಿಸಿಕೊಂಡು ಬಂದು ನಿನಗೆ ಕೊಡುತ್ತಿದ್ದೇನೆ. ಅದನ್ನು ಹುಷಾರಾಗಿ ಕಾಪಾಡಿಕೊಂಡು ಹೋಗು ಎಂದು ಮಗಳಿಗೆ ಹೇಳುತ್ತಿದ್ದೆ. ನನ್ನ ಮಗಳು ಮುಂಬೈನ ಅನುಪಮ್ ಖೇರ್ ಸಂಸ್ಥೆಯಲ್ಲಿ ಅಭಿನಯ ಕಲಿತು ಬಂದಿದ್ದಾಳೆ. ಈ ಸಿನಿಮಾದಲ್ಲೂ ನನ್ನ ಮಗಳ ಪಾತ್ರದಲ್ಲೇ ಅಭಿನಯಿಸುತ್ತಿದ್ದಾಳೆ ಎಂದು ನಟ ದುನಿಯಾ ವಿಜಯ್​ ಹೇಳಿದ್ದಾರೆ.

  VK 29

  ಇದನ್ನೂ ಓದಿ: ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್​ಸಿಬಿ; ಮಹತ್ವದ ಪಂದ್ಯದಲ್ಲಿ ಬದಲಾವಣೆ ಖಚಿತ!

  ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಜಡೇಶ್​ ಕುಮಾರ್​ ಹಂಪಿ, ಇದು ನಾನು ಕಂಡು, ಕೇಳಿದ ನೈಜ ಕಥೆ. ಇದು ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ. ಕೋಲಾರ ಭಾಗದ ಕಥೆಯಾದ್ದರಿಂದ ಸಂಭಾಷಣೆ ಆ ಶೈಲಿಯಲ್ಲೇ ಇರಲಿದೆ. ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. 90ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶಿವರಾಮ ಕಾರಂತರು ಬರೆದ ಚೋಮನ ದುಡಿ ಕಾದಂಬರಿಯ ಚೋಮನ ಪಾತ್ರವೇ ಈ ಸಿನಿಮಾಗೆ ಸ್ಫೂರ್ತಿ. ಆದರೆ ಆ ಪುಸ್ತಕಕ್ಕೂ ಈ ಸಿನಿಮಾಗೂ ಸಂಬಂಧ ಇಲ್ಲ ಎಂದು ನಿರ್ದೇಶಕ ಜಡೇಶ್​ ಕುಮಾರ್​ ಹೇಳಿದ್ದಾರೆ.

  ಚಿತ್ರದಲ್ಲಿ ದುನಿಯಾ ವಿಜಯ್​ಗೆ ನಾಯಕಿಯಾಗಿ ರಚಿತಾ ರಮ್​ ನಟಿಸುತ್ತಿದ್ದು, ಬೆಂಗಳೂರಿನಲ್ಲಿ ಬೃಹತ್​ ಸೆಟ್​ ನಿರ್ಮಿಸಲಾಗುತ್ತಿದೆ. ಕೋಲಾರ ಹಾಗೂ ಮೈಸೂರಿನಲ್ಲೂ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಸ್ವಾಮಿ ಗೌಡ ಛಾಯಾಗ್ರಹಣ ಮಾಡುತ್ತಿದ್ದು, ಚಿತ್ರದ ಶೀರ್ಷಿಕೆಯನ್ನು VK29 ಎಂದು ಇಡಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts