More

    ಸಕಾಲಕ್ಕೆ ಅರ್ಜಿ ವಿಲೇವಾರಿ ಮಾಡಿ; ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಸೂಚನೆ

    ಕೊಪ್ಪಳ: ಸಕಾಲ ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ ಸಲ್ಲಿಕೆ ಆಗುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಸೂಚಿಸಿದರು.

    ನಗರದ ಜಿಲ್ಲಾಡಳಿತ ಭವನದ ಡಿಸಿ ಕಚೇರಿ ಸಭಾಂಗಣದಲ್ಲಿ ಸಕಾಲ ಹಾಗೂ ಐಪಿಜಿಆರ್‌ಎಸ್ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ಸಕಾಲ ಯೋಜನೆಯಡಿ 45 ಇಲಾಖೆಗಳು ಒಳಪಡುತ್ತವೆ. ಪ್ರತಿ ಅರ್ಜಿ ವಿಲೇವಾರಿಗೂ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಲಾಗಿದೆ. ಆದಾಗ್ಯೂ ಕೆಲ ಇಲಾಖೆಗಳು ಅರ್ಜಿ ವಿಲೇವಾರಿ ಹಾಗೂ ತಿರಸ್ಕಾರಕ್ಕೆ ಕೊನೆಯ ದಿನದವರೆಗೂ ಕಾಯುತ್ತವೆ. ಇದರಿಂದ ಸಮಯ ವ್ಯರ್ಥವಾಗಲಿದೆ.

    ಆದ್ದರಿಂದ ಸೇವೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಲಗತ್ತಿಸಿ ನೀಡುವಂತೆ ಅರ್ಜಿ ಸ್ವೀಕಾರ ಸಮಯದಲ್ಲಿ ತಿಳಿಸಬೇಕು. ಕೊನೆಯ ದಿನದವರೆಗೂ ಕಾದು ದಾಖಲೆ ಕೊರತೆ ಕಾರಣ ನೀಡಿ ಅರ್ಜಿ ತಿರಸ್ಕರಿಸಬೇಡಿ. ಇದರಿಂದ ಅನಗತ್ಯ ವಿಳಂಬ ಉಂಟಾಗಿ, ಅರ್ಜಿದಾರರಿಗೂ ಸಮಸ್ಯೆ ಆಗಲಿದೆ. ಸಂಬಂಧಿಸಿದ ಅಧಿಕಾರಿ, ವಿಷಯ ನಿರ್ವಾಹಕರು ದಂಡ ಪಾವತಿಸಬೇಕಾಗಬಹುದು ಎಂದು ಡಿಸಿ ಎಚ್ಚರಿಸಿದರು.

    ಸಕಾಲ ಅರ್ಜಿಗಳ ನಿರ್ವಹಣೆಗಾಗಿಯೇ ಎಲ್ಲ ಇಲಾಖೆಗಳಲ್ಲಿ ಒಬ್ಬ ಅಧಿಕಾರಿ ಅಥವಾ ನೌಕರನನ್ನು ನಿಯೋಜಿಸಬೇಕು. ಕಂದಾಯ, ಜಿಪಂ ಅಡಿ ಬರುವ ಎಲ್ಲ ಇಲಾಖೆಗಳು ಕಡ್ಡಾಯವಾಗಿ ಅರ್ಜಿ ಸ್ವೀಕರಿಸಬೇಕು. ಸಕಾಲದಂತೆ ಸಾರ್ವಜನಿಕರ ಅಹವಾಲು ಸ್ವೀಕಾರಕ್ಕಾಗಿ ಐಪಿಜಿಆರ್‌ಎಸ್ ತಂತ್ರಾಂಶವನ್ನು ಸರ್ಕಾರ ಜಾರಿಗೊಳಿಸಿದೆ. ಇದು ನೇರವಾಗಿ ಸಿಎಂ ಡ್ಯಾಶ್‌ಬೋರ್ಡ್‌ನಲ್ಲಿ ಕಾರ್ಯನಿರ್ವಹಿಸುವುದರಿಂದ ಜಿಲ್ಲೆಯಲ್ಲಿ ಸ್ವೀಕೃತವಾಗುವ ಅರ್ಜಿ, ವಿಲೇವಾರಿ ಕುರಿತ ಮಾಹಿತಿ ಅವರ ಗಮನಕ್ಕೆ ಬರುತ್ತದೆ.

    ಆದ್ದರಿಂದ ಸ್ವೀಕೃತವಾಗುವ ಅರ್ಜಿಗಳಿಗೆ ಸೂಕ್ತ ಹಿಂಬರಹದೊಂದಿಗೆ ಸಂಬಂಧಿಸಿದ ಇಲಾಖೆಗೆ ವರ್ಗಾಯಿಸಬೇಕು. ಸಕಾಲದಂತೆ ಇಲ್ಲಿಯೂ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಜಿಪಂ ಉಪಕಾರ್ಯದರ್ಶಿ ಸಮೀರ್ ಮುಲ್ಲಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts