More

    ಕೊಪ್ಪಳಕ್ಕೆ ಕೈ ತಪ್ಪಲಿದೆಯಾ ಉಡಾನ್?

    ಸರ್ಕಾರಕ್ಕೆ ಮಣಿಯದ ಕಂಪನಿ | ಬಾಗಲಕೋಟೆಯಿಂದ ಪ್ರಸ್ತಾವನೆ ಸಲ್ಲಿಕೆ

    ವಿ.ಕೆ. ರವೀಂದ್ರ

    ಕೊಪ್ಪಳ: ಜಿಲ್ಲೆಗೆ ಉಡಾನ್ ಯೋಜನೆ ಘೊಷಣೆಯಾಗಿ 2 ವರ್ಷ ಕಳೆದರೂ ಅನುಷ್ಠಾನವಾಗುತ್ತಿಲ್ಲ. ಅತ್ತ ಬಾಗಲಕೋಟೆಯಲ್ಲೂ ವೈಮಾನಿಕ ಸೇವೆ ಆರಂಭಿಸುವಂತೆ ಅಲ್ಲಿನ ಜನಪ್ರತಿನಿಧಿಗಳು ಸರ್ಕಾರದ ಬೆನ್ನುಬಿದ್ದಿದ್ದು, ಯೋಜನೆಯನ್ನು ಅಲ್ಲಿಗೆ ವರ್ಗಾಯಿಸಿದರೂ ಅಚ್ಚರಿಯಿಲ್ಲ!

    ಪ್ರಾದೇಶಿಕ ವಿಮಾನ ಯಾನ ಯೋಜನೆ ಆರಂಭಿಸಿರುವ ಕೇಂದ್ರ ಸರ್ಕಾರ, ಸಾಮಾನ್ಯರು ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದು ಹೇಳಿಕೊಂಡಿದೆ. ಕಳೆದ ಅವಧಿಯ ಕೇಂದ್ರ ಸರ್ಕಾರದಲ್ಲಿ ವಿಮಾನ ಯಾನ ಸಚಿವರಾಗಿದ್ದ ಅಶೋಕ ಗಜಪತಿ ರಾಜು ಅವರು, ಎರಡನೇ ಹಂತದಲ್ಲಿ ಕೊಪ್ಪಳಕ್ಕೂ ಉಡಾನ್ ಯೋಜನೆ ಘೋಷಿಸಿದ್ದರು. ಬಸಾಪುರ ಬಳಿಯ ಬಲ್ಡೋಟಾ ವಿಮಾನ ನಿಲ್ದಾಣದಿಂದ ಗೋವಾ, ಹೈದರಬಾದ್ ಹಾಗೂ ಬೆಂಗಳೂರಿಗೆ ವಿಮಾನ ಸೇವೆ ಕಲ್ಪಿಸುವುದಾಗಿ ಘೋಷಿಸಿದ್ದರು. ಇದೇ ಅವಧಿಯಲ್ಲಿ ಘೋಷಣೆಯಾದ ಹುಬ್ಬಳ್ಳಿ, ಕಲಬುರಗಿ ಯೋಜನೆಗಳು ಆರಂಭವಾಗಿವೆ. ಆದರೆ, ವಿಮಾನ ನಿಲ್ದಾಣ ನೀಡಲು ಎಂಎಸ್‌ಪಿಎಲ್ ಕಂಪನಿ ಒಪ್ಪದ ಕಾರಣ ಜಿಲ್ಲೆಯಲ್ಲಿ ಯೋಜನೆ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಜಿಲ್ಲಾಡಳಿತವಷ್ಟೇ ಅಲ್ಲದೆ, ಸರ್ಕಾರದ ಹಂತದಲ್ಲೂ ವರ್ಷಗಳಿಂದ ಸಭೆಗಳು ನಡೆಯುತ್ತಿವೆಯೇ ವಿನಾ, ಯೋಜನೆ ಅನುಷ್ಠಾನವಾಗುತ್ತಿಲ್ಲ.

    ಈಗಾಗಲೇ ಪಕ್ಕದ ಬಳ್ಳಾರಿ ಜಿಲ್ಲೆಯ ಜಿಂದಾಲ್‌ನಿಂದ ವಿಮಾನ ಯಾನ ಸೇವೆ ಆರಂಭವಾಗಿದ್ದು, ಕೊಪ್ಪಳದಿಂದ ಕೇವಲ 70 ಕಿ.ಮೀ. ಅಂತರವಿದೆ. ಅಲ್ಲಿಯೇ ನಿರೀಕ್ಷಿತ ಪ್ರಯಾಣಿಕರು ಓಡಾಡುತ್ತಿಲ್ಲವೆಂದು ಹೇಳುತ್ತಿರುವ ಕಂಪನಿ ಅಧಿಕಾರಿಗಳು, ನೆಪ ಹೇಳುತ್ತಾ ದಿನದೂಡುತ್ತಿದ್ದಾರೆ. ಅಲ್ಲದೆ, ಸರ್ಕಾರದ ಹಂತದಲ್ಲಿ ಪ್ರಭಾವ ಬೀರಿ ಕೊಪ್ಪಳಕ್ಕೆ ಮಂಜೂರಾಗಿದ್ದ ಗೋವಾ ಮಾರ್ಗವನ್ನು ಜಿಂದಾಲ್‌ಗೆ ವರ್ಗಾಯಿಸಲಾಗಿದೆ. ಜಿಲ್ಲೆಯಲ್ಲಿ ಮೂವರು ಬಿಜೆಪಿ ಶಾಸಕರು, ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ, ಕೇಂದ್ರದಿಂದ ಘೋಷಣೆಯಾದ ಯೋಜನೆಯನ್ನು ಅನುಷ್ಠಾನಗೊಳಿಸಲು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಅನುಮಾನ ಮೂಡಿಸಿದ ತಟಸ್ಥ ನೀತಿ : ನಿಲ್ದಾಣ ನೀಡದ ಬಲ್ಡೋಟಾ ಕಂಪನಿ, ಜಿಲ್ಲೆಯಲ್ಲಿ ಭೂಮಿ ಖರೀದಿ ಸೇರಿ ಇತರ ವಿಷಯಗಳಲ್ಲಿ ನಿಯಮ ಉಲ್ಲಂಘನೆ ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರ, ಜಿಲ್ಲಾಧಿಕಾರಿಯಿಂದ ಮಾಹಿತಿ ತರಿಸಿಕೊಂಡಿದೆ. ಅಲ್ಲದೆ, ಮುಂದೆಯೂ ಯಾವುದೇ ಸೌಲಭ್ಯ ನೀಡದಂತೆ ಮೌಖಿಕವಾಗಿ ಅಧಿಕಾರಿಗಳಿಗೆ ಆದೇಶಿಸಿದೆ. ಹಿಂದೆ ನಿಯಮಬಾಹಿರವಾಗಿ ಭೂಮಿ ಮಂಜೂರು ಮಾಡಿರುವುದು ಹಾಗೂ ಕಂಪನಿ ಕಾನೂನು ಉಲ್ಲಂಘಿಸಿದಾಗ ಕ್ರಮ ಕೈಗೊಳ್ಳದಿರುವ ಅಧಿಕಾರಿಗಳ ಮಾಹಿತಿಯನ್ನು ಕೇಳಿದೆ ಎನ್ನಲಾಗಿದೆ. ಮತೊಂದೆಡೆ ಕೊಪ್ಪಳಕ್ಕೆ ಮಂಜೂರಾಗಿದ್ದ ಕೊಪ್ಪಳ-ಗೋವಾ ಮಾರ್ಗವನ್ನು ಜಿಂದಾಲ್‌ಗೆ ವರ್ಗಾಯಿಸಿ ಆದೇಶಿಸುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತಿದೆ. ಕಂಪನಿ ನಿಲ್ದಾಣ ನೀಡದಿದ್ದರೂ ಸರ್ಕಾರ ವಶಪಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಅಥವಾ ಸರ್ಕಾರಿ ಜಾಗದಲ್ಲಿ ಮೂಲಸೌಕರ್ಯ ಕಲ್ಪಿಸಿಕೊಡಬಹುದು. ಇಷ್ಟೆಲ್ಲ ಅವಕಾಶಗಳಿದ್ದರೂ ಸರ್ಕಾರ ತಟಸ್ಥವಾಗಿರುವುದು ಅನುಮಾನ ಮೂಡಿಸಿದೆ.

    ಆ ಜಿಲ್ಲೆಗೆ ವರ್ಗಾಯಿಸಿದರೂ ಅಚ್ಚರಿಯಿಲ್ಲ ಸದ್ಯ ಕೊಪ್ಪಳ, ಬಾಗಲಕೋಟೆ ಭಾಗದವರು ವಿಮಾನ ಪ್ರಯಾಣ ಮಾಡಬೇಕೆಂದರೆ ಬಳ್ಳಾರಿಯ ಜಿಂದಾಲ್‌ನಿಂದ ಓಡಾಡಬೇಕಿದೆ. ಕೊಪ್ಪಳಕ್ಕೆ ಉಡಾನ್ ಯೋಜನೆ ಘೋಷಣೆಯಾದಾಗ ಬಾಗಲಕೋಟೆಯವರಿಗೂ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಅಲ್ಲಿನ ಜನಪ್ರತಿನಿಧಿಗಳು ಬೆಂಬಲಿಸಿದ್ದರು. ಆದಷ್ಟು ಬೇಗನೆ ಯೋಜನೆ ಅನುಷ್ಠಾನಗೊಳಿಸುವಂತೆ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳೊಡಗೂಡಿ ಸರ್ಕಾರಕ್ಕೆ ಒತ್ತಾಯಿಸಿದ್ದರು. ಇತ್ತೀಚೆಗೆ ಬಾಗಲಕೋಟೆಯಲ್ಲೂ ವಿಮಾನಯಾನ ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿದ್ದು, ಅಲ್ಲಿನ ಜನಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಗೋವಾ ಮಾರ್ಗ ವರ್ಗಾಯಿಸಿರುವ ಸರ್ಕಾರ, ಉಳಿದ ಮಾರ್ಗಗಳನ್ನು ಬಾಗಲಕೋಟೆಗೆ ವರ್ಗಾಯಿಸಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.


    ನಾವೆಷ್ಟೇ ಮನವೊಲಿಸಿದರೂ ಬಲ್ಡೋಟಾ ಕಂಪನಿ ಯವರು ನಿಲ್ದಾಣ ನೀಡಲು ಒಪ್ಪುತ್ತಿಲ್ಲ. ಹೀಗಾಗಿ ಕಂಪನಿ, ಸರ್ಕಾರದಿಂದ ನಿರೀಕ್ಷಿಸುವ ಸೌಲಭ್ಯ ನಿಲ್ಲಿಸುವಂತೆ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಅಧಿವೇಶನ ಮುಗಿದ ಬಳಿಕ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚೆ ಮಾಡಲಾಗುವುದು.
    | ಸಂಗಣ್ಣ ಕರಡಿ, ಕೊಪ್ಪಳ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts