More

    ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಜ್ಜನ ಮಹಾರಥೋತ್ಸವ

    ಕೊಪ್ಪಳ: ನಾಡಿನ ಆರಾಧ್ಯ ದೈವ ಗವಿಸಿದ್ದೇಶ್ವರ ಸ್ವಾಮಿ ಮಹಾರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನದಂತೆ ಸರಳವಾಗಿ ನೆರವೇರಿತು.

    ಪ್ರತಿ ಬಾರಿ ಯಾವುದಾದರೂ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಗಣ್ಯರು ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದರು. ಆದರೆ, ಈ ಬಾರಿ ಕರೊನಾ ಭೀತಿಯಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಜಾತ್ರೆ ಸೀಮಿತವಾಗಿದೆ. ಹೀಗಾಗಿ ಕರೊನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿರುವ ಬಿಜಕಲ್‌ನ 85 ವರ್ಷದ ಶಿವಲಿಂಗ ಸ್ವಾಮೀಜಿ ಧ್ವಜಾರೋಹಣ ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಪ್ರತಿ ವರ್ಷ ಲಕ್ಷಾಂತರ ಭಕ್ತರ ನಡುವೆ ಸಂಜೆ ವೇಳೆ ಜರುಗುತ್ತಿದ್ದ ರಥೋತ್ಸವವನ್ನು ಇದೇ ಮೊದಲ ಬಾರಿಗೆ ಬೆಳಗ್ಗೆ 8.45ಕ್ಕೆ ನೆರವೇರಿಸಲಾಯಿತು. ಭಕ್ತರನ್ನು ನಿರ್ಬಂಧಿಸಿ, ರಥ ಬೀದಿಯಲ್ಲಿ ಗಣ್ಯರು ಹಾಗೂ ಸ್ವಯಂ ಸೇವಕರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ಧ್ವಜಾರೋಹಣವಾಗುತ್ತಲೇ ರಥೋತ್ಸವ ಜರುಗಿತು. ದೂರದಿಂದಲೇ ಭಕ್ತರು ಗವಿಸಿದ್ದೇಶ್ವನಿಗೆ ಜಯಘೋಷ ಕೂಗುತ್ತಾ ಉತ್ತತ್ತಿ, ಬಾಳೆ ಹಣ್ಣು ಅರ್ಪಿಸಿ ಭಕ್ತಿ ಮೆರೆದರು.

    ರಥೋತ್ಸವ ಬಗ್ಗೆ ಮಾತನಾಡಿದ ಶಿವಲಿಂಗ ಸ್ವಾಮೀಜಿ, ಗವಿಶ್ರೀಗಳ ಆಶೀರ್ವಾದದಿಂದ 85ನೇ ವಯಸ್ಸಿನಲ್ಲಿ ಕರೊನಾ ಗೆದ್ದು ಬಂದಿರುವೆ. ಅವರು ಸಮಾನತೆ ಹರಿಕಾರರು. ಯಾರಲ್ಲೂ ಭೇದ ಭಾವ ಎಣಿಸದೆ, ಸರ್ವರನ್ನೂ ಸಮಾನರಾಗಿ ಕಾಣುತ್ತಾರೆ. ಬಸವಣ್ಣನ ತತ್ವ ಸಿದ್ಧಾಂತಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆಂದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಶಾಸಕರಾದ ಅಮರೇಗೌಡ ಬಯ್ಯಪುರ, ರಾಘವೇಂದ್ರ ಹಿಟ್ನಾಳ್ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಜಿಪಂ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್, ಬಿಜೆಪಿ ಮುಖಂಡರಾದ ಅಮರೇಶ ಕರಡಿ, ಸಿ.ವಿ.ಚಂದ್ರಶೇಖರ್ ಜಾತ್ರೋತ್ಸವ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ವಿವಿಧ ಗಣ್ಯರು ಇತರರಿದ್ದರು.

    ಗ್ರಂಥಾಲಯ ಉದ್ಘಾಟನೆ
    ಕಲ್ಯಾಣ ಕರ್ನಾಟಕ ಭಾಗದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಅಭ್ಯಾಸಕ್ಕೆ ಅನುಕೂಲವಾಗಲೆಂದು ಗವಿಶ್ರೀಗಳು 24*7 ಉಚಿತ ಗ್ರಂಥಾಲಯ ಆರಂಭಿಸಿದ್ದಾರೆ. ರಥೋತ್ಸವ ಮುಗಿಯುತ್ತಲೇ ಯುಪಿಎಸ್ಸಿ ಟಾಪರ್ ಗಂಗಾವತಿಯ ವಿನೋದ ಪಾಟೀಲ್ ಗ್ರಂಥಾಲಯ ಉದ್ಘಾಟಿಸಿದರು.

    ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಜ್ಜನ ಮಹಾರಥೋತ್ಸವ
    ರಥೋತ್ಸವ ಅಂಗವಾಗಿ ಶನಿವಾರ ಗವಿಸಿದ್ದೇಶ್ವರ 24*7 ಉಚಿತ ಗ್ರಂಥಾಲಯವನ್ನು ಯುಪಿಎಸ್ಸಿ ರ‌್ಯಾಂಕ್ ಪಡೆದ ಗಂಗಾವತಿಯ ವಿನೋದ ಪಾಟೀಲ್ ಉದ್ಘಾಟಿಸಿದರು. ಅಭಿನವ ಗವಿಶ್ರೀ, ಸಚಿವ ಬಿ.ಸಿ.ಪಾಟೀಲ್ ಇದ್ದರು.

    ತಲೆಯಲ್ಲಿ ಸದ್ವಿಚಾರಗಳಿರಬೇಕು
    ಕರೊನಾದಿಂದಾಗಿ ಜಾತ್ರೆ ನಡೆಯಲ್ಲ ಎಂಬ ಭಾವನೆ ಜನರಲ್ಲಿತ್ತು. ಜಾತ್ರೆ ನಡೆಸಲು ಅಥವಾ ನಿಲ್ಲಿಸಲು ನಾನು ಯಾರು? ಗವಿಸಿದ್ದೇಶನ ಭಕ್ತರ ಭಕ್ತಿಯೆ ಎಲ್ಲ ನಡೆಸುತ್ತದೆ. ಜಾತ್ರೆ ಸರಳ ಆದರೂ, ಸಾಮಾಜಿಕ ಕಾರ್ಯ ಮುಂದುವರಿದಿದೆ ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

    ರಥೋತ್ಸವ ಬಳಿಕ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿ ಮಾತನಾಡಿದರು. ನಾಡಿನ ಜನರ ಆರೋಗ್ಯ ಉತ್ತಮವಾಗಿರುವುದೇ ನಮಗೆ ದೊಡ್ಡ ಜಾತ್ರೆ. ಇಂದು ಕಲ್ಯಾಣ ಕರ್ನಾಟಕ ಭಾಗದ ಸ್ಪರ್ಧಾತ್ಮಕ ಪರೀಕ್ಷೆ ಬರೆವವರಿಗೆ ಅನುಕೂಲವಾಗಲು 24*7 ಉಚಿತ ಗ್ರಂಥಾಲಯ ಆರಂಭಿಸಲಾಗಿದೆ. ಗಿಣಿಗೇರಿ ಕೆರೆ ಹಾಗೂ ಕುಕನೂರು ತಾಲೂಕಿನ ಅಡವಿಹಳ್ಳಿ ದತ್ತು ತೆಗೆದುಕೊಳ್ಳಲಾಗುವುದು. ಯಾರು ಬರಬೇಡಿ ಅಂದರು ಇಷ್ಟು ಸಂಖ್ಯೆಯಲ್ಲಿ ಬಂದಿದ್ದೀರಿ. ಇನ್ನು ಬನ್ನಿ ಎಂದರೆ ಎಷ್ಟು ಜನರು ಬರಬಹುದೆಂದು ಊಹಿಸಿ. ಅದಕ್ಕಾಗಿಯೇ ಈ ವರ್ಷ ನಿಮ್ಮ ಹೃದಯ ಮಂದಿರದಲ್ಲಿ ಅಜ್ಜನ ಜಾತ್ರೆ ನಡೆಸಿ ಎಂದು ನಿಮಗೆ ತಿಳಿಸಿದ್ದೆ. ಪರಿಸ್ಥಿತಿ ಹಾಗೂ ಪರಿಸರಕ್ಕೆ ಹೊಂದಿಕೊಂಡು ನಾವು ನಡೆಯಬೇಕು. ಜಾತ್ರೆ ನಡೆಸುವುದಕ್ಕಿಂತ ಸಾಮಾಜಿಕ ಕಾರ್ಯ ಮುಖ್ಯ. ತಲೆಯಲ್ಲಿ ಸದ್ವಿಚಾರ, ಸದಾ ಒಳ್ಳೆಯ ಕೆಲಸದ ಆಲೋಚನೆ, ಮನದಲ್ಲಿ ಭಗವಂತನ ಸ್ಮರಣೆ ಇರಬೇಕು ಎಂದರು.

    ಜಾತ್ರೆಯಲ್ಲಿ ಭಾಗಿಯಾಗಿರುವುದು ನನ್ನ ಪುಣ್ಯ
    ನಾನು ಕನಸಿನಲ್ಲಿ ಕೂಡ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವನಾಗುತ್ತೇನೆ ಎಂದು ಭಾವಿಸಿರಲಿಲ್ಲ. ಇದೆಲ್ಲ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಯ ಫಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ರಥೋತ್ಸವಕ್ಕೂ ಮುನ್ನ ಭಕ್ತರನ್ನುದ್ದೇಶಿಸಿ ಮಾತನಾಡಿ, ಕೊಪ್ಪಳ ಜಿಲ್ಲೆ ಉಸ್ತುವಾರಿ ಸಿಕ್ಕಿರುವುದು ನನ್ನ ಪುಣ್ಯ. ಇಲ್ಲದಿದ್ದರೆ ಇಂಥ ಮಹಾ ಜಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯುತ್ತಿರಲಿಲ್ಲ. ಐತಿಹಾಸಿಕ ಪರಂಪರೆ ಹೊಂದಿರುವ ಗವಿಮಠ ಜಾತ್ರೆಗೆ ಲಕ್ಷ ಲಕ್ಷ ಜನ ಸೇರುತ್ತಾರೆ. ಈ ಬಾರಿ ಕರೊನಾ ಕಾರಣ ಸರಳ ಆಚರಣೆ ಮಾಡಲಾಗಿದೆ. ಆದರೂ, ಇಷ್ಟೊಂದು ಜನ ಸೇರಿದ್ದಾರೆ. ಶ್ರೀಗಳ ಆಶಯದಂತೆ ಕಾನೂನು ಚೌಕಟ್ಟಿನೊಳಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಎಲ್ಲರೂ ಕರೊನಾ ವಿರುದ್ಧದ ಹೋರಾಟಕ್ಕೆ ಸಹಕರಿಸಿ ಎಂದರು.

    ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಜ್ಜನ ಮಹಾರಥೋತ್ಸವ

    ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಮಹಾದಾಸೋಹದಲ್ಲಿ ಸಿಹಿ ಪದಾರ್ಥ ಅಡುಗೆ ವೀಕ್ಷಿಸಿದ ಗವಿಶ್ರೀಗಳು.
    ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಜ್ಜನ ಮಹಾರಥೋತ್ಸವ
    ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಪ್ರಸಾದ ಸವಿದ ಭಕ್ತರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts