More

    ಬಿಎಸ್‌ವೈ ಮೋದಿ ಬಳಿ ನಿಯೋಗ ಒಯ್ಯಲಿ ಎಂದು ಒತ್ತಾಯಿಸಿದ ಮಾಜಿ ಸಚಿವ ಬಸವರಾಜ ರಾಯರಡ್ಡಿ ಒತ್ತಾಯ

    ಕೃಷ್ಣಾ ಬಿ ಸ್ಕೀಂ ಟ್ರಿಬ್ಯುನಲ್ ತೀರ್ಪು ಪ್ರಶ್ನಿಸಿ ಆಂಧ್ರ ಸರ್ಕಾರ ಸುಪ್ರಿಂಕೋರ್ಟ್ ಮೆಟ್ಟಿಲೇರಿದ ಬಗ್ಗೆ ಪ್ರಸ್ತಾಪ

    ಕೊಪ್ಪಳ: ಕೃಷ್ಣಾ ಬಿ ಸ್ಕೀಂ ಟ್ರಿಬ್ಯುನಲ್ ತೀರ್ಪು ಪ್ರಶ್ನಿಸಿ ಆಂಧ್ರ ಸರ್ಕಾರ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದು, ಈ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಸರ್ವ ಪಕ್ಷಗಳ ನಿಯೋಗವನ್ನು ಸಿಎಂ ಬಿಎಸ್‌ವೈ ಕೊಂಡೊಯ್ಯಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಒತ್ತಾಯಿಸಿದರು.

    ಪರಿಸ್ಥಿತಿ ಹೀಗಿರುವಾಗ ಸ್ಥಳೀಯ ಬಿಜೆಪಿ ನಾಯಕರು ವರ್ಷದೊಳಗೆ ಯೋಜನೆ ಅನುಷ್ಠಾನಗೊಳಿಸುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಮೊದಲ ಹಂತ ಮಾತ್ರ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ 9 ಯೋಜನೆಗಳಿದ್ದು, ಕೊಪ್ಪಳ ಏತ ನೀರಾವರಿಯೂ ಅದರಲ್ಲೊಂದು. 2010ರಲ್ಲಿ ನ್ಯಾ.ಬ್ರಿಜೀಶ್ ಕುಮಾರ್ ಆಯೋಗವು ಕರ್ನಾಟಕಕ್ಕೆ 173 ಟಿಎಂಸಿ ನೀರು ಹಂಚಿಕೆ ಮಾಡಿದೆ. 130 ಟಿಎಂಸಿ ಆಲಮಟ್ಟಿ ಹಾಗೂ 36 ಟಿಎಂಸಿ ನೀರು ತುಂಗಭದ್ರಾದಿಂದ ಬಳಸಿಕೊಳ್ಳಲು ಒಪ್ಪಿಗೆ ನೀಡಿತ್ತು. ನೀರು ಹಂಚಿಕೆಯಾಗಬೇಕಾದರೆ ಆಲಮಟ್ಟಿ ಜಲಾಶಯವನ್ನು 524 ಮೀಟರ್‌ಗೆ ಎತ್ತರಿಸಬೇಕು. ಆಗ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಕೊಪ್ಪಳ ಏತ ನೀರಾವರಿಗೆ ಅಡಿಗಲ್ಲು ಹಾಕಿದ್ದರು. ಈಗ ಟೆಂಡರ್ ಕರೆಯಲಾಗಿದೆ. ಹೀಗಿರುವಾಗ ಒಂದು ವರ್ಷದೊಳಗೆ ನೀರಾವರಿ ಮಾಡುವುದಾಗಿ ಹೇಳಿ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.

    ಕಾಲುವೆ ನೀರಾವರಿ ಇದ್ದ ಯೋಜನೆಯನ್ನು ಹನಿ ನೀರಾವರಿ ಮಾಡಿದ್ದು, ಇದೀಗ ತೆಲಾಂಗಣ ರಾಜ್ಯವು ನೀರು ಹಂಚಿಕೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಕೇಂದ್ರ ಸರ್ಕಾರ ಟ್ರಿಬ್ಯುನಲ್ ತೀರ್ಪನ್ನು ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಅಡೆತಡೆಗಳಿವೆ ಎಂದು ವಿವರಿಸಿದರು.

    ರಾಮತ್ನಾಳ ಯೋಜನೆಯಲ್ಲಿ ಹನಿ ನೀರಾವರಿ ವಿಫಲವಾಗಿದ್ದು,ಈ ಬಗ್ಗೆಯೂ ಆಕ್ಷೇಪಗಳಿವೆ. ಹೀಗಾಗಿ ಯೋಜನೆ ಅನುಷ್ಠಾನವಾಗುತ್ತಿಲ್ಲ. ಸದ್ಯ ಯೋಜನೆಯಡಿ ಕೆರೆ ತುಂಬಿಸಲು ಸರ್ಕಾರ ಮುಂದಾಗಿದ್ದು, ಅದನ್ನೇ ನೀರಾವರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಸಿಎಂ ಯಡಿಯೂರಪ್ಪ , ಸ್ಥಳೀಯ ಶಾಸಕರು ಸೇರಿ ಕೇಂದ್ರ ಸರ್ಕಾರವನ್ನು ಒಪ್ಪಿಸಲಿ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾವು ಸಭೆ ನಡೆಸಿ ಹೋರಾಟ ರೂಪಿಸುತ್ತೇವೆ. ನಂತರ ಸರ್ವಪಕ್ಷಗಳ ಸಭೆ ಕರೆದು ಪ್ರಧಾನಿ ಬಳಿ ನಿಯೋಗ ಕೊಂಡೊಯ್ದು, ಒತ್ತಾಯ ಮಾಡಬೇಕು. ಪ್ರಧಾನಿ ಅವರು ಆಂಧ್ರಪ್ರದೇಶ, ತೆಲಂಗಾಣ, ಮಹರಾಷ್ಟ್ರ, ಗೋವಾ ಸಿಎಂಗಳನ್ನು ಕರೆದು ಸಂಧಾನ ಮಾಡಿದಲ್ಲಿ ಮಹದಾಯಿ ಮತ್ತು ಕೃಷ್ಣಾ ಬಿಸ್ಕೀಂ ಸಮಸ್ಯೆಗಳು ಇತ್ಯರ್ಥವಾಗಲಿವೆ ಎಂದರು.

    ಶಾಸಕರಾದ ಅಮರೇಗೌಡ ಬಯ್ಯಪುರ, ರಾಘವೇಂದ್ರ ಹಿಟ್ನಾಳ್, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಇದ್ದರು.


    ಫೆ.29ರಂದು ಸುಪ್ರಿಂ ಕೋರ್ಟ್‌ನಲ್ಲಿ ಬಿ ಸ್ಕೀಂ ಸಂಬಂಧ ಅರ್ಜಿ ವಿಚರಣೆಗೆ ಬರಲಿದೆ. ನಾನು ವೈಯಕ್ತಿಕವಾಗಿ ಮಧ್ಯಂತರ ಅರ್ಜಿ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿರುವೆ. ಈಗಾಗಲೇ ಕೃಷ್ಣಾ ಬಿ ಸ್ಕೀಂ ನೀರಾವರಿ ಹೋರಾಟ ಸಮಿತಿ ನೋಂದಾಯಿಸಿದ್ದೇನೆ. ಚುನಾವಣೆಯಲ್ಲಿ ಮಾತು ಕೊಟ್ಟಂತೆ ಸಿಎಂ ಬಿಎಸ್‌ವೈ ಕೇಂದ್ರದಿಂದ 1 ಲಕ್ಷ ಕೋಟಿ ರೂ.ತಂದು ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದರೆ, ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕುವೆ.
    | ಬಸವರಾಜ ರಾಯರಡ್ಡಿ ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts