More

    ಕಿನ್ನಾಳ ಕಲೆ ಪೋಷಣೆಗೆ ತರಬೇತಿ: 50 ಜನರಿಗೆ ಟ್ರೈನಿಂಗ್ ನೀಡಲು ಯೋಜನೆ

    ವಿ.ಕೆ.ರವೀಂದ್ರ ಕೊಪ್ಪಳ

    ವಿಶ್ವ ಪ್ರಸಿದ್ಧ ಕಿನ್ನಾಳ ಕಲೆ ಕಲಾವಿದ ಸಣ್ಣ ರಂಗಪ್ಪಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಸರ್ಕಾರ ಜಿಲ್ಲೆಗೆ ಗೌರವ ಸೂಚಿಸಿದೆ. ಇದರ ಬೆನ್ನಲ್ಲೇ ಕಿನ್ನಾಳ ಕಲೆಗೆ ಭೌಗೋಳಿಕ ಕುರುಹು ನೀಡಿದ್ದು, ಜತೆಗೆ ಕಲೆ ಉಳಿಸಿ-ಬೆಳಸುವ ನಿಟ್ಟಿನಲ್ಲಿ ಕೌಶಲಾಭಿವೃದ್ಧಿ ನಿಗಮದಿಂದ ಚಿತ್ರಗಾರ ಕುಟುಂಬದವರಿಗೆ ತರಬೇತಿ ನೀಡಲು ಮುಂದಾಗಿರುವುದು ವಿಶೇಷವಾಗಿದೆ.

    ವಿವಿಧ ಬಗೆಯ ಗೊಂಬೆಗಳ ಮೂಲಕ ಹೊಸ ಬಣ್ಣದ ಲೋಕ ಸೃಷ್ಟಿಮಾಡುವ ಕಿನ್ನಾಳ ಗ್ರಾಮದ ಚಿತ್ರಗಾರರಿಗೆ ದೊಡ್ಡ ಇತಿಹಾಸವಿದೆ. ಬಗೆಬಗೆಯ ಮರದ ಆಟಿಕೆಗಳು, ಧಾರ್ಮಿಕ ವಿಗ್ರಹಗಳಾದ ಗ್ರಾಮ ದೇವತೆ, ದಶಮಿ ದಿಂಡು, ದ್ವಾರ ಪಾಲಕರು, ಪಲ್ಲಕ್ಕಿ, ಚಾಮರ, ಕೃಷಿ ಪರಿಕರಗಳಾದ ಬಾರುಕೋಲು ಗುಣಿ, ಕುಡುಗೋಲು ಹಿಡಿ ಹೀಗೆ ವಿವಿಧ ಕಲೆಗಳು ಕಿನ್ನಾಳ ಕಲೆಯ ವೈಶಿಷ್ಟವಾಗಿದೆ. ಕಲೆಗೆ ವಿಜಯನಗರ ಸಾಮ್ರಾಜ್ಯ ಮೂಲವಾಗಿದ್ದು, ಹಂಪಿಯ ಸಕಲ ಕಲಾ ವೈಭವಕ್ಕೆ ವಿಶೇಷ ಕಾಣಿಕೆ ನೀಡಿದೆ. ವಿಜಯನಗರ ಸಾಮಾಜ್ಯದ ವಿರೂಪಾಕ್ಷ, ಪಂಪಾಪತಿ ದೇವಾಲಯಗಳ ಛತ್ತಿನ ಮೇಲೆ ಬಣ್ಣ ಬಣ್ಣಗಳ ವಿಶೇಷ ಚಿತ್ರಕಲೆ ಮೂಡಿರುವುದು ಈ ಕಲೆಯ ಪರಂಪರೆ ಬಿಂಬಿಸುತ್ತದೆ. ಆಧುನಿಕ ಆಟಿಕೆಗಳು, ಬಗೆಬಗೆ ಕಲೆಗಳ ನಡುವೆ ಪೈಪೋಟಿ ಹೆಚ್ಚಿದ್ದರೂ ಕಿನ್ನಾಳ ಕಲೆ ಜೀವಂತಿಕೆ ಉಳಿಸಿಕೊಂಡಿದೆ. ಪ್ಲಾಸ್ಟಿಕ್ ಗೊಂಬೆಗಳ ನಡುವೆಯೂ ಕಿನ್ನಾಳ ಗೊಂಬೆಗಳ ಬೆಡಗು, ಬಿನ್ನಾಣ, ಗೊಂಬೆಗಳ ಸಮತೋಲಿತ ವಿನ್ಯಾಸ ಹಾಗೂ ಆಕಾರಗಳು, ಈ ಕಲೆಯ ವೈಶಿಷ್ಟ್ಯಕ್ಕೆ ಬೆರಗಾಗುವಂತೆ ಮಾಡುತ್ತದೆ.

    ಜಗತ್ತಿನಲ್ಲಿ ಭಾರತ ಅತಿದೊಡ್ಡ ಆಟಿಕೆ ಮಾರುಕಟ್ಟೆ ಹೊಂದಿದ್ದು, ಚೀನಾ, ಜಪಾನ್ ಸೇರಿ ಅನೇಕ ರಾಷ್ಟ್ರಗಳು ಮಾರುಕಟ್ಟೆ ಆಕ್ರಮಿಸಿಕೊಂಡಿವೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ ಯೋಜನೆಗಳಡಿ ಸ್ಥಳೀಯ ಕಲೆಗಳ ಪ್ರೋತ್ಸಾಹಕ್ಕೆ ಮುಂದಾಗಿದೆ. ಇದಕ್ಕೆ ಪೂರಕವಾಗಿ ಕುಕನೂರು ತಾಲೂಕಿನ ಭಾನಾಪುರ ಬಳಿ ದೇಶದ ಮೊದಲ ಆಟಿಕೆ ಕ್ಲಸ್ಟರ್ ತಲೆ ಎತ್ತುತ್ತಿದೆ. ಈಗಾಗಲೇ ಮೊದಲ ತಂಡಕ್ಕೆ ತರಬೇತಿ ನಡೆಯುತ್ತಿದ್ದು, ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬರುವ ನಿರೀಕ್ಷೆ ಇದೆ. ಈ ನಡುವೆ ಚನ್ನಪಟ್ಟಣ ಗೊಂಬೆ, ಕಿನ್ನಾಳ ಕಲೆ ಉಳಿವಿಗೂ ಕೌಶಲಭಿವೃದ್ಧಿ ನಿಗಮದಿಂದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ.

    ನಿಗಮದಿಂದ ನಡೆದಿದೆ ತಯಾರಿ : ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಬಹುಪಾಲು ಚಿತ್ರಗಾರ ಕುಟುಂಬಗಳು ನೆಲೆಸಿವೆ. ಇಂದಿಗೂ ಕಲೆ ಉಳಿಸಿ, ಪೋಷಿಸುವ ಜವಾಬ್ದಾರಿ ಹೊತ್ತಿವೆ. ಹೀಗಾಗಿ ಚಿತ್ರಗಾರ ಕುಟುಂಬಕ್ಕೆಂದೇ ಪ್ರತ್ಯೇಕ ಯೋಜನೆ ರೂಪಿಸಿದ್ದು, ಈ ಕುಟುಂಬಗಳ ಆಸಕ್ತ 50 ಜನರಿಗೆ ಕಲೆಯ ಸಂಪೂರ್ಣ ತರಬೇತಿ ನೀಡಲು ಸಿದ್ಧತೆ ನಡೆದಿವೆ. ಸೂಕ್ತ ತರಬೇತುದಾರರ ನಿಯೋಜನೆ ಕಾರ್ಯ ನಡೆದಿದ್ದು, ಅವರಿಂದ ಗ್ರಾಮದಲ್ಲೇ ಸ್ಥಳ ಗುರುತಿಸಿ ಸಂಪೂರ್ಣ ತರಬೇತುಗೊಳಿಸಲು ನಿಗಮ ತಯಾರಿ ಮಾಡಿಕೊಳ್ಳುತ್ತಿದೆ.

    ಇತರ ಆಸಕ್ತರಿಗೂ ಸಿಗಲಿ ಅವಕಾಶ : ಸದ್ಯ ಚಿತ್ರಗಾರ ಕುಟುಂಬಗಳಿಗೆ ಮಾತ್ರ ತರಬೇತಿ ನೀಡುವಂತೆ ನಿಗಮದಿಂದ ಸೂಚಿಸಲಾಗಿದೆ. ಇದರಿಂದ ಕಲೆ ಬಗ್ಗೆ ಆಸಕ್ತಿ ಹೊಂದಿರುವವರಿಗೂ ತರಬೇತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಬೇರೆ ಸಮುದಾಯದವರಿದ್ದರೂ ಆಸಕ್ತಿ ಇದ್ದಲ್ಲಿ ತರಬೇತಿ ಪಡೆಯಲು ಅವಕಾಶ ಕಲ್ಪಿಸಬೇಕೆಂಬ ಬೇಡಿಕೆ ಇದೆ.

    ಕಿನ್ನಾಳ ಕಲೆ ಪೋಷಣೆಗೆ ತರಬೇತಿ: 50 ಜನರಿಗೆ ಟ್ರೈನಿಂಗ್ ನೀಡಲು ಯೋಜನೆ

    ಕಿನ್ನಾಳ ಕಲೆ ವಿಶ್ವ ಪ್ರಸಿದ್ಧವಾಗಿದೆ. ಅದನ್ನು ಪೋಷಿಸುವ ನಿಟ್ಟಿನಲ್ಲಿ ಕೌಶಲಾಭಿವೃದ್ಧಿ ನಿಗಮದಿಂದ ಚಿತ್ರಗಾರ ಕುಟುಂಬದ 50 ಜನರಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ತರಬೇತುದಾರರ ನಿಯೋಜನೆ, ತರಬೇತಿ ಪಡೆಯುವವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇವರೊಂದಿಗೆ ಇತರ ಸಮುದಾಯದ ಆಸಕ್ತರು ಬಯಸಿದಲ್ಲಿ ತರಬೇತಿ ನೀಡಲು ಅವಕಾಶ ಕಲ್ಪಿಸುವಂತೆ ನಿಗಮಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು.
    | ಪ್ರಾಣೇಶ ಜಿಲ್ಲಾ ಉದ್ಯೋಗಾಧಿಕಾರಿ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts