More

    ತಿರಂಗ ಹಾರಿಸುವುದು ನಮ್ಮೆಲ್ಲರ ಕರ್ತವ್ಯ, ಎಡಿಸಿ ಎಂ.ಪಿ.ಮಾರುತಿ ಹೇಳಿಕೆ

    ಕೊಪ್ಪಳ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಂಡಿದೆ. ನಮ್ಮ ಮನೆಗಳ ಮೇಲೆ ಧ್ವಜಾರೋಹಣ ಮಾಡುವುದು ದೇಶಾಭಿಮಾನದ ಸಂಕೇತ ಹಾಗೂ ನಮ್ಮೆಲ್ಲರ ಕರ್ತವ್ಯ ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಹೇಳಿದರು.

    ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮದ ಅನುಷ್ಠಾನ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

    ಆ.11ರಿಂದ 17ವರೆಗೆ ಎಲ್ಲ ಸರ್ಕಾರಿ ಕಚೇರಿ, ಮನೆ, ಮಳಿಗೆ ಇತ್ಯಾದಿ ಕಡೆ ಪ್ರತಿ ದಿನ ತ್ರಿವರ್ಣ ಧ್ವಜ ಹಾರಿಸಬೇಕು. ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಬೇಕು. ಇದರ ಅಂಗವಾಗಿ ಅಭಿಯಾನ ಹಮ್ಮಿಕೊಂಡಿದ್ದು, ಜಿಲ್ಲೆಯ ಎಲ್ಲ ಇಲಾಖೆ, ನಗರ, ಸ್ಥಳೀಯ ಸಂಸ್ಥೆಗಳು ತಮ್ಮ ಅಧೀನ ಕಚೇರಿ ಹಾಗೂ ಸಿಬ್ಬಂದಿ ಮನೆಗಳ ಮೇಲೆ, ಪೊಲೀಸ್ ಠಾಣೆ, ಶಾಲೆಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವಂತೆ ಕ್ರಮ ವಹಿಸಬೇಕು. ಸೂರ್ಯೋದಯದ ನಂತರ ಧ್ವಜ ಹಾರಿಸಿ, ಸೂರ್ಯಾಸ್ತದೊಳಗೆ ಇಳಿಸಬೇಕು. ಧ್ವಜದ ಅಳತೆ, ಧ್ವಜ ನಿರ್ಮಾಣಕ್ಕೆ ಬೇಕಾದ ಬಟ್ಟೆ, ವಿವಿಧ ಸಾಮಗ್ರಿಗಳ ಬಳಕೆ ಬಗ್ಗೆ ಸರ್ಕಾರದಿಂದ ನಿರ್ದೇಶನಗಳು ಬಂದಿದ್ದು, ಅವುಗಳ ಕುರಿತು ಅರಿವು ಮೂಡಿಸಿ. ಜಾಗೃತಿ ಜಾಥಾ, ಪ್ರಭಾತ್ ಪೇರಿ ಮುಂತಾದ ವಿಧಾನಗಳ ಮೂಲಕ ಜನರಿಗೆ ತಿಳಿವಳಿಕೆ ಮೂಡಿಸಿ. ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ಅಂಟಿಸುವಂತೆ ಸೂಚಿಸಿದರು.

    ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಅಧಿಕಾರಿಗಳು ಧ್ವಜಗಳನ್ನು ಜನರಿಗೆ ಸುಲಭವಾಗಿ ಸಿಗುವಂತೆ ಮಾರಾಟ ಮಳಿಗೆ ಸ್ಥಾಪಿಸಿ. ಗ್ರಾಪಂ, ಅಂಗನವಾಡಿ, ನ್ಯಾಯಬೆಲೆ ಅಂಗಡಿ, ನಗರ, ಸ್ಥಳೀಯ ಸಂಸ್ಥೆಗಳು, ರೈತ ಸಂಪರ್ಕ ಕೇಂದ್ರ ಅಥವಾ ಮಾರಾಟ ಮಳಿಗೆಗಳ ಮೂಲಕ ಧ್ವಜ ಮಾರಾಟಕ್ಕೆ ಕ್ರಮ ಕೈಗೊಳ್ಳಿ. ಇದರಲ್ಲಿ ಮಹಿಳಾ ಸ್ವ ಸಹಾಯ ಗುಂಪುಗಳು, ಸಹಕಾರಿ ಸಂಘಗಳು ಮುಂತಾದ ಸಾರ್ವಜನಿಕರೊಂದಿಗೆ ಹೆಚ್ಚಿನ ಒಡನಾಟ ಇರುವ ಸಂಘ ಸಂಸ್ಥೆಗಳನ್ನು ಬಳಸಿಕೊಳ್ಳಿ. ಕೇಂದ್ರ ಸರ್ಕಾರದ ಜಾಲತಾಣದಲ್ಲಿ ಹರ್ ಘರ್ ತಿರಂಗಾ ಅಡಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದಂತೆ ಬ್ಯಾನರ್ ಮತ್ತು ಪೋಸ್ಟರ್‌ಗಳ ಮಾದರಿಗಳು ಲಭ್ಯವಿದ್ದು, ಅವುಗಳನ್ನು ಬಳಸಿಕೊಳ್ಳಬಹುದು ಎಂದು ಅನುಷ್ಠಾನ ಅಧಿಕಾರಿಗಳಿಗೆ ತಿಳಿಸಿದರು. ಜಿಪಂ ಉಪಕಾರ್ಯದರ್ಶಿ ಸಮೀರ್ ಮುಲ್ಲಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಾಣೇಶ, ಜಂಟಿ ಕೈಗಾರಿಕಾ ನಿರ್ದೇಶಕ ಪ್ರಶಾಂತ್ ಬಾರಿಗಿಡದ, ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿ ಭಾರತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts