More

    ಕುಡಿವ ನೀರು ಪೂರೈಕೆ ಯಾವಾಗ?- ಅಧಿಕಾರಿಗಳಿಗೆ ಸಂಸದ ಸಂಗಣ್ಣ ತರಾಟೆ

    ಕೊಪ್ಪಳ: ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ಗ್ರಾಮಗಳಿಗೆ ಬಹುಗ್ರಾಮ ಕುಡಿವ ನೀರು ಪೂರೈಕೆ ಯೋಜನೆಯಿಂದ ಯಾವಾಗ ನೀರು ಪೂರೈಸುವಿರಿ? ಪ್ರತಿಯೊಂದಕ್ಕೂ ಸಬೂಬು ನಡೆಯುವುದಿಲ್ಲ. ತಿಂಗಳೊಳಗೆ ಮೊದಲ ಹಂತದ ಗ್ರಾಮಕ್ಕೆ ನೀರು ಪೂರೈಸಬೇಕೆಂದು ಸಂಸದ ಸಂಗಣ್ಣ ಕರಡಿ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಎರಡೂ ತಾಲೂಕಿನ 153 ಗ್ರಾಮಗಳಿಗೆ ಕಳೆದ ತಿಂಗಳಲ್ಲೇ ನೀರು ಪೂರೈಸುವುದಾಗಿ ಭರವಸೆ ನೀಡಿದ್ದಿರಿ. ಈವರೆಗೂ ಪೂರೈಸಿಲ್ಲ. ಜಲಜೀವನ್ ಮಿಷಿನ್ ಯೋಜನೆಯಡಿಯೂ ಜಿಲ್ಲಾದ್ಯಂತ ಕಳಪೆ ಕಾಮಗಾರಿ ನಡೆದಿವೆ. ಜನರಿಗೆ ಕನಿಷ್ಠ ಕುಡಿವ ನೀರು ಪೂರೈಸದಿದ್ದರೆ, ನಾವೆಲ್ಲ ಇರುವುದು ಯಾಕೆ? ನೀವು ಸರಿಯಾಗಿ ಕೆಲಸ ಮಾಡದಿದ್ದರೆ, ನಮಗೆ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ತರಾಟೆ ತೆಗೆದುಕೊಂಡರು.

    ಶಾಸಕ ಅಮರೇಗೌಡ ಬಯ್ಯಪುರ ಮಾತನಾಡಿ, ಮೂರು ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆದಾರರಿಗೆ ದಂಡ ಹಾಕುವುದು ನಮಗೆ ಮುಖ್ಯವಲ್ಲ. ಜನರಿಗೆ ನೀರು ಕೊಡಿ ಎಂದು ಚಾಟಿ ಬೀಸಿದರು.

    ದಿಶಾ ಸಮಿತಿ ಸದಸ್ಯ ಸತ್ಯನಾರಾಯಣ ದೇಶಪಾಂಡೆ ಮಾತನಾಡಿ, ಮುಂಡರಗಿ ಮತ್ತು 84 ಗ್ರಾಮಗಳ ಬಹುಗ್ರಾಮ ಕುಡಿವ ನೀರು ಕಾಮಗಾರಿ ವಿಫಲವಾಗಿದೆ. 49 ಕೋಟಿ ಹಣ ಖರ್ಚಾಗಿದೆ. ದಶಕ ಕಳೆದರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲವೆಂದು ದೂರಿದರು. ಇಇ, ಗುತ್ತಿಗೆದಾರನಿಂದ 4.5 ಕೋಟಿ ಹಣ ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಲಾಗಿದೆ. ಹೊಸ ಕಾಮಗಾರಿಗೆ ಡಿಪಿಆರ್ ಮಾಡಲಾಗುತ್ತಿದೆ ಎಂದರು.

    ಮೀನುಗಾರಿಕೆ ಇಲಾಖೆ ಎಡಿ ರಂಜಿತ್ ದೇಶಪಾಂಡೆ ಮಾತನಾಡಿ, ಶಿವಪುರದಲ್ಲಿ 1.08 ಕೋಟಿ ರೂ.ಮೊತ್ತದಲ್ಲಿ 8 ಮಣ್ಣಿನ ಕೊಳ, ಚರಂಡಿ, ಪೈಪ್‌ಲೈನ್, ಶೆಡ್ ನಿರ್ಮಾಣಕ್ಕೆ ಕೆಆರ್‌ಐಡಿಎಲ್‌ಗೆ ಗುತ್ತಿಗೆ ನೀಡಲಾಗಿದೆ. ಆದರೆ, ಯೋಜನೆ ಪ್ರಕಾರ ಕೆಲಸವಾಗಿಲ್ಲವೆಂದರು.

    ಕಿಮ್ಸ್ ಆರಂಭವಾದರೂ, ಸಣ್ಣಪುಟ್ಟ ಚಿಕಿತ್ಸೆಗೂ ಜನರು ಹುಬ್ಬಳ್ಳಿಗೆ ಹೋಗಬೇಕಿದೆ. ಹೀಗಾದರೆ ನಿಮ್ಮಿಂದ ಏನು ನಿರೀಕ್ಷಿಸಲು ಸಾಧ್ಯ? ಎಂದು ಸಂಸದರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಡಿಎಚ್‌ಒ ಡಾ.ಲಿಂಗರಾಜ ಮಾತನಾಡಿ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಆದಲ್ಲಿ ಮಾತ್ರ ಕಾರ್ಡಿಯಾಲಜಿ ಸೇವೆಗಳನ್ನು ನೀಡಬಹುದು. ಹುದ್ದೆ ಮಂಜೂರಾತಿ ಸರ್ಕಾರ ಹಂತದಲ್ಲಾಗಬೇಕು. ಉಳಿದಂತೆ ಎಲ್ಲ ಕೆಲಸಗಳನ್ನು ನಿಭಾಯಿಸಲಾಗುತ್ತಿದೆ ಎಂದರು. ಡಿಸಿ ಎಸ್.ವಿಕಾಸ್ ಕಿಶೋರ್ ಮಾತನಾಡಿ, ಹೆಚ್ಚುವರಿ ಹುದ್ದೆ ಮಂಜೂರಾತಿ, ಹೆಚ್ಚಿನ ಸೇವೆಗಳಿಗಾಗಿ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದೆಂದರು. ಸಿಇಒ ಫೌಜಿಯಾ ತರುನಮ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts