More

    ಕೊಪ್ಪಳ ಜಿಲ್ಲೆಯ ಹೊಸ ತಾಲೂಕುಗಳಿಗೆ ದೊರೆಯದ ಕಾಯಕಲ್ಪ

    ವಿಜಯವಾಣಿ ವಿಶೇಷ ಕೊಪ್ಪಳ
    ಒಂದೆಡೆ ರಾಜಕೀಯ ಪ್ರತಿಷ್ಠೆ. ಮತ್ತೊಂದೆಡೆ ಜನರ ಒತ್ತಾಯದಿಂದ ಜಿಲ್ಲೆಯಲ್ಲಿ ಕಳೆದೆರೆಡು ವರ್ಷದ ಹಿಂದೆ ಮೂರು ನೂತನ ತಾಲೂಕುಗಳು ಅಸ್ತಿತ್ವಕ್ಕೆ ಬಂದಿವೆ. ಯಲಬುರ್ಗಾ ತಾಲೂಕಿನಿಂದ ಕುಕನೂರು, ಗಂಗಾವತಿ ತಾಲೂಕಿನಿಂದ ಕಾರಟಗಿ ಹಾಗೂ ಕನಕಗಿರಿ ತಾಲೂಕುಗಳಾಗಿ ಬೇರ್ಪಟ್ಟಿವೆ. ಪ್ರದೇಶ ಹಂಚಿಕೆ ಸಂಬಂಧ ಪರ, ವಿರೋಧ ಅಭಿಪ್ರಾಯ ವ್ಯಕ್ತವಾದರೂ ಅಂತಿಮವಾಗಿ ಭಿನ್ನಾಭಿಪ್ರಾಯ ಶಮನವಾದವು. ಪರಿಣಾಮ ಅಸ್ತಿತ್ವಕ್ಕೆ ಬಂದ ಮೊದಲೆರೆಡು ತಿಂಗಳಲ್ಲೇ ರಾಜಕೀಯ ದಾಳಗಳಾಗಿ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವಲ್ಲಿ ಈ ತಾಲೂಕುಗಳ ಪಾತ್ರವೂ ಬಹುದೊಡ್ಡದಿದೆ. ಸಿದ್ದರಾಮಯ್ಯ ಸರ್ಕಾರ ಹೊಸ ತಾಲೂಕು ರಚನೆ ಮಾಡುತ್ತಲೇ ಸರ್ಕಾರದ ಅವಧಿ ಮುಗಿಯಿತು. ನಂತರ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಂದಿದ್ದರಿಂದ ಹೊಸ ತಾಲೂಕುಗಳ ಅಭಿವೃದ್ಧಿ ಬಗ್ಗೆ ಜನರಿಗಿದ್ದ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸಲಿಲ್ಲ. ವರ್ಷವಿಡೀ ರಾಜಕೀಯ ಅನಿಶ್ಚಿತತೆ ಕಾಡಿ ಸದ್ಯ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಆದರೂ ಹೊಸ ತಾಲೂಕುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕೃತವಾಗಿ ನೂತನ ತಾಲೂಕುಗಳು ಅಸ್ತಿತ್ವದಲ್ಲಿದ್ದರೂ, ಆಡಳಿತ ಹಾಗೂ ಹೊಸ ಯೋಜನೆಗಳಲ್ಲಿ ಅಧಿಕಾರಿಗಳು ಈಗಲೂ ಮೂಲ ನಾಲ್ಕು ತಾಲೂಕುಗಳನ್ನು ಮಾತ್ರ ಹೆಸರಿಸುವುದು ಮುಂದುವರಿದಿದೆ.

    ಎಪಿಎಂಸಿ, ಸಮುದಾಯ ಭವನವೇ ಕಚೇರಿ!
    ನೀರಾವರಿ ಪ್ರದೇಶವಾದ ಕಾರಟಗಿಯಲ್ಲಿ ವಿಶೇಷ ಎಪಿಎಂಸಿ ಕಟ್ಟಡದಲ್ಲಿ ತಹಸೀಲ್ ಕಚೇರಿ ನಡೆಯುತ್ತಿದೆ. ಕನಕಗಿರಿಯಲ್ಲಿ ಪ್ರವಾಸಿ ಮಂದಿರದ ಕಟ್ಟಡದಲ್ಲಿ ತಹಸೀಲ್ ಕಚೇರಿಯಿದ್ದರೆ, ಕುಕನೂರಿನಲ್ಲಿ ಸಭಾಭವನದಲ್ಲಿ ತಾಲೂಕಾಡಳಿತ ಕಾರ್ಯನಿರ್ವಹಿಸುವಂತಾಗಿದೆ. ಕಳೆದ ವಾರದಲ್ಲಿ ನೂತನ ತಾಪಂ ಕಚೇರಿಗಳು ಘೋಷಣೆಯಾಗಿದ್ದು, ಪ್ರಭಾರ ಇಒಗಳನ್ನು ನಿಯೋಜಿಸಲಾಗಿದೆ. ಅವುಗಳು ಶಾಲಾ ಕಟ್ಟಡ, ಸಮುದಾಯ ಭವನದಲ್ಲಿ ಆರಂಭಿಸಲಾಗಿದೆ. ಶಿಕ್ಷಣ ಇಲಾಖೆ ಬಿಇಒ, ಬಿಆರ್‌ಪಿ, ಸಿಆರ್‌ಪಿ ಕಚೇರಿಗಳನ್ನು ಆರಂಭಿಸಲು ಸೂಚಿಸಿದ್ದು, ಅವುಗಳು ಇನ್ನೂ ಕಡತದಲ್ಲೇ ಇವೆ. ಖಜಾನೆ ಇಲಾಖೆ ಆರಂಭಿಸಲು ಜ.28ರಂದು ಸರ್ಕಾರದಿಂದ ಆದೇಶ ಬಂದಿದೆ.

    ತಪ್ಪದ ಸಾರ್ವಜನಿಕರ ಅಲೆದಾಟ
    ಮುಖ್ಯವಾಗಿ ಸಾರ್ವಜನಿಕರಿಗೆ ಅವಶ್ಯವಿರುವ ಕೃಷಿ, ಭೂಮಾಪನಾ, ತೋಟಗಾರಿಕೆ, ಸಮಾಜ ಕಲ್ಯಾಣ, ಉಪ ನೋಂದಣಿ, ರೇಷ್ಮೆ, ತಾಲೂಕು ಆರೋಗ್ಯ ಕೇಂದ್ರ, ಪಶು ಸಂಗೋಪನೆ, ಹಿಂದುಳಿದ ವರ್ಗ, ಆಹಾರ ಸರಬರಾಜು, ಮಹಿಳಾ ಮಕ್ಕಳ ಕಲ್ಯಾಣ, ಕಾರ್ಮಿಕ ಇಲಾಖೆ ಸೇರಿ ಇತರ ಇಲಾಖೆಗಳ ಕಚೇರಿ ಆರಂಭಕ್ಕೆ ಇನ್ನೂ ಇಲಾಖೆಗಳಿಂದ ಆದೇಶವೇ ಬಂದಿಲ್ಲ. ತಹಸಿಲ್ ಕಚೇರಿ ಆರಂಭವಾಗಿದ್ದರೂ ದಾಖಲೆ ವರ್ಗಾವಣೆಯಾಗದ ಕಾರಣ ಸಣ್ಣ ಪುಟ್ಟ ಕೆಲಸ ಹೊರತುಪಡಿಸಿ ಸಾರ್ವಜನಿಕರು ಮೂಲ ತಾಲೂಕು ಕೇಂದ್ರಗಳಿಗೆ ತೆರಳಿ ಕೆಲಸ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಮುಂದುವರಿದಿದ್ದು, ಹೊಸ ತಾಲೂಕುಗಳ ಆರಂಭದ ಉದ್ದೇಶ ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾಗುತ್ತಿಲ್ಲ.

    ಜಾಗದ್ದೇ ಸಮಸ್ಯೆ
    ಜಿಲ್ಲೆಯಲ್ಲಿ ಸರ್ಕಾರಿ ಜಾಗದ ಕೊರತೆಯಿದೆ. ಹೀಗಾಗಿ ಯಾವುದಾದರೂ ಸರ್ಕಾರಿ ಕಟ್ಟಡ ಮಂಜೂರಾದರೆ ನಿರ್ಮಾಣ ಮಾಡಲು ಜಾಗ ಹುಡುಕಲೆಂದೇ ವರ್ಷಾನುಗಟ್ಟಲೇ ಹೆಣಗಾಡುವ ಪರಿಸ್ಥಿತಿಯಿದೆ. ಹೊಸ ತಾಲೂಕುಗಳಲ್ಲಿ ನಗರದ ಮಧ್ಯದಲ್ಲಿ ಅವಶ್ಯವಿರುವಷ್ಟು ಜಾಗವಿಲ್ಲ. ಖಾಸಗಿ ಜಾಗ ಖರೀದಿಸಲು ಸಾಕಷ್ಟು ಅನುದಾನ ಬೇಕು. ನಗರದ ಹೊರವಲಯದಲ್ಲಿ ನಿರ್ಮಿಸಲು, ಸಾರ್ವಜನಿಕರಿಗೆ ಅನನುಕೂಲವಾಗುವುದೆಂದು ಜನಪ್ರತಿನಿಧಿಗಳು ಒಪ್ಪುವುದಿಲ್ಲ. ಹೀಗಾಗಿ ಜಾಗ ಹುಡುಕುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

    ರಾಜ್ಯ ಬಜೆಟ್‌ನಲ್ಲಿ ಅನುದಾನ ನಿರೀಕ್ಷೆ
    ಕೊಪ್ಪಳ ಜಿಲ್ಲೆಯಲ್ಲಿ ಅಭಿವೃದ್ಧಿ ದೃಷ್ಟಿಯಿಂದ 2018ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೊಸದಾಗಿ ಮೂರು ತಾಲೂಕುಗಳನ್ನು ಅಸ್ತಿತ್ವಕ್ಕೆ ತಂದಿತು. ಬಳಿಕ ಅದೇ ವರ್ಷ ಅನುಷ್ಠಾನಗೊಳಿಸಿ ತಹಸೀಲ್ದಾರ್ ಸೇರಿ ಇತರ ಹುದ್ದೆಗಳನ್ನು ಸೃಜಿಸಿ ತಾತ್ಕಾಲಿಕ ಕಚೇರಿಗಳನ್ನು ಆರಂಭಿಸಲಾಯಿತು. ತ್ವರಿತ ಅನುಷ್ಠಾನದಿಂದ ಇನ್ನೇನು ಆಡಳಿತ ಆರಂಭವಾಯಿತೆನ್ನುವಷ್ಟರಲ್ಲಿ ಚುನಾವಣೆ ಘೋಷಣೆಯಾಗಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದವು. ಹೊಸ ತಾಲೂಕುಗಳಾಗಿ ಎರಡು ವರ್ಷವಾದರೂ ಬಜೆಟ್‌ನಲ್ಲಿ ನಿರೀಕ್ಷಿತ ಅನುದಾನ ದೊರೆತಿಲ್ಲ. ಈ ಬಾರಿ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಸಿಎಂಗೆ ಪತ್ರ ಬರೆದು ಒತ್ತಾಯಿಸಿರುವುದಾಗಿ ಜಿಲ್ಲೆಯ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಆದರೆ, ಅನ್ಯ ಜಿಲ್ಲೆಯ ಡಿಸಿಎಂ ಲಕ್ಷ್ಮಣ ಸವದಿಗೆ ಜಿಲ್ಲೆಯ ಉಸ್ತುವಾರಿ ನೀಡಿದ್ದು, ಅವರು ಒಂದರೆಡು ಬಾರಿ ಬಂದು ಹೋದದ್ದು ಬಿಟ್ಟರೆ, ಅಭಿವೃದ್ಧಿ ಸಭೆಗಳನ್ನು ನಡೆಸಿಲ್ಲ. ಹೀಗಾಗಿ ಸದ್ಯ ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಜಿಲ್ಲೆಗೆ ನಿರೀಕ್ಷಿತ ಪ್ರಾಶಸ್ತ್ಯ ದೊರೆಯುವುದೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

    ನೂತನ ತಾಲೂಕುಗಳು ಅಸ್ತಿತ್ವಕ್ಕೆ ಬಂದು ಎರಡು ವರ್ಷವಾದರೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಈ ಬಾರಿ ಬಜೆಟ್‌ನಲ್ಲಿ ಅನುದಾನ ನೀಡಿ ಕಚೇರಿ ಆರಂಭಿಸುವುದು, ಸಿಬ್ಬಂದಿ ನೀಡುವಂತೆ ಕೋರಿ ಸಿಎಂ ಬಿಎಸ್‌ವೈಗೆ ಪತ್ರ ಬರೆದಿದ್ದೇನೆ. ಪ್ರಾಶಸ್ತ್ಯ ನೀಡುವ ಭರವಸೆಯಿದೆ.
    | ಹಾಲಪ್ಪ ಆಚಾರ್ ಯಲಬುರ್ಗಾ ಶಾಸಕ

    ಸರ್ಕಾರದ ಆದೇಶದಂತೆ ನೂತನ ತಾಲೂಕುಗಳನ್ನು ಆರಂಭಿಸಲಾಗಿದೆ. ಈವರೆಗೂ ಯಾವುದೇ ಅನುದಾನ ಬಂದಿಲ್ಲ. ತಹಸೀಲ್, ತಾಪಂ ಕಚೇರಿಗಳನ್ನು ಆರಂಭಿಸಲಾಗಿದೆ. ಉಳಿದಂತೆ ನೂತನ ಕಚೇರಿ ನಿರ್ಮಾಣಕ್ಕೆ ಜಾಗದ ಹುಡುಕಾಟ ನಡೆಸಿದ್ದೇವೆ. ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
    | ಪಿ.ಸುನಿಲ್ ಕುಮಾರ್ ಕೊಪ್ಪಳ ಜಿಲ್ಲಾಧಿಕಾರಿ

    ನೂತನ ತಾಲೂಕುಗಳು ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. ಇನ್ನು ಅನೇಕ ಕಚೇರಿಗಳು ಆರಂಭವಾಗಬೇಕಿದೆ. ಈ ಬಗ್ಗೆ ನನ್ನ ಗಮನಕ್ಕಿದ್ದು, ಅನುದಾನ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ಈ ಬಾರಿ ಬಜೆಟ್‌ನಲ್ಲಿ ಅನುದಾನ ನೀಡಿ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಮನವಿ ಮಾಡಲಾಗುವುದು.
    | ಬಸವರಾಜ ದಢೇಸುಗೂರು ಕನಕಗಿರಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts