More

    ಬಜಕೂಡ್ಲು ಮೈದಾನಕ್ಕೆ ಕಾಯಕಲ್ಪ

    ಪುರುಷೋತ್ತಮ ಪೆರ್ಲ ಕಾಸರಗೋಡು

    ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಮಿನಿ ಮೈದಾನಕ್ಕೆ ಅಭಿವೃದ್ಧಿ ಕಾಲ ಕೂಡಿಬಂದಿದೆ. ಕೇರಳ ಸರ್ಕಾರದ ಬಜೆಟ್‌ನಲ್ಲಿ 1 ಕೋಟಿ ರೂ. ಮೊತ್ತ ಮೀಸಲಿರಿಸಲಾಗಿದ್ದು, ಕ್ರೀಡಾಪ್ರೇಮಿಗಳಲ್ಲಿ ಸಂತಸ ತಂದಿದೆ.

    ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಂದಿನ ಅಧ್ಯಕ್ಷರಾಗಿದ್ದ ಟಿ.ಆರ್.ಕೆ ಭಟ್ ಪೆರ್ಲ ಅವರ ಶ್ರಮದಿಂದ ಪಂಚಾಯಿತಿಗೆ ಸುಸಜ್ಜಿತ ಕ್ರೀಡಾಂಗಣ ಮಂಜೂರಾಗಿತ್ತು. ನಂತರ ಎಣ್ಮಕಜೆ ಪಂಚಾಯಿತಿ ವತಿಯಿಂದ ಸಣ್ಣಪುಟ್ಟ ಅಭಿವೃದ್ಧಿ ಕಾರ್ಯ ನಡೆಸಿರುವುದು ಬಿಟ್ಟರೆ, ಇದೇ ಮೊದಲ ಬಾರಿಗೆ ಬಜೆಟ್ ಮೂಲಕ ದೊಡ್ಡ ಗಾತ್ರದ ಮೊತ್ತ ಮಂಜೂರಾಗಿದೆ.

    ರಸ್ತೆಯೂ ಶಿಥಿಲ

    ಪಂಚಾಯಿತಿ ವ್ಯಾಪ್ತಿಯ ನಾನಾ ಕ್ಲಬ್‌ಗಳು ಹಾಗೂ ವಿವಿಧ ಸಂಘಟನೆಗಳು ತಮ್ಮ ಕ್ರೀಡಾಕೂಟಗಳನ್ನು ಬಜಕೂಡ್ಲು ಮಿನಿ ಸ್ಟೇಡಿಯಂನಲ್ಲಿ ಆಯೋಜಿಸುತ್ತಿದ್ದು, ಮೂಲಸೌಕರ್ಯದ ಕೊರತೆ ಕ್ರೀಡಾಳುಗಳನ್ನು ಕಾಡುತ್ತಿದೆ. ಸೂಕ್ತ ಬೆಳಕಿನ ವ್ಯವಸ್ಥೆ, ನೀರು ಪೂರೈಕೆ, ಸುಸಜ್ಜಿತ ಶೌಚಗೃಹದ ನಿರ್ಮಾಣ ನಡೆಯಬೇಕಾಗಿದೆ. ಮಹಡಿ ಹೊಂದಿದ ಪ್ರೇಕ್ಷಕರ ಗ್ಯಾಲರಿ, ಸೂಕ್ತ ಪೆವಿಲಿಯನ್, ಕ್ರೀಡಾಂಗಣದ ವಿಸ್ತರಣೆ ಜತೆಗೆ ಆವರಣಗೋಡೆ ನಿರ್ಮಾಣವಾಗಬೇಕಾಗಿದೆ. ಪೆರ್ಲದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ಸ್ಟೇಡಿಯಂಗೆ ತೆರಳುವ ರಸ್ತೆಯೂ ಶಿಥಿಲಗೊಂಡಿದ್ದು, ರಸ್ತೆಯೂ ದುರಸ್ತಿಯಾಗಬೇಕಿದೆ.

    ಆವರಣಗೋಡೆ ಅನಿವಾರ್ಯ

    ಕೆಲವರು ವಾಹನ ಚಾಲನಾ ತರಬೇತಿಗಾಗಿ ವಾಹನಗಳನ್ನು ಮೈದಾನಕ್ಕಿಳಿಸುತ್ತಿದ್ದು, ಇದರಿಂದ ಮೈದಾನಕ್ಕೆ ಹಾನಿಯಾಗುತ್ತಿದೆ. ಇದನ್ನು ತಪ್ಪಿಸಲು ಆವರಣಗೋಡೆ ನಿರ್ಮಾಣ ಅನಿವಾರ್ಯ. ಈಗಾಗಲೇ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕ್ರೀಡಾಂಗಣ ವಠಾರದಲ್ಲಿ ಸಸಿ ನೆಡುವ ಕಾರ್ಯಕ್ರಮದನ್ವಯ ಕೆಲವೊಂದು ಮರಗಳನ್ನು ನೆಟ್ಟು ಬೆಳೆಸಲಾಗಿದೆ. ಇನ್ನು ಕ್ರೀಡಾಕೂಟಗಳಿಗಾಗಿ ಕ್ರೀಡಾಂಗಣವನ್ನು ಸಂಘಟನೆಗಳಿಗೆ ಬಿಟ್ಟುಕೊಡುವಲ್ಲಿ ಹಾಗೂ ಶುಚಿತ್ವ ಕಾರ್ಯದಲ್ಲೂ ಪಂಚಾಯಿತಿ ಅಗತ್ಯ ಮಾನದಂಡ ಪಾಲಿಸಬೇಕಾದ ಅಗತ್ಯವಿದೆ ಎಂಬುದು ಕ್ರೀಡಾಳುಗಳ ಹಾಗೂ ಕ್ರೀಡಾಪ್ರೇಮಿಗಳ ಅಭಿಪ್ರಾಯ.

    ನಿರಂತರ ಮನವಿ ಸಲ್ಲಿಕೆ

    ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರ ಮೂಲಕ ಬಜೆಟ್‌ನಲ್ಲಿ ಒಂದು ಕೋಟಿ ರೂ. ಮೊತ್ತ ಮೀಸಲಿರಿಸಲಾಗಿದೆ. ಎಣ್ಮಕಜೆ ಪಂಚಾಯಿತಿ ಅಧ್ಯಕ್ಷ ಜೆ.ಎಸ್.ಸೋಮಶೇಖರ್ ನಿರಂತರವಾಗಿ ಆಗ್ರಹಿಸಿದ್ದರು. ಪಂಚಾಯಿತಿ ವ್ಯಾಪ್ತಿಯ ಸಂಘ ಸಂಸ್ಥೆಗಳು ಕ್ರೀಡಾಕೂಟಕ್ಕಾಗಿ ಬಜಕೂಡ್ಲು ಸ್ಟೇಡಿಯಂನ್ನು ಅವಲಂಬಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಕ್ರೀಡಾಂಗಣ ಅಭಿವೃದ್ಧಿಗೊಳಿಸುವಂತೆ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್, ಪಂಚಾಯಿತಿ ಅಧ್ಯಕ್ಷರಿಗೆ ನಿರಂತರ ಮನವಿ ಸಲ್ಲಿಸುತ್ತಾ ಬಂದಿತ್ತು.

    ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕ್ರೀಡಾಳುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿರುವ ಮೈದಾನಗಳಲ್ಲಿ ಬಜಕೂಡ್ಲು ಮಿನಿ ಸ್ಟೇಡಿಯಂ ಒಂದಾಗಿದ್ದು, ಇದರ ಅಭಿವೃದ್ಧಿಗೆ ಪಂಚಾಯಿತಿ ಶ್ರಮಿಸಿತ್ತು. ಸ್ಟೇಡಿಯಂ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಕೆಲವು ವರ್ಷಗಳಿಂದ ಶಾಸಕ ಎ.ಕೆ.ಎಂ.ಅಶ್ರಫ್ ಅವರ ಮೇಲೆ ಒತ್ತಡ ಹೇರಲಾಗಿದ್ದು, ಈ ಬಾರಿ ಬಜೆಟ್‌ನಲ್ಲಿ ಹಣ ಮೀಸಲಿರಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ರಿಡಾಂಗಣ ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲಾಗುವುದು.
    -ಸೋಮಶೇಖರ ಜೆ.ಎಸ್., ಅಧ್ಯಕ್ಷ, ಎಣ್ಮಕಜೆ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts