More

    ಬಾನಂಗಳದಲ್ಲಿ ಚಿತ್ತಾಕರ್ಷಕ ಗಾಳಿಪಟಗಳ ಹಾರಾಟ



    ಮಂಗಳೂರು : ತಣ್ಣೀರುಬಾವಿಯ ಬಾನಂಗಳದಲ್ಲಿ ಶನಿವಾರ ಸಾಯಂಕಾಲ ಚಿತ್ತಾಕರ್ಷಕ ಗಾಳಿಪಟಗಳ ಹಾರಾಟ. ವೀಕ್ಷಿಸಲು ಕಡಲ ಕಿನಾರೆಯಲ್ಲಿ ನೆರೆದ ಜನ ಸಾಗರ. ಪಡುವಣ ಕಡಲಲ್ಲಿ ಸೂರ್ಯ ಮುಳುಗಲು ಸಜ್ಜಾಗುತ್ತಿದ್ದಂತೆ ಬಾನ ತುಂಬಾ ಹಾರಾಡಿದ ಗಾಳಿಪಟುಗಳು ನೋಡುಗರ ಕಣ್ಮನ ಸೆಳೆದವು.
    ಕಥಕ್ಕಳಿ, ಯಕ್ಷಗಾನ, ಗರುಡ , ಬೆಕ್ಕು, ಹಲ್ಲಿ, ಚಿರತೆ, ಹುಲಿ, ಫೆರ‌್ರಿ ಲೇಡಿ, ಕಥಕ್ಕಳಿ, ಬಟರ್‌ಫ್ಲೈ ಟ್ರೇನ್… ಹೀಗೆ ನೂರಾರು ವಿನ್ಯಾಸದ, ಬಣ್ಣ ಬಣ್ಣದ, ವಿನ್ಯಾಸಭರಿತ ದೇಶ ವಿದೇಶಗಳ ಗಾಳಿಪಟಗಳು ರಾರಾಜಿಸಿದವು. ಮಲೇಶ್ಯಾ, ಇಂಡೋನೇಶ್ಯಾ, ಥಾಯ್ಲೆಂಡ್, ಯುಕ್ರೇನ್, ಗ್ರೀಸ್, ವಿಯೆಟ್ನಾಂ ಸಹಿತ ವಿದೇಶಗಳ ಗಾಳಿಪಟ ಹಾರಾಟಗಾರರು ತಮ್ಮ ಬೃಹತ್ ಗಾತ್ರದ ಬೆಲೂನ್ ಮಾದರಿಯ ಗಾಳಿಪಟಗಳನ್ನು ಹಾರಿಸಿ ಉತ್ಸವಕ್ಕೆ ಇನ್ನಷ್ಟು ಮೆರುಗು ತುಂಬಿದರು.
    ಸಾಂಪ್ರದಾಯಿಕ, ಆಧುನಿಕ ಶೈಲಿಯ ಕಲಾತ್ಮಕ ವಿನ್ಯಾಸದ ಗಾಳಿಪಟುಗಳ ಜತೆಗೆ ಬೃಹತ್ ಗಾತ್ರದ ಗಾಳಿಪಟಗಳು ಪೈಪೋಟಿ ನೀಡುವಂತೆ ಹಾರಾಡಿದವು. ತಣ್ಣೀರು ಬಾವಿ ಕಡಲ ಕಿನಾರೆಗೆ ಆಗಮಿಸಿದ್ದ ಸಾವಿರಾರು ಪ್ರೇಕ್ಷಕರು, ಪ್ರವಾಸಿಗರು ಬೃಹತ್ ಗಾತ್ರದ ಗಾಳಿಪಟಗಳ ಎದುರು ವೀಡಿಯೋ ಚಿತ್ರೀಕರಣ, ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
    ಒಂದೆಡೆ ಗಾಳಿಪಟ ತಜ್ಞರ ಬೃಹತ್ ಗಾತ್ರದ ಗಾಳಿಪಟಗಳು ಬಾನಂಗದಲ್ಲಿ ಹಾರಾಡುತ್ತಿದ್ದರೆ, ಇನ್ನೊಂದೆಡೆ ಪ್ರವಾಸಿಗರು ಕೂಡಾ ಮಾರಾಟ ಮಳಿಗೆಗಳಿಂದ ಗಾಳಿಪಟ ಖರೀದಿಸಿ ಹಾರಾಟ ನಡೆಸುವ ಮೂಲಕ ಮಕ್ಕಳು, ಕುಟುಂಬದ ಜತೆ ಸಂಭ್ರಮಿಸಿದರು.
    ದ.ಕ. ಜಿಲ್ಲಾಡಳಿತದ ಸಹಕಾರ ಹಾಗೂ ಎಂಆರ್‌ಪಿಎಲ್ ಒಎನ್‌ಜಿಸಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಗಾಳಿಪಟ ಉತ್ಸವ ಫೆ.11ರಂದು ಸಾಯಂಕಾಲ ಸಮಾಪನಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts