ಜಿಲ್ಲೆಯಲ್ಲಿ ಲಸಿಕಾ ಅಭಿಯಾನ
ಕೊಪ್ಪಳ: ದೇಶದಲ್ಲಿ 100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಎರಡನೇ ಡೋಸ್ ನೀಡಿಕೆಯಲ್ಲಿ ಶೇ.100 ಗುರಿ ಸಾಧಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮನವಿ ಮಾಡಿದರು.
ಕುಕನೂರು ತಾಲೂಕಿನ ಭಾನಾಪುರದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾದ್ಯಂತ ಶುಕ್ರವಾರ 60 ಸಾವಿರ ಡೋಸ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಆರೋಗ್ಯ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಯಲಬುರ್ಗಾ ಕ್ಷೇತ್ರದ 10 ಗ್ರಾಮಗಳಲ್ಲಿ ಶೇ.100 ಜನರಿಗೆ ಲಸಿಕೆ ನೀಡಲಾಗಿದೆ. ಎರಡನೇ ಡೋಸ್ ಲಸಿಕೆಯನ್ನು ಪ್ರತಿಯೊಬ್ಬರೂ ಪಡೆಯಬೇಕು. ದೇಶ ಲಸಿಕೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. 95 ರಾಷ್ಟ್ರಗಳಿಗೆ ಭಾರತ ಲಸಿಕೆ ಪೂರೈಕೆ ಮಾಡಿದೆ. ಆರಂಭದಲ್ಲಿ ಲಸಿಕೆ ಬಗ್ಗೆ ಅನೇಕ ಗೊಂದಲಗಳಿದ್ದರೂ ಇದೀಗ ಸಂಜೀವಿನಿ ಎಂಬುದು ಎಲ್ಲರಿಗೂ ಅರಿವಾಗಿದೆ ಎಂದರು.
ಡಿಎಚ್‌ಒ ಟಿ.ಲಿಂಗರಾಜ ಮಾತನಾಡಿ, ಲಸಿಕೆ ಪಡೆದರೆ, ಸೋಂಕು ಹೆಚ್ಚಾಗಿ ಬಾಧಿಸದು. ಹೀಗಾಗಿ ಈವರೆಗೂ ಲಸಿಕೆ ಪಡೆಯದವರು ಕೂಡಲೇ ಪಡೆಯಬೇಕು ಎಂದರು. ಗ್ರಾಪಂ ಅಧ್ಯಕ್ಷೆ ಪವಿತ್ರಾ ಬಂಗೇರ್ ಕೋವಿಡ್-19 ಲಸಿಕಾ ವಾಹನಕ್ಕೆ ಚಾಲನೆ ನೀಡಿದರು. ಜಿಪಂ ಸಿಇಒ ಫೌಜಿಯಾ ತರನ್ನುಮ್, ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ತಹಸೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ, ತಾಪಂ ಇಒ ಸೋಮಶೇಖರ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಎಚ್.ನಾಗರಾಜ, ಗಾಪಂ ಸದಸ್ಯರಾದ ನೀಲಕಂಠಯ್ಯ ಸಸಿಮಠ, ರಾಮಣ್ಣ ಕೋಮಲಾಪುರ, ಸಿದ್ದಲಿಂಗಪ್ಪ ಇತರರಿದ್ದರು.