More

    ಅಚ್ಚುಕಟ್ಟಾಗಿರಲಿ ಬಾಲ್ಯವಿವಾಹ ನಿಷೇಧ ಜಾಗೃತಿ ಅಭಿಯಾನದ ಕಾರ್ಯಕ್ರಮ

    ಕೊಪ್ಪಳ: ರಾಜ್ಯಾದ್ಯಂತ ಮಾ.6ರಂದು ಬಾಲ್ಯ ವಿವಾಹ ನಿಷೇಧ ಜಾಗೃತಿ ಅಭಿಯಾನಕ್ಕೆ ವಿಡಿಯೋ ಆನ್ ವೀಲ್ಸ್ ಎಂಬ ಹೆಸರಿನೊಂದಿಗೆ ಕೊಪ್ಪಳದಲ್ಲಿ ಚಾಲನೆ ನೀಡುತ್ತಿದ್ದು, ಕಾರ್ಯಕ್ರಮ ಅಚ್ಚುಕಟ್ಟಾಗಿ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಹುಬ್ಬಳ್ಳಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿತ್ತು. ಕಾರಣಾಂತರಗಳಿಂದ ಕೊಪ್ಪಳಕ್ಕೆ ವರ್ಗಾಯಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರ ಜನಪ್ರತಿನಿಧಿಗಳು, ರಾಜ್ಯಮಟ್ಟದ ಅಧಿಕಾರಿಗಳು ಆಗಮಿಸಲಿದ್ದಾರೆ. ಎಲ್‌ಇಡಿ ವಾಹನಗಳಲ್ಲಿ ಬಾಲ್ಯ ವಿವಾಹ ನಿಷೇಧ, ಬಾಲ್ಯ ವಿವಾಹದಿಂದಾಗುವ ತೊಂದರೆ, ಉತ್ತಮ ಶಿಕ್ಷಣ ಮತ್ತು ಬದುಕನ್ನು ಕಟ್ಟಿಕೊಂಡು ಯಶಸ್ವಿಯಾದವರ ಬಗೆಗಿನ ವಿಡಿಯೋಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ಜಿಲ್ಲೆಯ 20 ಹೋಬಳಿಗಳಲ್ಲಿ ದಿನಕ್ಕೆ 5 ಕಾರ್ಯಕ್ರಮಗಳಂತೆ 18 ದಿನ ವಾಹನಗಳು ಸಂಚರಿಸಲಿವೆ. ಹೆಚ್ಚು ಬಾಲ್ಯ ವಿವಾಹ ವರದಿಯಾದ ಪ್ರದೇಶದಲ್ಲಿ ಹೆಚ್ಚಿನ ಜಾಗೃತಿ ಕೈಗೊಳ್ಳಬೇಕು. 8 ರಿಂದ 12ನೇ ತರಗತಿ ವಿದ್ಯಾರ್ಥಿಗಳನ್ನು ಕರೆತನ್ನಿ. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ಮೂಲಕ ವಿಡಿಯೋ ತೋರಿಸಿ. ಹೆಚ್ಚು ಜನರು ಸೇರುವ ಸ್ಥಳದಲ್ಲಿ ಪ್ರಚಾರ ಮಾಡಿ. ಕಾರ್ಯಕ್ರಮ ಕುರಿತು ದಾಖಲೆ ರಚಿಸಿಕೊಂಡು ಮೇಲಧಿಕಾರಿಗಳಿಗೆ ಸಲ್ಲಿಸಬೇಕು ಎಂದು ತಿಳಿಸಿದರು.

    ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಂಟಿ ನಿರ್ದೇಶಕಿ ಭಾರತಿ ಶೆಟ್ಟರ್ ಕಾರ್ಯಕ್ರಮದ ರೂಪುರೇಷೆ ಬಗ್ಗೆ ವಿವರಿಸಿದರು. ಜಿಪಂ ಸಿಇಒ ಫೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಹೇಮಂತ್‌ಕುಮಾರ್, ಕೊಪ್ಪಳ ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ, ಯುನಿಸೆಫ್‌ನ ಜಿಲ್ಲಾ ಸಂಯೋಜಕ ಹರೀಶ್ ಜೋಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts