More

    ಪ್ರಾಣಿಗಳ ಅಕ್ರಮ ಸಾಗಣೆ-ವಧೆ ಅಪರಾಧ – ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಹೇಳಿಕೆ

    ಕೊಪ್ಪಳ: ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಪ್ರಾಣಿಗಳ ಅಕ್ರಮ ಸಾಗಣೆ ಹಾಗೂ ವಧೆ ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಡಿಸಿ ಎಸ್.ವಿಕಾಸ್ ಕಿಶೋರ್ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗವಾರ ಆಯೋಜಿಸಲಾಗಿದ್ದ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯಲ್ಲಿ ಮಾತನಾಡಿದರು. ಜಾನುವಾರು ಸಾಗಣೆ ಕಾಯ್ದೆ-2006ರನ್ವಯ ಅಕ್ರಮವಾಗಿ ಪ್ರಾಣಿಗಳ ಸಾಗಣೆ ನಿಯಮ ಬಾಹಿರವಾಗಿದೆ. ಎಲ್ಲ ವಯಸ್ಸಿನ ಆಕಳು, ಕರು, ಹೋರಿ ಹಾಗೂ 13 ವರ್ಷದೊಳಗಿನ ಎಮ್ಮೆ, ಕೋಣ ಮತ್ತು ನ್ಯಾಯಾಲಯದ ಆದೇಶದನ್ವಯ ಒಂಟೆ ಹತ್ಯೆ ಮಾಡುವಂತಿಲ್ಲ. ಜು.21ಕ್ಕೆ ಬಕ್ರೀದ್ ಹಬ್ಬವಿದ್ದು, ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

    ಸಂಬಂಧಿಸಿದ ಅಧಿಕಾರಿಗಳು ತಂಡ ರಚಿಸಿಕೊಂಡು ಸೂಕ್ತ ನಿಗಾವಹಿಸಬೇಕು. ಕಾನೂನಿನ ಅನ್ವಯ ಪ್ರಾಣಿ ವಧೆ ಮಾಡಲು ನಿರ್ದಿಷ್ಟ ನಿಯಮಗಳಿವೆ. ವಿನಾಯಿತಿ ಇರುವ ಪ್ರಾಣಿಗಳ ವಧೆ ಹೊರತುಪಡಿಸಿ ಇತರ ಪ್ರಾಣಿಗಳನ್ನು ರಕ್ಷಿಸಬೇಕು. ಈ ಬಗ್ಗೆ ಪೊಲೀಸರು ಎಚ್ಚರವಹಿಸುವಂತೆ ತಿಳಿಸಿದರು.

    ನೋಂದಾಯಿತ ವಧಾಗಾರದಲ್ಲಿ ಕಾಯ್ದೆಯಿಂದ ವಿನಾಯಿತಿ ಹೊಂದಿರುವ ಜಾನುವಾರುಗಳ ವಧೆ ಮಾಡಬೇಕು. ನಗರದಲ್ಲಿ ಒಂದು ನೋಂದಾಯಿತ ವಧಾಗಾರವಿದೆ. ಜಿಲ್ಲೆಯ ಇತರೆಡೆ ವಧಾಗಾರಗಳಿಲ್ಲ. ಸ್ಥಳೀಯ ಆಡಳಿತ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ನಿಯಮಾನುಸಾರ ವಧೆ ಮಾಡಬಹುದು. ವಧೆ ಮಾಡಬಹುದಾದ ಸ್ಥಳಗಳನ್ನು ಸ್ಥಳೀಯ ಆಡಳಿತಗಳು ಗುರುತಿಸಿ ಪಟ್ಟಿ ನೀಡಬೇಕು. ಜು.19ರೊಳಗೆ ತಾಲೂಕು ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಹೇಳಿದರು. ಜಿಪಂ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಎಚ್.ನಾಗರಾಜ ಮತ್ತು ಇತರರಿದ್ದರು.

    ಶಾಂತಿ ಸಭೆ ಆಯೋಜಿಸಿ
    ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಗ್ರಾಮವಾರು ಜನಪ್ರತಿನಿಧಿಗಳ ಹಾಗೂ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆ ಆಯೋಜಿಸಬೇಕು. ಪ್ರಾಣಿ ಕಲ್ಯಾಣ ಕಾಯ್ದೆ ಹಾಗೂ ನಿಯಮ ಬಾಹಿರ ಪ್ರಾಣಿ ಸಾಗಣೆ, ವಧೆ ಬಗ್ಗೆ ಇರುವ ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಈ ಕುರಿತು ಸ್ಥಳೀಯ ಸಂಸ್ಥೆಗಳಿಂದ ವ್ಯಾಪಕ ಪ್ರಚಾರ ನಡೆಸಲು ಕಂದಾಯ, ಪೊಲೀಸ್, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಡಿಸಿ ಎಸ್.ವಿಕಾಸ್ ಕಿಶೋರ್ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts