More

    ಕೂಡಲಸಂಗಮ ರಕ್ಷಿಸೋಣ ಅಭಿಯಾನ

    ಕೂಡಲಸಂಗಮ: ಕೂಡಲಸಂಗಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಬಸವಣ್ಣ, ಸಂಗನಾಥನ ಭಕ್ತರ ನೇತೃತ್ವದಲ್ಲಿ ಅ.11 ರಂದು ಬೆಳಗ್ಗೆ 6 ರಿಂದ 7.30 ರವರೆಗೆ ‘ನಿದ್ರೆಯಲ್ಲಿರುವ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಧಿಕಾರಿಗಳನ್ನು ಎಚ್ಚರಿಸಿ ಕೂಡಲಸಂಗಮ ಸುಕ್ಷೇತ್ರ ರಕ್ಷಿಸೋಣ ಬನ್ನಿ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಗೌಡರ, ಕರವೇ ಗ್ರಾಮ ಘಟಕದ ಅಧ್ಯಕ್ಷ ಮಹಾಂತೇಶ ಕುರಿ, ಕ್ರಾಂತಿರಂಗ ಸ್ವಯಂ ಸೇವಾ ಸಂಘದ ಅಧ್ಯಕ್ಷ ತೀರ್ಥಲಿಂಗ ಬೆಳಗಲ್ಲ, ಅರ್ಚಕ ಕರಸಂಗಯ್ಯ ಗುಡಿ ಹೇಳಿದರು.

    ಸುದ್ದಿಗಾರರ ಜತೆ ಶನಿವಾರ ಮಾತನಾಡಿ, ಕಳೆದ ನಾಲ್ಕು ತಿಂಗಳಿಂದ ಕೂಡಲಸಂಗಮ ಆಡಳಿತ ಮಂಡಳಿ ಕಾರ್ಯ ನಿರ್ವಹಣೆ ಸಮರ್ಪಕವಾಗಿಲ್ಲದೆ ಭಕ್ತರು ಮೂಲಸೌಲಭ್ಯಗಳ ಕೊರತೆಯಿಂದ ಪರದಾಡುವಂತಾಗಿದೆ. ಬಸವೇಶ್ವರ ವೃತ್ತ, ಸಂಗಮೇಶ್ವರ ದೇವಾಲಯ ಹೊರ-ಒಳ ಆವರಣ ಕಸದ ರಾಶಿಯಿಂದ ಕೂಡಿದ್ದು ರಸ್ತೆಗಳು ಹಾಳಾಗಿವೆ. ಉದ್ಯಾನಗಳು, ಬೃಹತ್ ಕಟ್ಟಡಗಳ ನಿರ್ವಹಣೆ ಹಾಗೂ ಸ್ವಚ್ಛತೆಗಾಗಿ ಹಲವಾರು ಬಾರಿ ಮಂಡಳಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮೌಖಿಕವಾಗಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಗೌಡರ ಅಸಮಾಧಾನ ವ್ಯಕ್ತಪಡಿಸಿದರು.

    ಅ.11 ರಂದು ಬಸವಣ್ಣನ ಐಕ್ಯ ಮಂಟಪ, ಸಂಗಮನಾಥ ದೇವಾಲಯ ಸ್ವಚ್ಛಗೊಳಿಸುವ ಮೂಲಕ ಅಭಿಯಾನ ಆರಂಭಿಸಲಾಗುತ್ತಿದ್ದು ಪ್ರತಿ ಭಾನುವಾರ ಮಂಡಳಿ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಬೆಳಗ್ಗೆ 6 ರಿಂದ 7.30 ರವರೆಗೆ ಮಾಡಲಾಗುವುದು. ಪುಣ್ಯಕ್ಷೇತ್ರ ರಕ್ಷಿಸಬೇಕು ಎನ್ನುವವರು ಅಭಿಯಾನದಲ್ಲಿ ಭಾಗವಹಿಸಬಹುದು. ಈ ಅಭಿಯಾನಕ್ಕೆ ನಾಡಿನ ಕೆಲವು ಮಠಾಧೀಶರು ಬೆಂಬಲ ವ್ಯಕ್ತಪಡಿಸುವುದರ ಜತೆಗೆ ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು.

    ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷೃ ಆರೋಪ
    ಕೂಡಲಸಂಗಮ ಕ್ಷೇತ್ರದ ನಿರ್ವಹಣೆಗಾಗಿ ಮಂಡಳಿಯಲ್ಲಿ 90ಕ್ಕೂ ಅಧಿಕ ಕಾರ್ಮಿಕರು, ಎಂಟು ಅಧಿಕಾರಿಗಳು ಇದ್ದಾರೆ. ಇವರಿಗಾಗಿ ಪ್ರತಿ ತಿಂಗಳು ವೇತನ ರೂಪದಲ್ಲಿ 18 ರಿಂದ 20 ಲಕ್ಷ ರೂ. ಸಾರ್ವಜನಿಕರ ತೆರಿಗೆ ಹಣ ಪಾವತಿಯಾಗುತ್ತಿದ್ದರೂ ನಿರ್ವಹಣೆ ಮಾಡದೆ ಇರುವುದು ದುರಂತ. ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸಿದ ಬೃಹತ್ ಕಟ್ಟಡಗಳ ಮೇಲೆ ಕಸ ಬೆಳೆದು ಅವುಗಳ ಸೌಂದರ್ಯ ಹಾಳಾಗುತ್ತಿದೆ. ಕಟ್ಟಡದ ಒಳ ಭಾಗವನ್ನು ಕೆಲವರು ಆಟದ ಮೈದಾನ ಮಾಡಿಕೊಂಡಿದ್ದರಿಂದ ಸುತ್ತಲಿನ ಉದ್ಯಾನ ನಾಶವಾಗಿದೆ. ರಕ್ಷಿಸಬೇಕಾದ ಮಂಡಳಿಯ ಅಧಿಕಾರಿಗಳೇ ಸಿಬ್ಬಂದಿಯೊಂದಿಗೆ ಆಟವಾಡುತ್ತಾರೆ. ರಾತ್ರಿ ವೇಳೆ ಬೃಹತ್ ಕಟ್ಟಡಗಳು ಕುಡುಕರ ತಾಣಗಳಾಗಿ ಮಾರ್ಪಟ್ಟಿದ್ದರೂ ಸಮಾಜ ವಿರೋಧಿ ಚಟುವಟಿಕೆ ತಡೆಯುವ ಕಾರ್ಯವನ್ನು ಮಂಡಳಿ ಮಾಡುತ್ತಿಲ್ಲ ಎಂದು ಕರವೇ ಗ್ರಾಮ ಘಟಕದ ಅಧ್ಯಕ್ಷ ಮಹಾಂತೇಶ ಕುರಿ ಆರೋಪಿಸಿದರು.

    112 ಜನರ ಸಹಿ ಸಂಗ್ರಹ
    ಸುತ್ತಲಿನ ಗ್ರಾಮಗಳ 112 ಜನರು ಸಹಿ ಮಾಡಿದ ಮನವಿ ಪತ್ರವನ್ನು ಮಂಡಳಿಗೆ ಆಯುಕ್ತರಿಗೆ ನೀಡಿ ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯಕ್ಕೆ ಸಹಕಾರ ಕೊಡುವಂತೆ ವಿನಂತಿ ಮಾಡಲಾಗಿದೆ. ಇದೇ ಮನವಿ ಪತ್ರವನ್ನು ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ತಹಸೀಲ್ದಾರ್ ಸೇರಿ ಇತರರಿಗೆ ರವಾನಿಸಲಾಗಿದೆ. ಕೂಡಲಸಂಗಮದಲ್ಲಿ ವಾಸವಿರುವ ಮಂಡಳಿ ಸಿಬ್ಬಂದಿ ಈ ಅಭಿಯಾನವನ್ನು ತಡೆಯುವ ಕಾರ್ಯ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಅಭಿಯಾನವನ್ನು ನಿಲ್ಲಿಸಬಾರದು. ನಿಮ್ಮ ಕಾಯಕವನ್ನು ಸಮರ್ಪಕವಾಗಿ ಬಸವಣ್ಣನ ನೆಲದಲ್ಲಿ ಮಾಡಿ ಎಂದು ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಬೆಂಬಲಿಸಿದ್ದಾರೆ ಎಂದು ಕ್ರಾಂತಿರಂಗ ಸ್ವಯಂ ಸೇವಾ ಸಂಘದ ಅಧ್ಯಕ್ಷ ತೀರ್ಥಲಿಂಗ ಬೆಳಗಲ್ಲ ಸುದ್ದಿಗಾರರಿಗೆ ತಿಳಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts