More

    ಜೂನ್‌ಗೆ ಕೊಂಕಣ ರೈಲ್ವೆ ವಿದ್ಯುದೀಕರಣ ಪೂರ್ಣ

    ವೇಣುವಿನೋದ್ ಕೆ.ಎಸ್.ಮಂಗಳೂರು
    ಈವರೆಗೆ ಕೇರಳ ಕಡೆಯಿಂದ ಮಂಗಳೂರು ಸೆಂಟ್ರಲ್‌ವರೆಗಷ್ಟೇ ಬರುತ್ತಿದ್ದ ಇಲೆಕ್ಟ್ರಿಕ್ ಲೋಕೊ(ಇಂಜಿನ್)ಗಳು ಜೂನ್ ವೇಳೆಗೆ ಕೊಂಕಣ ರೈಲ್ವೇ ಮಾರ್ಗದಲ್ಲೂ ಸಂಚಾರ ವಿಸ್ತರಿಸುವ ನಿರೀಕ್ಷೆಯಲ್ಲಿವೆ. ಕೊಂಕಣ ರೈಲ್ವೆಯ 1000 ಕೋಟಿ ರೂ.ವೆಚ್ಚದ 400 ಕಿ.ಮೀ ವಿದ್ಯುದೀಕರಣ ಕಾಮಗಾರಿ ಜೂನ್ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 2019ರಲ್ಲಿ ತೋಕೂರಿನಿಂದ ಬಿಜೂರುವರೆಗೆ ಮಾರ್ಗ ವಿದ್ಯುದೀಕರಣ ಕಾಮಗಾರಿ ಪೂರ್ಣವಾಗಿದ್ದು, ಪ್ರಸ್ತುತ ಬಹುತೇಕ ಕಾರವಾರದವರೆಗೂ ಕಾಮಗಾರಿ ಪೂರ್ಣವಾಗಿದ್ದು ಸಣ್ಣ ಪುಟ್ಟ ಕೆಲಸ ಬಾಕಿ ಉಳಿದಿದೆ. ಮಾರ್ಚ್ ಅಂತ್ಯಕ್ಕೆ ಕಾರವಾರವರೆಗೆ ಕೆಲಸ ಮುಗಿಯಲಿದೆ.

    ತೋಕೂರಿನಿಂದ ಬಿಜೂರುವರೆಗಿನ 105 ಕಿ.ಮೀ ಮಾರ್ಗದ ವಿದ್ಯುದೀಕರಣ 2019ರಲ್ಲಿ ಪೂರ್ಣಗೊಂಡು ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದ್ದರು. ಈಗ ಕಾರವಾರವರೆಗಿನ ಭಾಗದ ಕೆಲಸ ಪೂರ್ಣಗೊಳ್ಳುತ್ತಿದ್ದು ಪರಿಶೀಲನೆಗಾಗಿ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ರೈಲ್ವೆಯ ಗಡಿ ತೋಕೂರಿನಲ್ಲಿ ಬರುತ್ತದೆ, ಅಲ್ಲಿಂದ ಉತ್ತರಕ್ಕೆ ಕೊಂಕಣ ರೈಲ್ವೆ ವ್ಯಾಪ್ತಿ. ದಕ್ಷಿಣ ರೈಲ್ವೆಯಲ್ಲಿ ಬಹುತೇಕ ರೈಲುಗಳೂ ಇಲೆಕ್ಟ್ರಿಕ್ ಇಂಜಿನ್‌ನಿಂದ ಚಲಿಸುತ್ತವೆ.

    ಏನಿದರ ಪ್ರಯೋಜನ?
    ಇಲೆಕ್ಟ್ರಿಕ್ ಲೋಕೋದಿಂದಾಗಿ ಡೀಸೆಲ್ ದರ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಉಳಿತಾಯವಾಗಲಿದೆ. ಸರಾಸರಿ 300 ಕಿ.ಮೀ ಸಂಚಾರಕ್ಕೆ 1500 ಲೀಟರ್‌ವರೆಗೆ ಡೀಸೆಲ್ ಬೇಕಾಗುತ್ತದೆ. ಗೂಡ್ಸ್ ರೈಲಾದರೆ ಇನ್ನೂ 500 ಲೀಟರ್ ಹೆಚ್ಚು ಬೇಕು. ಇದರ ಬದಲು ಇಲೆಕ್ಟ್ರಿಕ್ ಇಂಜಿನ್ ಆದರೆ ದೊಡ್ಡ ಉಳಿತಾಯವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಮಂಗಳೂರು ಸೆಂಟ್ರಲ್‌ನಲ್ಲಿ ಇಂಜಿನ್ ಬದಲಾಯಿಸುವ ಸಮಯ, ಡೀಸೆಲ್ ತುಂಬಿಸಲು ಬೇಕಾಗುವ ಸಮಯವೂ ಉಳಿತಾಯವಾಗುತ್ತದೆ. ತಿರುವನಂತಪುರಂ ಕಡೆಯಿಂದ ಬರುವ ರೈಲು ನೇರವಾಗಿ ಕೊಂಕಣ ರೈಲ್ವೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತದೆ. ಸದ್ಯ ದಕ್ಷಿಣದಿಂದ ಬರುವ ರೈಲುಗಳು ಮಂಗಳೂರು ಸೆಂಟ್ರಲ್, ಜಂಕ್ಷನ್‌ನಲ್ಲಿ ಇಲೆಕ್ಟ್ರಿಕ್‌ನಿಂದ ಡೀಸೆಲ್ ಲೋಕೊಗೆ ಬದಲಾಯಿಸಬೇಕು.

    ಸಬ್ ಸ್ಟೇಷನ್ ಪ್ರಗತಿ: ಕೊಂಕಣ ರೈಲ್ವೇ ಭಾಗದಲ್ಲಿ ವಿದ್ಯುದೀಕರಣಕ್ಕೆ ಬೇಕಾದ ಸಬ್ ಸ್ಟೇಷನ್ ಕೆಲಸವೂ ಭರದಿಂದ ಸಾಗುತ್ತಿದೆ. ಕಾರವಾರ ಭಾಗದಲ್ಲಿ ಮೂಲ್ಕಿ, ಬಾರ್ಕೂರು, ಸೇನಾಪುರ, ಮುರುಡೇಶ್ವರ, ಕಾರವಾರ ಮತ್ತು ಬಾಲಿಯಲ್ಲಿ 9 ಸಬ್ ಸ್ಟೇಷನ್‌ಗಳು ವಿವಿಧ ಹಂತಗಳಲ್ಲಿವೆ. ಮಾರ್ಚ್ ವೇಳೆಗೆ ಕಾರವಾರವರೆಗಿನ ಮಾರ್ಗ ವಿದ್ಯುದೀಕರಣ ಆಗಲಿದೆ. ಜೂನ್ ವೇಳೆಗೆ ಸಂಪೂರ್ಣ ಕೊಂಕಣ ರೈಲ್ವೇ ವಿದ್ಯುದೀಕರಣ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎನ್ನುತ್ತಾರೆ ಕೊಂಕಣ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕ ಬಿ.ಬಿ.ನಿಗಮ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts