More

    ಮಳೆಗೆ ಕೃಷಿ ಭೂಮಿಯೇ ಮಾಯ!

    ಸುಬ್ರಹ್ಮಣ್ಯ: ಭಾರಿ ಮಳೆಯಿಂದ ಕೊಲ್ಲಮೊಗ್ರದ ದೋಲನ ಮನೆ ಎಂಬಲ್ಲಿ ಸುಮಾರು 2.5 ಎಕರೆ ಕೃಷಿ ಭೂಮಿ ನಾಶವಾಗಿದೆ. ಹೊಳೆಯ ಕೊರತಕ್ಕೆ ಸಿಲುಕಿ 500ಕ್ಕೂ ಅಧಿಕ ಅಡಕೆ ಮರ, ಅಡಕೆ ಗಿಡಗಳು ಹೊಳೆ ಪಾಲಾಗಿದ್ದು ಈ ಪ್ರದೇಶವೇ ಸಮುದ್ರದಂತೆ ಭಾಸವಾಗುತ್ತಿದೆ. ಇಲ್ಲಿದ್ದ ಕೃಷಿ ಭೂಮಿ ಮಾಯವಾಗಿದ್ದು ಎಲ್ಲಿ ನೋಡಿದರಲ್ಲಿ ನೀರು ಕಾಣುತ್ತಿದೆ.
    ತೋಟದಲ್ಲಿದ್ದ ಕೃಷಿ ಪಂಪ್‌ಸೆಟ್, ಪೈಪ್‌ಗಳು ಹೊಳೆ ಪಾಲಾಗಿವೆ. ಹೊಳೆಯಲ್ಲಿ ಕೊಚ್ಚಿ ಬಂದ ಭಾರಿ ಗಾತ್ರದ ಮರಗಳು ತೋಟದ ಒಳಗೆ ನುಗ್ಗಿದ್ದು ಅಡಕೆ ಮರ, ಗಿಡಗಳು ಪುಡಿಪುಡಿಯಾಗಿರುವ ದೃಶ್ಯಗಳು ಮನಕಲಕುವಂತಿದೆ. ಅತ್ಯಂತ ಸಣ್ಣ ಕೃಷಿ ಭೂಮಿ ಹೊಂದಿರುವ ಇಲ್ಲಿನ ಕೃಷಿಕರ ಮುಂದೆ ಭವಿಷ್ಯದ ಪ್ರಶ್ನಾರ್ಥಕ ಚಿಹ್ನೆ ಎದ್ದು ನಿಂತಿದೆ.
    ಕೊಲ್ಲಮೊಗ್ರದ ದೋಲನ ಮನೆ ಎಂಬಲ್ಲಿ ಹೊಳೆ ಕೊರೆತಕ್ಕೆ ಸಿಲುಕಿ ಅಪಾರ ಹಾನಿಯಾದ ಕೃಷಿ ಭೂಮಿ ಪ್ರದೇಶಕ್ಕೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಸಂಪೂರ್ಣ ತೋಟವೇ ಪ್ರಕೃತಿ ವಿಕೋಪಕ್ಕೆ ಸಿಲುಕಿ ನಾಶವಾದುದನ್ನು ಕಂಡು ದಿಗ್ಭ್ರಮೆ ವ್ಯಕ್ತಪಡಿಸಿದ ಅವರು, ನಷ್ಟಕ್ಕೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.
    ಕಂದಾಯ ನಿರೀಕ್ಷಕ ಎಂ.ಎಲ್.ಶಂಕರ್, ಬಿಜೆಪಿ ಮುಖಂಡರಾದ ಹರೀಶ್ ಕಂಜಿಪಿಲಿ, ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಉದಯ ಶಿವಾಲ, ಕುಸುಮಾಧರ್, ಆರಾಧನಾ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಸಚಿವರು ಹಾನಿಯಾದ ಅನೇಕ ಕೃಷಿ ತೋಟಗಳಿಗೆ, ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಹಾನಿಯಾದ ವರದಿ ಪಡೆದರು.

    ಮನೆ ಕುಸಿತ: ಭಾರಿ ಮಳೆಯಿಂದಾಗಿ ಕೊಲ್ಲಮೊಗ್ರದ ದೋಲನ ಮನೆ ಲಲಿತಾ ಎಂಬುವರ ಮನೆ ಕುಸಿತಗೊಂಡಿದ್ದು, ಸ್ಥಳಕ್ಕೆ ಸಚಿವ ಎಸ್.ಅಂಗಾರ ಭೇಟಿ ನೀಡಿ ಪರಿಶೀಲಿಸಿದರು. ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಕಂದಾಯ ನಿರೀಕ್ಷಕ ಎಂ.ಎಲ್. ಶಂಕರ್, ಪ್ರಮುಖರಾದ ಹರೀಶ್ ಕಂಜಿಪಿಲಿ, ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಉದಯ ಶಿವಾಲ ಉಪಸ್ಥಿತರಿದ್ದರು.

    ಬಟ್ಟೆಮಜಲು ಸೇತುವೆ ಸಂಪರ್ಕ ಕಡಿತ: ಕೊಲ್ಲಮೊಗ್ರು ಗ್ರಾಮದ ಕಟ್ಟ -ಗೋವಿಂದನಗರ ಸಂಪರ್ಕ ಸೇತುವೆ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಹಾನಿಯಾಗಿದೆ. ಕೊಲ್ಲಮೊಗ್ರು, ಕಟ್ಟ, ಗೋವಿಂದನಗರ, ಬಟ್ಟೆಮಜಲು ಸಂಪರ್ಕ ರಸ್ತೆಯ ಸೇತುವೆ ಹಾನಿಯಾದುದರಿಂದ ಈ ಭಾಗದ ಜನರ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಕಳೆದ ವರ್ಷದ ಮಳೆಗೆ ಈ ಯೋಜನೆಗೆ ಸೇತುವೆಯ ಪಕ್ಕ ಸ್ವಲ್ಪ ಹಾನಿಯಾಗಿತ್ತು. ಈ ವರ್ಷ ಸೇತುವೆಯ ಇಕ್ಕೆಲ ಪೂರ್ತಿ ಮಣ್ಣು ಹೋಗಿದ್ದು, ಈ ಭಾಗಕ್ಕೆ ವಾಹನ ಸಂಪರ್ಕ ಕಡಿತವಾಗಿದೆ.

    ಮಳೆಗೆ ಕೃಷಿ ಭೂಮಿಯೇ ಮಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts