More

    ಬಡ ಮಹಿಳೆಯರಿಗೆ ಬದುಕು ಕಟ್ಟಿಕೊಡುವ ಡಿಸಿಸಿ ಬ್ಯಾಂಕ್

    ಕೋಲಾರ: ಬ್ಯಾಂಕ್ ಇರೋದು ಕೇವಲ ಸಾಲ ನೀಡೋದಕ್ಕಲ್ಲ. ಬಡವರಿಗೆ ಬದುಕು ಕಟ್ಟಿಕೊಡುವುದಕ್ಕಾಗಿ ಎಂದು
    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸ್ಪಷ್ಟಪಡಿಸಿದರು.

    ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ರಾಜ್ಯ ಸರ್ಕಾರ ಪ್ರಯೋಜಿತ ಬಡವರ ಬಂಧು ಮತ್ತು ಕಾಯಕ ಯೋಜನೆ ಕುರಿತು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮೀಟರ್ ಬಡ್ಡಿ ದಂಧೆಯಿಂದ ನಲುಗಿರುವ ಬಡವರನ್ನು ಉಳಿಸಲು ಡಿಸಿಸಿ ಬ್ಯಾಂಕ್ ಬದ್ಧವಾಗಿದೆ ಎಂದರು.

    ಜಾತಿ ಭೇದ-ಭಾವ ಇಲ್ಲದೆ, ರಾಜಕೀಯ ಹಸ್ತಕ್ಷೇಪವಿಲ್ಲದೆ ಬ್ಯಾಂಕ್ ರೈತ, ಮಹಿಳೆ, ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುತ್ತಿದೆ, ಬಡವರು ಯಾರೂ ಬ್ಯಾಂಕಿಗೆ ಮೋಸ ಮಾಡುತ್ತಿಲ್ಲ. ಶೇ.98ರಷ್ಟು ಜನ ಪ್ರಾಮಾಣಿಕವಾಗಿ ಸಾಲದ ಕಂತುಗಳನ್ನು ತೀರಿಸುತ್ತಿದ್ದಾರೆ ಎಂದರು.

    ಮ್ಯಾನೇಜರ್‌ಗಳಿಗೆ ಹೊಣೆ: ಬಡವರ ಬಂಧು ಯೋಜನೆಯಡಿ ನಗರ, ಪಟ್ಟಣ, ಸ್ಲಂಪ್ರದೇಶದ ಬೀದಿ ಬದಿ ವ್ಯಾಪಾರಿಗಳಿಗೆ 2000 ರೂ.ನಿಂದ 10,000 ರೂ. ಸಾಲ ನೀಡಬಹುದು. ವ್ಯಾಪಾರಿಗಳಿಗೆ ಸ್ಥಳೀಯ ಸಂಸ್ಥೆಗಳು ಪರವಾನಗಿ ನೀಡುವುದರಿಂದ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದು ವ್ಯಾಪಾರಿಗಳ ಪಟ್ಟಿ ತರಿಸಿಕೊಂಡು ಅರ್ಹರಿಗೆ ಸಾಲ ನೀಡುವ, ವಸೂಲಿ ಮಾಡುವ ಜವಾಬ್ದಾರಿ ಬ್ಯಾಂಕ್ ವ್ಯವಸ್ಥಾಪಕರದ್ದು ಎಂದರು.

    ಸಾಲ ಪಡೆದವರಿಂದ ಪ್ರತಿದಿನ ಪಿಗ್ಮಿ ರೂಪದಲ್ಲಿ ಹಣ ವಸೂಲಿ ಮಾಡಿ ಹಣವನ್ನು ಪ್ರತಿ ತಿಂಗಳು ಸಾಲದ ಖಾತೆಗೆ ಜಮಾ ಮಾಡಿದಲ್ಲಿ ಬಡವರಿಗೆ ಹೊರೆ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಿಸಿದರು.

    ಕಾಯಕ ಯೋಜನೆ: ಕಾಯಕ ಯೋಜನೆಯನ್ನು ಡಿಸಿಸಿ ಬ್ಯಾಂಕ್ ಮೂಲಕ ಅನುಷ್ಠಾನಕ್ಕೆ ತರಲು ಸರ್ಕಾರ ಅವಕಾಶ ಮಾಡಿದೆ. ಇದರಡಿ ಗುಡಿ ಕೈಗಾರಿಕೆ ಸ್ಥಾಪಿಸಲು 5 ಲಕ್ಷ ರೂ.ವರೆಗೆ ಶೂನ್ಯಬಡ್ಡಿ ದರಕ್ಕೆ ಹಾಗೂ ಹೆಚ್ಚಿನ ಸಾಲಕ್ಕೆ ಶೇ.4ರ ಬಡ್ಡಿ ವಿಧಿಸಲಾಗುವುದು. ಕನಿಷ್ಠ 100 ಸಂಘಗಳಿಗೆ ಸಾಲ ನೀಡುವ ಗುರಿಯೊಂದಿಗೆ ಅಧಿಕಾರಿಗಳು ಕೆಲಸ ಮಾಡಬೇಕು, ಮಾರ್ಚ್ ಅಂತ್ಯಕ್ಕೆ 50, ಜೂನ್‌ನಲ್ಲಿ 50 ಎಸ್‌ಜಿಪಿಗಳನ್ನು ಗುರುತಿಸಿ ಸಾಲ ನೀಡಬೇಕು ಎಂದರು.

    ಜಿಪಂ ಆರ್ಥಿಕ ಸಲಹೆಗಾರ ಸುಂದರೇಶ್ ಮಾತನಾಡಿ, ಟೆಕ್ಸ್‌ಟೈಲ್ ಉದ್ಯಮ ಮಾಲೂರಿನಲ್ಲಿ ಪ್ರಾರಂಭವಾಗಿದೆ. ಇದಕ್ಕೆ ಪೂರಕವಾಗಿ ಮಹಿಳೆಯರಿಗೆ ಟೈಲರಿಂಗ್ ಉದ್ಯಮ್ಯಕ್ಕೆ ಒತ್ತು ನೀಡಲು ಸರ್ಕಾರ 15,000 ನೀಡಿದರೆ, ಡಿಸಿಸಿ ಬ್ಯಾಂಕ್‌ನಿಂದ 35,000 ರಿಂದ 50,000 ರೂ. ಸಾಲ ನೀಡಿದರೆ ಅನುಕೂಲವಾಗುತ್ತದೆ ಎಂದರು.

    ಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣೇಗೌಡ ಮಾತನಾಡಿ, ಬ್ಯಾಂಕ್‌ನಿಂದ ಬಡವರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ದೊರಕಿಸಿಕೊಡಲು ಬದ್ಧ. ಅದೇ ರೀತಿ ಸರ್ಕಾರದಿಂದ ಬ್ಯಾಂಕಿಗೆ ಬರಬೇಕಾದ ಬಡ್ಡಿ ಹಣ ಕೊಡಿಸಲು ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದರು.
    ನಿರ್ದೇಶಕರಾದ ಹನುಮಂತರೆಡ್ಡಿ, ನಾಗಿರೆಡ್ಡಿ, ಮೋಹನ್ ರೆಡ್ಡಿ, ಗೋವಿಂದರಾಜು, ಸಹಕಾರ ಇಲಾಖೆ ಉಪ ನಿಬಂಧಕ ನೀಲಪ್ಪನವರ್, ಚಿಕ್ಕಬಳ್ಳಾಪುರ ಜಿಲ್ಲೆ ಉಪ ನಿಬಂಧಕ ನಂಜುಂಡೇಗೌಡ, ಜಿಪಂ ಯೋಜನಾಧಿಕಾರಿ ಎ.ಎಸ್.ಬಿರಾದಾರ್, ಡಿಸಿಸಿ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಎಂ.ಆರ್.ಶಿವಕುಮಾರ್, ಖಲೀಂವುಲ್ಲಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts