More

    ಕೃಷಿಹೊಂಡಕ್ಕೆ ಬೇಲಿ ಅಳವಡಿಸಿ, ಜೀವ ಹಾನಿ ತಪ್ಪಿಸಿ

    *ರೈತ ಬಾಂಧವರಿಗೆ ಕೃಷಿ ಇಲಾಖೆ ಮನವಿ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಕೃಷಿ ಹೊಂಡಗಳಿಗೆ ತಪ್ಪದೆ ಬೇಲಿ ಅಳವಡಿಸುವ ಮೂಲಕ ಜೀವ ಹಾನಿ ತಪ್ಪಿಸಿ ಎಂದು ಕೃಷಿ ಇಲಾಖೆ ಜಿಲ್ಲೆಯ ರೈತರಲ್ಲಿ ಕಳಕಳಿಯಿಂದ ಮನವಿ ಮಾಡಿದೆ.
    ಈ ಬಗ್ಗೆ ಕೃಷಿ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಈ ಹಿಂದಿನ ಹಳೇಯ ಕೃಷಿ ಹೊಂಡಗಳಿಗೆ ಕೂಡಲೇ ತಂತಿ ಬೇಲಿ, ತಡೆಗೋಡೆ ಸೇರಿ ಇನ್ನಿತರ ಯಾವುದೇ ಮಾದರಿಯಲ್ಲಿ ಬೇಲಿ ನಿರ್ಮಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
    ಬೆಳೆ ಸಂರಕ್ಷಣೆ ಗುರಿ: ಕೃಷಿ ಇಲಾಖೆಯಡಿ 2014-15 ರಿಂದ ರೈತರು ತಮ್ಮ ಜಮೀನುಗಳಲ್ಲಿ ವೈಯಕ್ತಿಕವಾಗಿ ಕೃಷಿ ಹೊಂಡಗಳನ್ನು ನಿರ್ಮಿಸಲು ಕೃಷಿಭಾಗ್ಯ ಯೋಜನೆ ರೂಪಿಸಲಾಗಿದೆ. ಪ್ರಮುಖವಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿದ್ದಂತಹ ಮಳೆನೀರನ್ನು ಸಂಗ್ರಹಿಸಿಟ್ಟುಕೊಂಡು, ಮಳೆಬಾರದ ವೇಳೆಯಲ್ಲಿ ಸಂಗ್ರಹಿಸಿದ ನೀರನ್ನು ಬಳಸಿ ಬೆಳೆದಂತಹ ಬೆಳೆಯನ್ನು ಸಂರಕ್ಷಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಆದರೆ ಇದೇ ಕೃಷಿ ಹೊಂಡಗಳು ಬಹುತೇಕ ಸಂದರ್ಭದಲ್ಲಿ ಜನಜಾನುವಾರುಗಳ ಪ್ರಾಣಕ್ಕೆ ಕಂಟಕವಾಗುತ್ತಿರುವ ಪ್ರಕರಣಗಳು ನಡೆಯುತ್ತಿವೆ.
    ಹಳೇ ಹೊಂಡಗಳ ತಲೆಬೇನೆ: ರೈತಾಪಿ ಜನರ ನೀರಾವರಿ ಕನಸಿಗೆ ಪೂರಕವಾಗಿರುವ ಕೃಷಿ ಹೊಂಡಗಳೇ ಹಲವು ಸನ್ನಿವೇಶಗಳಲ್ಲಿ ಜನ ಜಾನುವಾರುಗಳ ಪ್ರಾಣಕ್ಕೆ ಕಂಟಕವಾಗುತ್ತಿರುವ ಪ್ರಕರಣಗಳು ಸಂಭವಿಸುತ್ತಿರುವುದರಿಂದ ಸರ್ಕಾರದ ಆದೇಶದಂತೆ ಬೇಲಿ ನಿರ್ಮಾಣ ಮಾಡುವುದನ್ನು ಕಡ್ಡಾಯಗೊಳಿಸಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. 2014-15 ರ ಬಳಿಯ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ ಪಡೆಯುವ ರೈತರಿಗೆ ಬೇಲಿ ಅಳವಡಿಕೆ ಕಡ್ಡಾಯವಾಗಿದೆ. ಖುದ್ದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೇಲಿ ಅಳವಡಿಸಿಕೊಂಡಿರುವ ಬಗ್ಗೆ ಪ್ರತ್ಯಕ್ಷ ವರದಿ ಮಾಡಿದರಷ್ಟೇ ಹಣ ಬಿಡುಗಡೆಯಾಗಲಿದೆ. ಆದರೆ ಈ ನಿಯಮ ಈ ಹಿಂದೆ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳಿಗೆ ಅನ್ವಯವಾಗಲ್ಲ. ಆದ್ದರಿಂದ ಕೃಷಿ ಇಲಾಖೆ ಈ ಹಿಂದೆ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳ ಮಾಲೀಕರಿಗೆ ಮನವಿ ಮಾಡುತ್ತಿದ್ದು, ಜಿಲ್ಲೆಯಾದ್ಯಂತ ಈ ಬಗ್ಗೆ ದೊಡ್ಡಮಟ್ಟದ ಜಾಗೃತಿ ಮೂಡಿಸುತ್ತಿದೆ.

    ಟಾರ್ಪಾಲಿನ್ ಅಪಾಯಕಾರಿ ಕೃಷಿ ಹೊಂಡಗಳಲ್ಲಿ ನೀರು ಹಿಡಿದಿಡಲು ಕಪ್ಪು ಬಣ್ಣದ ಟಾರ್ಪಾಲಿನ್ ಹೊದಿಕೆ ಬಳಸಲು ಸೂಚಿಸಲಾಗಿರುತ್ತದೆ. ರೈತರು ಸಹ ಹೆಚ್ಚಿನ ಆಸಕ್ತಿಯಿಂದ ಈ ಯೋಜನೆ ಅನುಷ್ಠಾನ ಮಾಡಲು ಸಹಕರಿಸಿದ್ದು ಇದರ ಪ್ರಯೋಜನೆ ಪಡೆದಿದ್ದಾರೆ. ಆದರೆ ದುರದೃಷ್ಟವಶಾತ್ ಟಾರ್ಪಾಲಿನ್ ಮೇಲ್ಮೈ ನುಣುಪಾಗಿರುವುದರಿಂದ, ಕೃಷಿ ಹೊಂಡದಲ್ಲಿರುವ ನೀರಿನಲ್ಲಿ ಇಳಿಯುವಾಗ ಆಯತಪ್ಪಿ ಜಾರಿ ಬಿದ್ದು ಹಲವು ಜೀವ ಹಾನಿಯಾಗಿಗೆ ಕಾರಣವಾಗಿದೆ. ರೈತರಿಗೆ ಮಳೆ ನೀರಿನ ಕೊಯ್ಲಿನ ತಂತ್ರಜ್ಞಾನವಾಗಿ ಕೃಷಿ ಹೊಂಡಕ್ಕೆ ಅನುಮತಿಸಲಾಗಿರುವ ಕೃಷಿ ಹೊಂಡಗಳು ಮಾರಣಾಂತಿಕವಾಗುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಿದೆ.

    ಹಳೇ ಹೊಂಡಗಳಿಗೆ ಅನುದಾನವಿಲ್ಲ ಜಿಲ್ಲೆಯಲ್ಲಿ ಸಾವಿರಾರು ಕೃಷಿಹೊಂಡಗಳಿಗೆ ಇದರಲ್ಲಿ ಶೇ.40 ಹೊಂಡಗಳು ನೀರಿಲ್ಲದೆ ಸದ್ಬಳಕೆಯಾಗುತ್ತಿಲ್ಲ. ಉಳಿದ ಕೃಷಿಹೊಂಡಗಳು ಕೃಷಿ ಚಟುವಟಿಕೆಗಳಿಗೆ ನೆರವಾಗಿವೆ. ಆದರೆ ಇವುಗಳ ಪೈಕಿ ಯಾವೊಂದು ಕೃಷಿಹೊಂಡಗಳಿಗೂ ತಂತಿ ಬೇಲಿ ಅಥವಾ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಹೊಸದಾಗಿ ಕೃಷಿಭಾಗ್ಯ ಯೋಜನೆಯಡಿ ಕೃಷಿಹೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುತ್ತಿರುವ ರೈತರೊಂದಿಗೆ ಈಗಾಗಲೇ ಕೃಷಿಹೊಂಡ ಹೊಂದಿರುವ ರೈತರು ತಂತಿಬೇಲಿ ನಿರ್ಮಾಣಕ್ಕೆ ಅನುದಾನ ನೀಡಿ ಎಂದು ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ಸರ್ಕಾರದಿಂದ ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳಿಗೆ ತಪ್ಪದೆ ಕಡ್ಡಾಯವಾಗಿ ತಂತಿಬೇಲಿ, ಸುರಕ್ಷಿತಬೇಲಿಯನ್ನು ನಿರ್ಮಿಸಿಕೊಳ್ಳಬೇಕು. ಇದರಿಂದ ಜನ, ಜಾನುವಾರುಗಳ ಜೀವಹಾನಿ ರಕ್ಷಣೆ ಸಾಧ್ಯವಾಗಲಿದೆ. ನೀರಾವರಿ ಯೋಜನೆಗೆ ಪೂರಕವಾಗಿರುವ ಕೃಷಿ ಹೊಂಡ ಯೋಜನೆ ಜೀವಹಾನಿಗೆ ದಾರಿ ಮಾಡಿಕೊಡುವಂತಾಗಬಾರದು. ಪ್ರಸ್ತುತ ಯೋಜನೆಗೆ ಬೇಲಿ ಕಡ್ಡಾಯಗೊಳಿಸಲಾಗಿದೆ, ಹಳೇ ಹೊಂಡಗಳಿಗೆ ಬೇಲಿ ನಿರ್ಮಾಣಕ್ಕೆ ರೈತರಲ್ಲಿ ಮನವಿ ಮಾಡಲಾಗುತ್ತಿದೆ.

    ಗಾಯತ್ರಿ, ಉಪನಿರ್ದೇಶಕಿ ಕೃಷಿ ಇಲಾಖೆ ಬೆಂಗಳೂರು ಗ್ರಾಮಾಂತರ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts