More

    ಅಸ್ಪಶ್ಯತೆ ಮಾನಸಿಕ ರೋಗ: ಪ್ರೊ.ರಾಜಪ್ಪ ದಳವಾಯಿ

    ಮೈಸೂರು: ಅಸ್ಪಶ್ಯತೆಯೇ ಅವಿವೇಕ. ವಿವೇಕ ಇರುವವರು ಇದನ್ನು ಆಚರಣೆ ಮಾಡಲು ಸಾಧ್ಯವಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಪ್ಪ ದಳವಾಯಿ ಹೇಳಿದರು.


    ಮಾನಸಗಂಗೋತ್ರಿಯಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಡಾ.ಬಿ.ಪವಿತ್ರ ಅವರ ‘ಕಡಲೊಳಗಿನ ಕಿಡಿಗಳು’ ಸಂಶೋಧನಾ ಮಹಾಪ್ರಬಂಧ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಭಾರತ ವಿಜ್ಞಾನ, ಸಂಶೋಧನೆಯಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದರೂ ಅಸ್ಪಶ್ಯತೆಯ ಹೊಲಸು ತೊಳೆಯಲಾಗಿಲ್ಲ. ಅಷ್ಟರ ಮಟ್ಟಿಗೆ ನಮ್ಮ ಬದುಕು ಹೊಲಸಾಗಿ ಹೋಗಿದೆ ಎಂದರು.


    ಅಸ್ಪತ್ಯತೆ ಮಾನಸಿಕ ರೋಗ. ಜತೆಗೆ ಗುಪ್ತ ರೋಗವೂ ಹೌದು. ಅದನ್ನು ಆಚರಣೆ ಮಾಡಿದವರಿಗೆ ಏನು ಅನಿಸುವುದಿಲ್ಲ. ಆದರೆ, ಅದಕ್ಕೆ ಒಳಗಾಗುವವರಿಗೆ ಹೇಳಿಕೊಳ್ಳಲಾಗದಷ್ಟು ನೋವು ಆಗುತ್ತದೆ. ಈ ಕಾರಣಕ್ಕೆ ಡಾ.ಅಂಬೇಡ್ಕರ್ ಅವರು ‘ಗುಲಾಮಗಿರಿಗಿಂತ ಅಸ್ಪಶ್ಯತೆ ಕೆಟ್ಟದ್ದು’ ಎಂದು ಹೇಳಿದ್ದು. ಗುಲಾಮರಿಗೆ ಸ್ವಾತಂತ್ರೃ ಇರುತ್ತದೆ. ಅಸ್ಪಶ್ಯರಿಗೆ ಅದೂ ಇರಲ್ಲ ಎಂದು ಹೇಳಿದರು.


    ಅಸ್ಪಶ್ಯತೆ ಮಾನಸಿಕ ಸ್ಥಿತಿ ಹೋಗಲಾಡಿಸಲು ಸಾಧ್ಯವಿದೆ. ಆದರೆ, ಹೋಗಲಾಡಿಸಬೇಕಾದವರಿಗೆ ಇದುವೇ ಗೊತ್ತಿಲ್ಲ. ಒಂದೇ ಊರಿನಲ್ಲಿರುವ ದಲಿತರು ತಮ್ಮ ಓಣಿಗೆ ಇನ್ನೊಬ್ಬ ಅಸ್ಪಶ್ಯ ದಲಿತರನ್ನು ಬಿಟ್ಟುಕೊಳ್ಳುವುದಿಲ್ಲ. ಅವರು ಹೋಗಲೂ ಪ್ರಯತ್ನ ಮಾಡಲ್ಲ. ಇನ್ನು ಬ್ರಾಹ್ಮಣ್ಯರು ವಾಸ ಮಾಡುವ ಅಗ್ರಹಾರ ಪ್ರವೇಶ ಸಾಧ್ಯವೇ? ಅವರು ಮನೆಗೆ ಬಿಟ್ಟುಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದರು.


    ಮೀಸಲಾತಿ ಸೌಲಭ್ಯಎಸ್ಸಿ-ಎಸ್ಟಿ ಸಮುದಾಯಕ್ಕೆ ಮಾತ್ರ ಎಂದು ಬಹಳಷ್ಟು ಜನರು ತಿಳಿದುಕೊಂಡಿದ್ದಾರೆ. ನಮಗೂ ಮೀಸಲಾತಿ ಇದೆ ಎಂಬುದು ಹಿಂದುಳಿದ ವರ್ಗಗಳ ಸಮುದಾಯದವರಿಗೇ ಗೊತ್ತಿಲ್ಲ ಎಂದರು.


    ಎಸ್ಸಿ-ಎಸ್ಟಿ ಪಟ್ಟಿಯಲ್ಲಿರುವ ಜಾತಿಗಳ ನಡುವೆ ಅಸಮಾಧಾನ, ವಿರೋಧ ಇದೆ. ಆದರೆ, ಮೇಲ್ವರ್ಗದವರಿಗೆ ಕೊಟ್ಟಿರುವ ಶೇ.10 ಮೀಸಲಾತಿ ಕುರಿತು ಆಕ್ಷೇಪಿಸಲ್ಲ. ಎಷ್ಟೋ ಪರಿಶಿಷ್ಟರಿಗೆ, ಒಬಿಸಿಗಳಿಗೆ ಅದು ಗೊತ್ತಿಲ್ಲ. ಮೀಸಲಾತಿ ಎಂದರೆ ತಿಳಿದುಕೊಳ್ಳಲು ಬಹಳಷ್ಟು ಜನರು ಪ್ರಯತ್ನ ಮಾಡಲ್ಲ ಎಂದು ಕಿಡಿಕಾರಿದರು.


    ಮೇಲ್ವರ್ಗದ 5 ಜಾತಿಗಳಿಗೆ ಮೂರು ಪಟ್ಟು ಮೀಸಲಾತಿ ಕೊಡಲಾಗಿದೆ. ಹೀಗಾದರೆ ನಿಜವಾದ ಶತ್ರುಗಳು ಯಾರು? ಇವರಿಗೆ ಹೆಚ್ಚಿನ ಹುದ್ದೆಗಳು ದೊರೆಯುತ್ತಿವೆ. ಉದ್ಯೋಗವಿಲ್ಲದೆ ಪರಿಶಿಷ್ಟರು, ಒಬಿಸಿಗಳು ಗುದ್ದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.


    ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರೆತು, ಪ್ರತ್ಯೇಕ ಅಸ್ತಿತ್ವ ದೊರೆಯಬೇಕು. ಈ ಕುರಿತು ಮುಖ್ಯಮಂತ್ರಿಯೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.


    ಅಸ್ಪಶ್ಯತೆ ಕುರಿತು ಅಧ್ಯಯನ ಮಾಡಿರುವ ‘ಕಡಲೊಳಗಿನ ಕಿಡಿಗಳು’ ಉತ್ತಮ ಸಂಶೋಧನಾ ಕೃತಿ. ಇದು ಪ್ರಬಂಧ ರೀತಿಯಲ್ಲಿ ಇಲ್ಲ. ಕಥನ ರೂಪದಲ್ಲಿ ನಿರೂಪಣೆ ಮಾಡಲಾಗಿದೆ ಎಂದರು.


    ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಮಾಧವ ಫೆರಾಜೆ ಮಾತನಾಡಿ, ಜಾತಿಗಳ ವಿರುದ್ಧ ಮಾತನಾಡುವವರು ಜಾತಿವಾದಿಗಳು ಆಗಿರುತ್ತಾರೆ. ಮಹಿಳಾ ಪರ ಮಾತನಾಡುವವರು ಮಹಿಳಾ ವಿರೋಧಿ ನಡೆ ಹೊಂದಿರುತ್ತಾರೆ. ಸಮಸಮಾಜ, ಸಮಾನತೆ ಕುರಿತು ಪ್ರತಿಪಾದನೆ ಮಾಡುವವರು ಅದಕ್ಕೆ ವಿರುದ್ಧವಾಗಿರುತ್ತಾರೆ. ಇದು ಬರವಣಿಗೆಯಲ್ಲಿ ತಿಳಿಯಲ್ಲ. ವರ್ತನೆಯಲ್ಲಿ ಗೋಚರವಾಗುತ್ತದೆ ಎಂದು ಹೇಳಿದರು.


    ಈಗಿನ ವಿದ್ವಾಂಸರಿಗೂ ಮತ್ತು ರಾಜಕಾರಣಿಗಳಿಗೂ ಅಂತಹ ವ್ಯತ್ಯಾಸವಿಲ್ಲ. ಇವರು ಅವರಂತೆ, ಅವರು ಇವರಂತೆ ಮಾತನಾಡುತ್ತಿದ್ದಾರೆ. ಸಿದ್ಧಾಂತವೇ ಬೇರೆ, ಅನುಸರಣೆಯೇ ಬೇರೆ ಎನ್ನುವಂತಾಗಿದೆ ಎಂದರು.


    ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ, ಹೊಳೆನರಸೀಪುರದ ಪ್ರಾಧ್ಯಾಪಕ ಡಾ.ಚಿಕ್ಕಮಗಳೂರು ಗಣೇಶ್, ರೂಪಾ ಪ್ರಕಾಶನದ ಯು.ಎಸ್.ಮಹೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts