More

    ಅನ್ನದಾತನ ಆರೋಗ್ಯ ತಪಾಸಣೆ

    ಕೋಲಾರ: ಆಯಾ ಜಿಲ್ಲೆಗಳ ವೈದ್ಯಕೀಯ ಕಾಲೇಜು ಅಥವಾ ದೊಡ್ಡ ಆಸ್ಪತ್ರೆಗಳಿಗೆ ಹಳ್ಳಿಗಳ ಸಂಪರ್ಕ ಕಲ್ಪಿಸಿ ರೈತರ ಆರೋಗ್ಯ ತಪಾಸಣೆ ಮಾಡಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.

    ತಾಲೂಕಿನ ಸೀಸಂದ್ರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಆಲಿಕಲ್ಲು ಮಳೆಯಿಂದ ಹಾನಿಗೀಡಾದ ಟೊಮ್ಯಾಟೊ ಬೆಳೆ ವೀಕ್ಷಿಸಿ ಮಾತನಾಡಿ, ಅಧಿಕ ಕೀಟನಾಶಕ ಬಳಕೆಯಿಂದ ಮನುಷ್ಯದ ದೇಹದಲ್ಲೂ ಹಾನಿಕಾರಕ ಅಂಶಗಳಿರುವ ಬಗ್ಗೆ ಮಣಿಪಾಲ್ ಸಂಸ್ಥೆ ಅಧ್ಯಯನ ನಡೆಸಿತ್ತು. ಈ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಆಯೋಗದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕ್ರಿಮಿನಾಶಕ ಬಳಕೆಯಲ್ಲಿ ಹೆಚ್ಚು ಜಾಗ್ರತೆ ವಹಿಸುವ ಬಗ್ಗೆ ಅರಿವು ಮೂಡಿಸಬೇಕು. ಆರೋಗ್ಯ ತಪಾಸಣೆಗೆ ವೈದ್ಯಕೀಯ ಕಾಲೇಜು ಅಥವಾ ದೊಡ್ಡ ಆಸ್ಪತ್ರೆಗೆ ವಹಿಸುವ ಬಗ್ಗೆ ಶಿಫಾರಸು ಮಾಡುವುದಾಗಿ ತಿಳಿಸಿದರು.
    ರಾಜ್ಯದಲ್ಲಿ ಕೆಎಂಎಫ್ ಮಾದರಿಯಲ್ಲಿ ಹಣ್ಣು, ತರಕಾರಿಗಳಿಗೂ ಫೆಡರೇಷನ್ ಮಾಡಬೇಕೆಂಬ ಚರ್ಚೆ ಪ್ರಗತಿಯಲ್ಲಿದೆ ಎಂದರು.

    ಬೆಳೆ ಪುನಶ್ಚೇತನ: ಮಳೆಯಿಂದ ಟೊಮ್ಯಾಟೊ, ಸೌತೆ, ಮಾವು ಇನ್ನಿತರ ತರಕಾರಿ ಬೆಳೆಗಳು ಹಾನಿಯಾಗಿವೆ. ಅಳಿದುಳಿದ ಗಿಡಗಳ ಪುನಶ್ಚೇತನ ಸಾಧ್ಯವೇ? ಪುನಶ್ಚೇತನಕ್ಕೆ ಏನೇನು ಮಾಡಬೇಕೆಂಬುದನ್ನು ಪ್ರಾತ್ಯಕ್ಷಿಕೆ ಮಾಡಿ ತೋರಿಸಲು ಸಾಧ್ಯವೇ ಎಂಬುದನ್ನು ಬೆಂಗಳೂರು ಕೃಷಿ ವಿವಿ ವಿಜ್ಞಾನಿಗಳ ಜತೆ ಮಾತನಾಡಿ ತಂಡ ಕಳುಹಿಸಲಾಗುವುದು ಎಂದರು.

    ಕೇಂದ್ರದ ನೈಸರ್ಗಿಕ ವಿಕೋಪ ನಿಧಿಯಡಿ ಬಹುವಾರ್ಷಿಕ ಬೆಳೆಯಾದ ಮಾವು ಬೆಳೆ ಹಾನಿಗೆ ಹೆಕ್ಟೇರ್‌ಗೆ 18,000 ರೂ. ಟೊಮ್ಯಾಟೊ ಇನ್ನಿತರ ವಾರ್ಷಿಕ ಬೆಳೆಗೆ 13,500 ರೂ. ನೀಡಿದರೂ ಪರಿಹಾರ ಧನ ಬೀಜಕ್ಕೂ ಸಾಕಾಗದು. ಬೆಳೆ ನಷ್ಟ ಪರಿಹಾರಕ್ಕೆ ಸಂಬಂಧಿಸಿದ ಇಲಾಖೆಗೆ ಶಿಫಾರಸು ಮಾಡಿ ತಕ್ಷಣದ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು. ಹೆಚ್ಚು ಖರ್ಚು ಬರುವ ತರಕಾರಿ ಬೆಳೆಯುವವರು ವಿಮೆ ಮಾಡಿಸಿಕೊಳ್ಳುವುದು ಸೂಕ್ತ ಎಂದರು.

    ಕರೊನಾ ಕಾರಣಕ್ಕೆ ಕೃಷಿ ಕ್ಷೇತ್ರ ಹಾಗೆಯೇ ಬಿಟ್ಟರೆ ಎಲ್ಲದಕ್ಕೂ ಕೊರತೆ ಉಂಟಾಗುತ್ತದೆ ಎಂದು ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಸಾರಿಗೆ, ಮಾರಾಟ, ಸಂಗ್ರಹ, ಅಂತಾರಾಜ್ಯ ಸಾಗಾಣಿಕೆಗೆ ಅಡೆತಡೆ ಇಲ್ಲದೆ ಅವಕಾಶ ನೀಡಲಾಗಿದೆ. ಆದರೆ ಹೂ ಬೆಳೆಗಾರರದ್ದು ದೊಡ್ಡ ಸಮಸ್ಯೆಯಾಗಿದ್ದು, ನಷ್ಟ ಪರಿಹಾರ ನೀಡುವ ಬಗ್ಗೆ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದರು.

    ಜಂಟಿ ಕೃಷಿ ನಿರ್ದೇಶಕ ಡಾ.ಎಚ್.ಕೆ.ಶಿವಕುಮಾರ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ತುಳಸಿರಾಂ ಇತರರಿದ್ದರು.ಕೋಲಾರದ ಸೀಸಂದ್ರ ನಾರಾಯಣಸ್ವಾಮಿ, ಬಲರಾಮಪ್ಪ, ತಂಬಿಹಳ್ಳಿಯ ಲಕ್ಷ್ಮೀದೇವಮ್ಮ, ಚೌಡಮ್ಮ, ಜಗದೀಶ್, ಮಣಿಘಟ್ಟದ ನಾರಾಯಣರೆಡ್ಡಿ, ಅಪ್ರೋಜಪ್ಪ ಅವರ ಟೊಮ್ಯಾಟೊ ತೋಟಗಳಿಗೆ ಹನುಮನಗೌಡ ಬೆಳಗುರ್ಕಿ ಭೇಟಿ ನೀಡಿದ ವೇಳೆ ಫಸಲು ನಷ್ಟವಾಗಿರುವ ಬಗ್ಗೆ ರೈತರು ಅಳಲು ತೋಡಿಕೊಂಡರು. ಟೊಮ್ಯಾಟೊ, ಮಾವು, ಪಪ್ಪಾಯ ಇನ್ನಿತರ ತರಕಾರಿ ಅಂದಾಜು 490 ಹೆಕ್ಟೇರ್ ಅಧಿಕ ಬೆಳೆ ನಷ್ಟವಾಗಿದೆ. ಈ ಸಂಬಂಧ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಎಂ.ಗಾಯತ್ರಿ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts