More

    ಕೋಲಾರ ಜಿಲ್ಲೆ ಸೀಮೆಎಣ್ಣೆ ಮುಕ್ತ

    ಕೋಲಾರ: ಜಿಲ್ಲೆಯ 154 ಗ್ರಾಪಂ ಬಾಪೂಜಿ ಸೇವಾ ಕೇಂದ್ರದ ಸಹಯೋಗದೊಂದಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹೇಳಿದರು.

    ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಜಿಲ್ಲೆಯಲ್ಲಿ 3,54,403 ಬಿಪಿಎಲ್ ಕಾರ್ಡ್‌ಗಳ 12,02,849 ಫಲಾನುಭವಿಗಳಿಗೂ ಯೋಜನೆ ಸೌಲಭ್ಯ ಸಿಗಬೇಕು. ಡಿಸೆಂಬರ್ ಅಂತ್ಯದವರೆಗೆ 2.98,296 ಜನರನ್ನು ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ಪ್ರಕ್ರಿಯೆ ತ್ವರಿತಗೊಳಿಸಲು ಬಾಪೂಜಿ ಸೇವಾ ಕೇಂದ್ರಗಳ ಜತೆಗೆ 134 ಸೇವಾಸಿಂಧು ಕೇಂದ್ರಗಳಿಗೆ ಕಾರ್ಡ್ ವಿತರಣೆಗೆ ಅನುಮತಿ ನೀಡಲಾಗಿದ್ದು, 35 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

    12.81 ಕೋಟಿ ರೂ. ಅನುದಾನ: ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಅಡಿಯಲ್ಲಿ 8,691 ಕ್ಲೇಮ್‌ಗಳನ್ನು ಸಲ್ಲಿಸಲಾಗಿ ಸುವರ್ಣ ಆರೋಗ್ಯ ಟ್ರಸ್ಟ್‌ನಿಂದ 12.81 ಕೋಟಿ ರೂ.ಗಳು ಸರ್ಕಾರಿ ಹಾಗೂ ನೋಂದಾಯಿತ 4 ಆಸ್ಪತ್ರೆಗಳಿಗೆ ಬಂದಿದೆ. ಎಸ್ಸೆನ್ನಾರ್ ಆಸ್ಪತ್ರೆಯಲ್ಲಿನ 2967 ಪ್ರಕರಣಗಳಲ್ಲಿ 1.76 ಕೋಟಿ ರೂ. ದೊರಕಿದೆ. ಈ ಹಣದಲ್ಲಿ ಆಸ್ಪತ್ರೆಗೆ ಅವಶ್ಯವಿರುವ ಸೌಲಭ್ಯ ಕಲ್ಪಿಸಿಕೊಳ್ಳಲು ಬಳಸಲಾಗುತ್ತಿದೆ ಎಂದರು.

    ಸಮಿತಿ ರಚನೆ: ಯೋಜನೆ ಸಂಬಂಧ ಕುಂದುಕೊರತೆ ನಿವಾರಣಾ ಸಮಿತಿ ಸಭೆಯ ತೀರ್ಮಾನದಂತೆ ಡಿಎಚ್‌ಒ ಕಚೇರಿಯಲ್ಲಿ ಮಾಹಿತಿ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರು ಜಿಲ್ಲಾ ಸಂಯೋಜಕರನ್ನು ಮೊಬೈಲ್: 9480902005 ಸಂಪರ್ಕಿಸಬಹುದು ಅಥವಾ ಟೋಲ್‌ಫ್ರೀ ಸಂಖ್ಯೆ 1800 425 4325 ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದರು.

    ಸೀಮೆಎಣ್ಣೆ ಮುಕ್ತ ಜಿಲ್ಲೆ: ಜಿಲ್ಲೆಯಲ್ಲಿ ಅಡುಗೆ ಅನಿಲ ರಹಿತ 42,911 ಪಡಿತರದಾರರಿಗೆ ಪ್ರತಿ ತಿಂಗಳು 3 ಲೀಟರ್ ಸೀಮೆಎಣ್ಣೆ ನೀಡಲಾಗುತ್ತಿತ್ತು. ಉಜ್ವಲ, ಅನಿಲಭಾಗ್ಯ, ಸಿಎಸ್‌ಆರ್ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಮೂಲಕ ರಾಜ್ಯದಲ್ಲೇ ಪ್ರಥಮ ಬಾರಿಗೆ ಕೋಲಾರವನ್ನು ಸೀಮೆಎಣ್ಣೆ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದೆ. ಇಚ್ಛಿಸಿದಲ್ಲಿ 1 ಲೀಟರ್ ಸೀಮೆಎಣ್ಣೆ ಪಡೆಯಬಹುದು. ಪಡಿತರ ವಿತರಣೆಯಲ್ಲೂ ಜಿಲ್ಲೆ 2ನೇ ಸ್ಥಾನದಲ್ಲಿದೆ ಎಂದರು.

    ಜಿಲ್ಲೆಯಲ್ಲಿ 3924 ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದ್ದು, ಈ ಕುಟುಂಬಗಳ 5874 ಸದಸ್ಯರಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿದ್ದ ತಲಾ 7 ಕೆಜಿ ಅಕ್ಕಿ ಸರ್ಕಾರಕ್ಕೆ ಉಳಿತಾಯವಾಗಿದೆ ಎಂದರು.

    ಫಲಾನುಭವಿಗಳಿಗೆ ಮಂಜೂರು ಮಾಡಿರುವ ಜಮೀನಿನ 36,470 ಸರ್ಕಾರಿ ಸರ್ವೇ ನಂ.ಗಳಲ್ಲಿನ ಪಿ ನಂಬರ್‌ಗಳನ್ನು ತೆಗೆಯುವ ಸಂಬಂಧ ಒಗ್ಗೂಡಿಸುವಿಕೆ, 3/9 ಕಲಂ ವ್ಯತ್ಯಾಸ ಸರಿಪಡಿಸುವ ಪ್ರಕ್ರಿಯೆ ಶುರು ಮಾಡಲಾಗಿದೆ. ಪ್ರತಿ ಹೋಬಳಿಯಲ್ಲಿ ಒಂದು ಗ್ರಾಮ ಆಯ್ಕೆ ಮಾಡಿಕೊಂಡು 302 ಸರ್ವೇ ನಂಬರ್‌ಗಳಲ್ಲಿನ 349 ವ್ಯತ್ಯಾಸ ಸರಿಪಡಿಸುವ ಮೂಲಕ 27 ಗ್ರಾಮಗಳು ಪೋಡಿಮುಕ್ತಗೊಳ್ಳಲಿವೆ ಎಂದರು.

    ಡಿಎಚ್‌ಒ ಡಾ.ಎಸ್.ಎನ್. ವಿಜಯಕುಮಾರ್, ಕುಷ್ಠರೋಗ ನಿವಾರಣಾಧಿಕಾರಿ ಡಾ. ನಾರಾಯಣಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ನಾಗರಾಜ್ ಕೆಳಗಿನಮನೆ ಗೋಷ್ಠಿಯಲ್ಲಿ ಹಾಜರಿದ್ದರು.

    ಪಿ ನಂಬರ್ ಸಮಸ್ಯೆಗೆ ಮುಕ್ತಿ: ಜಿಲ್ಲೆಯಲ್ಲಿ ನ ಪೈಕಿ ಪಹಣಿ (ಪಿ ನಂಬರ್)48,582ರಲ್ಲಿ ಖಾಸಗಿ ಹಿಡುವಳಿಯ 12,112 ಪಹಣಿಗಳಲ್ಲಿನ ಪಿ ನಂಬರ್‌ಗಳು ಇನ್ನು ಇತಿಹಾಸ. ಎಲ್ಲವನ್ನೂ ತೆಗೆದುಹಾಕಿದ್ದು,ಹಳೇ ಪಹಣಿ ಜತೆ ಹೊಸ ಪಹಣಿಯನ್ನು ಮುಂದಿನ ವಾರದಿಂದ ಹೋಬಳಿ ಮಟ್ಟದಲ್ಲಿ ಜನಪ್ರತಿನಿಧಿಗಳ ಸಮ್ಮುಖದಲ್ಲಿ ವಿತರಿಸಲಾಗುವುದು, ಸಾರ್ವಜನಿಕರು ಕಂದಾಯ ಕಚೇರಿಗಳಲ್ಲಿ ಹೊಸ ಪಹಣಿ ಪಡೆದುಕೊಳ್ಳಬಹುದು ಎಂದು ಡಿಸಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts