More

    ಅವ್ಯವಸ್ಥೆಯ ಆಗರವಾದ ದೇವರಾಜ ಅರಸು ಹಿಂದುಳಿದ ವರ್ಗಗಳ ಹಾಸ್ಟೆಲ್

    ಕೋಲಾರ: ನಗರದ ಇಟಿಸಿಎಂ ಆಸ್ಪತ್ರೆಯ ಮುಂಭಾಗವಿರುವ ಶ್ರೀ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯವು ಅವ್ಯವಸ್ಥೆಯ ಆಗರವಾಗಿರುವುದಕ್ಕೆ ಕೋಲಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಕೆಂಡಾಮಂಡಲರಾದ ಪ್ರಸಂಗ ಮಂಗಳವಾರ ನಡೆಯಿತು.

    ವಿದ್ಯಾರ್ಥಿನಿಲಯದ ಅವ್ಯವಸ್ಥೆ ಬಗ್ಗೆ ದೂರು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಅನಿರೀಕ್ಷಿತ ಭೇಟಿ ನೀಡಿದ ಅವರು ವಾರ್ಡನ್, ಭದ್ರತಾ ಸಿಬ್ಬಂದಿ ಇಲ್ಲದಿರುವುದನ್ನು ಕಂಡು ಸಿಡಿಮಿಡಿಗೊಂಡರು.

    ನಿಲಯದ ಅಡುಗೆಮನೆ, ಡೈನಿಂಗ್ ಕೋಣೆ, ಶೌಚಗೃಹ, ನೀರಿನ ಸಂಪು, ಕೊಠಡಿ ವೀಕ್ಷಣೆ ಮಾಡಿದ ಅವರು ವಾರ್ಡನ್ ಮಂಜುಳಮ್ಮ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿದ್ಯಾರ್ಥಿನಿಯರು ಶಾಲೆಗಳಿಗೆ ಹೋದ ಮೇಲೆ ಕೆಲಸಕ್ಕೆ ಬಂದರೆ ಏನು ಪ್ರಯೋಜನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಸಿಸಿ ಕ್ಯಾಮರಾ ಅಳವಡಿಸಿಲ್ಲ, ಭದ್ರತಾ ಸಿಬ್ಬಂದಿ ಇಲ್ಲ ಎಂದು ಅಕ್ಷೇಪ ವ್ಯಕ್ತಪಡಿಸಿದ ಅವರು, ನೀರಿನ ಸಂಪನ್ನು ಸ್ವಚ್ಛಗೊಳಿಸದಿರುವುದರಿಂದ ಸೊಳ್ಳೆ, ಜಿರಳೆಗಳು ನೀರಿನಲ್ಲಿ ಬಿದ್ದು ಕಲುಷಿತವಾಗಿವೆ. ಶೌಚಗೃಹ ಗಬ್ಬು ನಾರುತ್ತಿದೆ. ಮೆನು ಪ್ರಕಾರ ತಿಂಡಿ-ಊಟದ ವ್ಯವಸ್ಥೆ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.

    ಸರ್ಕಾರ ಈ ವಿದ್ಯಾರ್ಥಿನಿಲಯದಲ್ಲಿ 130 ಮಕ್ಕಳು ಇರುವುದಕ್ಕೆ ಅವಕಾಶ ಮಾಡಿದೆ. ಬಿಸಿಎಂ ಇಲಾಖೆಗೆ ಅನುದಾನ ನೀಡಲಾಗುತ್ತಿದೆ. ಆದರೆ 35 ಮಕ್ಕಳು ಮಾತ್ರ ಹಾಜರಿದ್ದಾರೆ. ಉಳಿದವರು ಏಕೆ ಗೈರಾಗಿದ್ದಾರೆ. ಇವರಿಗೆ ನಿಗದಿಯಾದ ಅನುದಾನ ಏನಾಯಿತು ಎಂದರು.

    ಬುಧವಾರದಿಂದ ವಿದ್ಯಾರ್ಥಿ ನಿಲಯದಲ್ಲಿ ಯಾವುದೇ ಸಮಸ್ಯೆ ಇರಬಾರದು, ಮೆನು ಪ್ರಕಾರವೇ ವಿದ್ಯಾರ್ಥಿಗಳಿಗೆ ತಿಂಡಿ ಊಟದ ವ್ಯವಸ್ಥೆ ಆಗಬೇಕು, ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳಬೇಕೆಂದು ತಾಕೀತು ಮಾಡಿದರಲ್ಲದೆ, ಕಚೇರಿಗೆ ಬಂದು ವರದಿ ನೀಡುವಂತೆ ಸೂಚಿಸಿದರು.

    ಊಟ ಇಲ್ಲಿ, ಶೌಚಕ್ಕೆ ಅಲ್ಲಿ: ಶೌಚಗೃಹ ಸ್ವಚ್ಛಗೊಳಿಸುತ್ತಿಲ್ಲ, ಆದ್ದರಿಂದ ನಾವು ಇಲ್ಲಿ ತಿಂಡಿ-ಊಟ ಮುಗಿಸಿಕೊಂಡು ಶಾಲಾ-ಕಾಲೇಜಿನ ಶೌಚಗೃಹ ಬಳಸಿಕೊಳ್ಳುತ್ತಿದ್ದೇವೆ, ಹಾಸ್ಟೆಲ್ ಬಗ್ಗೆ ಕಂಪ್ಲೆಂಟ್ ಮಾಡಿದ್ರೆ ನಮ್ಮನ್ನು ಟಾಗ್ರೆಟ್ ಮಾಡುತ್ತಾರೆಂದು ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿನಿಯರು ದೂರಿದಾಗ, ಭಯ ಪಡಬೇಕಾಗಿಲ್ಲ, ಮತ್ತೊಮ್ಮೆ ಅನಿರೀಕ್ಷಿತ ಭೇಟಿ ನೀಡುವೆ, ಸುಧಾರಣೆ ಆಗಿದಿದ್ದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳುವೆ ಎಂದು ಜಿಪಂ ಅಧ್ಯಕ್ಷರು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts