More

    ಕರ್ತವ್ಯ ನಿರ್ವಹಿಸಲು ಅಧಿಕಾರಿಗಳ ನಿರ್ಲಕ್ಷ್ಯ

    ಕೋಲಾರ: ತಾಲೂಕಿನ ಹೋಳೂರು ಗ್ರಾಮದಲ್ಲಿ ಕರೊನಾ ಪ್ರಕರಣ ದೃಢಪಟ್ಟರೂ ಕರ್ತವ್ಯ ನಿರ್ವಹಿಸದ ಅಧಿಕಾರಿ ವಿರುದ್ಧ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಜಿಪಂ ಸಿಇಒ ಎಚ್.ವಿ. ದರ್ಶನ್ ಶುಕ್ರವಾರ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

    ಕೆಲ ದಿನಗಳ ಹಿಂದೆ ಗ್ರಾಮದ ವ್ಯಕ್ತಿಗೆ ಕರೊನಾ ದೃಢಪಟ್ಟು ಸೋಂಕಿತನ ನಿವಾಸದ ಸುತ್ತಮುತ್ತ ಕಂಟೇನ್ಮೆಂಟ್ ಜೋನ್ ಮಾಡಲಾಗಿದೆ. ಸೋಂಕಿತ ಗುಣವಾಗಿ ಮನೆಗೆ ಮರಳಿದ್ದಾನೆ. ಆದರೆ ಸೋಂಕಿತನ ಕುಟುಂಬದ ಮತ್ತೊಬ್ಬರಿಗೆ ಶುಕ್ರವಾರ ಕರೊನಾ ದೃಢಪಟ್ಟಿರುವುದರಿಂದ ಗ್ರಾಮಸ್ಥರು ಇನ್ನಷ್ಟು ಆತಂಕಕ್ಕೀಡಾಗಿದ್ದಾರೆ.

    ಎರಡನೇ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಿಡಿಒ ಸೋಮಶೇಖರ್‌ಗೆ ಕರೆ ಮಾಡಿ ವಿಷಯ ತಿಳಿಸಲಾಗಿ ತಾಲೂಕಿನ ಎಲ್ಲ ಗ್ರಾಪಂ ಪಿಡಿಒಗಳು 15 ದಿನಗಳ ಕಾಲ ಪರಿವರ್ತಿತ ರಜೆ ಮಂಜೂರಾತಿಗೆ ಅರ್ಜಿ ಸಲ್ಲಿಸಿ ರಜೆಯಲ್ಲಿ ಇರುವುದಾಗಿ ಉತ್ತರಿಸಿದ್ದಾರೆಂದು ಗ್ರಾಮಸ್ಥರು ಸಿಇಒ ಗಮನಕ್ಕೆ ತಂದರು.

    ದೂರಿಗೆ ಸ್ಪಂದಿಸಿದ ಸಿಇಒ ಗ್ರಾಮಸ್ಥರ ಅಹವಾಲು ಆಲಿಸಿದರು. ಮಾಹಿತಿ ಅರಿತ ಪಿಡಿಒ ಸೋಮಶೇಖರ್ ಸ್ಥಳಕ್ಕೆ ದೌಡಾಯಿಸಿದರು. ಕಂಟೇನ್ಮೆಂಟ್ ಜೋನ್‌ನಲ್ಲಿ ಬಿಎಂಸಿ ಕೇಂದ್ರವಿದೆ. ನಿತ್ಯ ಗ್ರಾಮಸ್ಥರು ಹಾಲು ಹಾಕಲು ಡೇರಿಗೆ ಬರುತ್ತಾರೆ, ಗ್ರಾಮದಲ್ಲಿ ಕರೊನಾ ದೃಢಪಟ್ಟಿರುವುದರಿಂದ ಹಾಲು ಸಂಗ್ರಹಣೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸುವಂತೆ ಆಗ್ರಹಿಸಿದರು.

    ಕೋಚಿಮುಲ್ ಅಧಿಕಾರಿಗಳ ಜತೆ ಮಾತನಾಡಿದ ಸಿಇಒ, ಮುನ್ನೆಚ್ಚರಿಕಾ ಕ್ರಮ ವಹಿಸಿ ಗ್ರಾಮದಲ್ಲಿ ಸೋಂಕು ನಿವಾರಕ ಸಿಂಪಡಿಸುವಂತೆ ಪಿಡಿಒಗೆ ಸೂಚಿಸಿದಾಗ ಗ್ರಾಮಸ್ಥರು ಕರೊನಾ ಆತಂಕ ವ್ಯಕ್ತಪಡಿಸಿ 20 ದಿನ ಸ್ಥಳಾಂತರಕ್ಕೆ ಪಟ್ಟು ಹಿಡಿದರು.

    ಸೋಂಕಿತ ವ್ಯಕ್ತಿಯ ಜತೆ ಗಂಟೆಗಟ್ಟಲೆ ನಿಕಟ ಸಂಪರ್ಕ ಹೊಂದಿದ್ದರೆ, ಮನೆ ಸದಸ್ಯರನ್ನು ಪ್ರಥಮ ಸಂಪರ್ಕಿತ ವ್ಯಕ್ತಿಗಳೆಂದು ಪರಿಗಣಿಸಲಾಗುತ್ತದೆ, ಸೋಂಕಿತ ವ್ಯಕ್ತಿಯ ಬೀದಿಯಲ್ಲಿ ನಡೆದಾಡಿ ಹೋಗಿದ್ದರೆ ಬೀದಿಯ ನಿವಾಸಿಗಳನ್ನೆಲ್ಲಾ ಸಂಪರ್ಕಿತರೆನ್ನಲು ಬರುವುದಿಲ್ಲ ಎಂದು ಧೈರ್ಯ ತುಂಬಿದರು.

    ತಾಪಂ ಸದಸ್ಯ ಗೋಪಾಲಗೌಡ, ಇಒ ಎನ್.ವಿ.ಬಾಬು, ಗ್ರಾಪಂ ಮಾಜಿ ಸದಸ್ಯ ನಾರಾಯಣಸ್ವಾಮಿ, ಪಿಎಚ್‌ಸಿ ಕೇಂದ್ರದ ವೈದ್ಯಾಧಿಕಾರಿ ಡಾ. ವೆಂಕಟೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

    ಸಸಿ ಬೆಳೆಸಿ: ಗ್ರಾಮದ ಕೆರೆ, ಕುಂಟೆ ವೀಕ್ಷಿಸಿದ ಸಿಇಒ ಉತ್ತಮ ಮಳೆಯಾಗಿರುವುದರಿಂದ ಕೆರೆ ಸುತ್ತಮುತ್ತ ಸಸಿ ಬೆಳೆಸುವಂತೆ ಪಿಡಿಒಗೆ ಸೂಚಿಸಿದರು. ಐತರಾಸನಹಳ್ಳಿ, ತೊರದೇವಂಡಹಳ್ಳಿ ಗ್ರಾಪಂಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು.

    ಪಿಡಿಒಗಳು ಪರಿವರ್ತಿತ ರಜೆಗೆ ಕೋರಿಕೆ ಸಲ್ಲಿಸಿದ್ದರೂ ಈ ಸಂದರ್ಭದಲ್ಲಿ ರಜೆಗೆ ಅವಕಾಶ ಇಲ್ಲ. ಕರ್ತವ್ಯಕ್ಕೆ ಹಾಜರಾಗುವಂತೆ ಜಿಪಂ ಸಿಇಒ ನಿರ್ದೇಶನ ನೀಡಿದ್ದಾರೆ. ಅದರಂತೆ ಸಿಇಒ ಭೇಟಿ ನೀಡಿದ ಮೂರು ಪಂಚಾಯಿತಿಗಳಲ್ಲೂ ಪಿಡಿಒಗಳು ಕರ್ತವ್ಯದಲ್ಲಿದ್ದರು ಎಂದು ತಾಪಂ ಇಒ ಎನ್.ವಿ. ಬಾಬು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts