More

    ರಸ್ತೆ ಅಭಿವೃದ್ಧಿಗೆ 12.50 ಕೋಟಿ ರೂಪಾಯಿ ವೆಚ್ಚದ ಯೋಜನೆ ಸಿದ್ಧ

    ಕೋಲಾರ: ನಗರದಲ್ಲಿ ಹದಗೆಟ್ಟಿರುವ ರಸ್ತೆ ಅಭಿವೃದ್ಧಿಗೆ 12.50 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಿದ್ದು, ಮುಖ್ಯಮಂತ್ರಿಗಳಿಂದ ಮಂಜೂರು ಮಾಡಿಸಿಕೊಂಡು ಬರಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಹೇಳಿದರು.

    ನಗರದ ವಿಭೂತಿಪುರ ಬಡಾವಣೆಯಲ್ಲಿ ವಿಧಾನಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿರುವ ಶುದ್ಧ ನೀರಿನ ಘಟಕವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ನಗರದಲ್ಲಿ ಯುಜಿಡಿ ಕಾಮಗಾರಿಯಿಂದಾಗಿ ಬಹುತೇಕ ಎಲ್ಲ ರಸ್ತೆಗಳು ಹಾಳಾಗಿದೆ. ಇವುಗಳನ್ನು ಸರಿಪಡಿಸಿ ಗುಂಡಿಗಳಿಲ್ಲದ ರಸ್ತೆಗಳನ್ನಾಗಿಸಲು ತಾವು ಹಾಗೂ ಶಾಸಕ ಶ್ರೀನಿವಾಸಗೌಡ ಸೇರಿಕೊಂಡು ಯೋಜನೆ ರೂಪಿಸಿದ್ದೇವೆ. ಸೋಮವಾರ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅನುದಾನ ಮಂಜೂರು ಮಾಡಿಸುವ ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದರು.

    ನಗರದಲ್ಲಿ ದ್ವಿಪಥ ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ಕೆಲವರಿಗೆ ತೊಂದರೆ ಆಗಿದ್ದು, ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಆದರೆ 21 ಮೀಟರ್ ರಸ್ತೆಗೆ 2004ರಲ್ಲೇ ಅಧಿಸೂಚನೆ ಪ್ರಕಟವಾಗಿತ್ತು. ಅಂದು ಯಾರೂ ಕೂಡ ಸರ್ಕಾರದ ಮಟ್ಟದಲ್ಲಿ ಕೇಳಲಿಲ್ಲ. ಬೆಳೆಯುತ್ತಿರುವ ನಗರಕ್ಕೆ ತಕ್ಕಂತೆ ರಸ್ತೆ ವಿಸ್ತರಣೆ ಅನಿವಾರ್ಯ ಎಂದರು.

    ಎತ್ತಿನಹೊಳೆ ಯೋಜನೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಅವಶ್ಯ ಬಿದ್ದರೆ ಹೋರಾಟಕ್ಕೂ ಮುಂದಾಗಬೇಕಿದೆ. ಮುಂದಿನ ತಿಂಗಳು ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಸದನದಲ್ಲಿ ಪ್ರಶ್ನಿಸಲಾಗುವುದು ಎಂದರು.

    ಶಾಸಕ ಕೆ.ನಿವಾಸಗೌಡ, ಹಿಂದಿನ ದಿನಗಳಲ್ಲಿ ಜಾನುವಾರುಗಳಿಗೆ ಜನರು ಕುಂಟೆ ನೀರನ್ನೇ ಕುಡಿಸುತ್ತಿದ್ದರು. ಯಾವ ರೋಗಗಳೂ ಬರುತ್ತಿರಲಿಲ್ಲ. ಈಗ ಶುದ್ಧ ನೀರು ಕುಡಿದರೂ ಕಾಯಿಲೆಗಳು ಜಾಸ್ತಿ ಆಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರಗಳು ಆದ್ಯತೆ ನೀಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆ ಆಗುವುದಿಲ್ಲ. ಶುದ್ಧ ನೀರನ್ನು ವ್ಯರ್ಥ ಮಾಡದೆ ಅವಶ್ಯವಿರುವಷ್ಟೇ ಬಳಸಿಕೊಂಡು ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

    ನಗರದಲ್ಲಿ ರಸ್ತೆ ವಿಸ್ತರಣೆ ಕೈಗೆತ್ತಿಕೊಂಡಿದ್ದಕ್ಕೆ ಕೆಲವರು ನನ್ನ ಮೇಲೆ ಕಣ್ಣು ಕೆಂಪು ಮಾಡಿಕೊಂಡಿದ್ದಾರೆ. ಹಿಂದೆ ಕೋಲಾರದಲ್ಲಿ ಎರಡು ಕಾರು ಮಾತ್ರ ಓಡಾಡುತ್ತಿತ್ತು. ಇಂದು ವಾಹನ ಹಾಗೂ ಜನದಟ್ಟಣೆ ಹೆಚ್ಚಾಗಿದ್ದರಿಂದ ತೀರ್ಮಾನ ತೆಗೆದುಕೊಂಡು ಅಗಲೀಕರಣ ಮಾಡಲಾಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕೋರಿದರು.

    ನಗರಸಭೆ ಸದಸ್ಯ ಪ್ರವೀಣ್‌ಗೌಡ, ಪೌರಾಯುಕ್ತ ಶ್ರೀಕಾಂತ್, ಕಾಳಿದಾಸ ಬಡವಾಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಪಿ,ಆನಂದ್, ವಿಭೂತಿಪುರ ಬಡಾವಣೆಯ ಮುಖಂಡರಾದ ನಾರಾಯಣಪ್ಪ, ಜಿ.ಮುನಿಯಪ್ಪ, ಕೆ.ವೆಂಕಟೇಶ್, ಕಾಳಿದಾಸ ಬಡಾವಣೆಯ ವಕೀಲ ಗೋಪಾಲರೆಡ್ಡಿ, ರಾಜೇಶ್ವರಿ, ಭೀಮಸೇನೆ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ಜಿಲ್ಲಾಧ್ಯಕ್ಷ ಸಿ.ವೆಂಕಟಸ್ವಾಮಿ, ಮುಖಂಡರಾದ ಸಿ.ಚಂದ್ರಪ್ಪ, ಎಂ.ಬಿ.ನಾಗರಾಜ್, ಕೆ.ಎಂ.ಉಮಾಶಂಕರ್, ಎನ್.ವೆಂಕಟೇಶಪ್ಪ, ಪ್ರವೀಣ್, ವಿಜಯ್‌ಗೌಡ, ಶ್ರೀನಿವಾಸ್, ನಾರಾಯಣಸ್ವಾಮಿ, ಉಮೇಶ್, ಮಂಜುನಾಥ್ ಇತರರು ಭಾಗವಹಿಸಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts