More

    ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ

    ಕೋಲಾರ: ಹೇಗಾದರೂ ಮಾಡಿ ನಗರಸಭೆ ಅಧಿಕಾರ ಹಿಡಿಯಲು ನಿರ್ಧರಿಸಿರುವ ಕಾಂಗ್ರೆಸ್ ಮುಖಂಡರು 12 ಸದಸ್ಯರಿಗೆ ವಿಪ್ ಜಾರಿ ಮೂಲಕ ಶಿಸ್ತು ಉಲ್ಲಂಘಿಸಿದ್ರೆ ಕಟ್ಟನಿಟ್ಟಿನ ಕ್ರಮದ ಸಂದೇಶ ರವಾನಿಸಿದ್ದಾರೆ.

    ಕೋಲಾರ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನ.1ರಂದು ನಡೆಯಲಿರುವ ಚುನಾವಣೆ ಸಂಬಂಧ ಶನಿವಾರ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು.

    ಬಹುಮತಕ್ಕೆ ಅಗತ್ಯವಿರುವ ಸದಸ್ಯರನ್ನು ಒಗ್ಗೂಡಿಸಲು ಸಂಘಟಿತ ಪ್ರಯತ್ನ, ಪಕ್ಷೇತರರನ್ನು ಮನವೊಲಿಸುವುದು, ಅಗತ್ಯಬಿದ್ದರೆ ಜೆಡಿಎಸ್ ಮತ್ತು ಎಸ್‌ಡಿಪಿಐ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಚರ್ಚಿಸಲಾಯಿತು.

    ಕಳೆದ ಸಭೆಗೆ ಹಾಜರಿದ್ದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಗೈರಾಗಿದ್ದರು. ವಿಧಾನ ಪರಿಷತ್ ಸದಸ್ಯ ನಸೀರ್ ಅಹಮ್ಮದ್ ಭಾಗವಹಿಸಿ, ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಬೇಕು. ಒಂದು ವೇಳೆ ನಮ್ಮ ಸಮುದಾಯದವರು ಯಾರಾದರೂ ಅಧಿಕಾರ ಮತ್ತು ಹಣದ ಆಸೆಗಾಗಿ ಜೆಡಿಎಸ್ ಇಲ್ಲವೇ ಬೇರೆ ಪಕ್ಷದೊಂದಿಗೆ ಹೋದರೆ ಅವರನ್ನು ಕರೆತರಲು ಅಂಜುಮನ್ ಇಸ್ಲಾಮಿಯಾ ಸಂಸ್ಥೆಯ ಮುಖಂಡರು ಜವಾಬ್ದಾರಿ ಹೊರುವಂತೆ ಸೂಚಿಸಿದರು.

    ಜೆಡಿಎಸ್‌ಗೆ ಸಂದೇಶ ರವಾನೆ: ಮುಂದಿನ ಚುನಾವಣೆಗಳ ದೃಷ್ಟಿಯಿಂದ ಅಧಿಕಾರ ಹಿಡಿಯಲೇಬೇಕಾಗಿದೆ. ಈ ಹಿಂದೆ ನಾವು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಿದ್ದೇವೆ. ನಗರದ ಅಭಿವೃದ್ಧಿಗಾಗಿ ಈಗಲೂ ಅಧಿಕಾರ ಹಂಚಿಕೆ ಮಾಡಿಕೊಂಡು ಸಮ್ಮಿಶ್ರ ಆಡಳಿತ ನಡೆಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ನಾವು ಮಾತುಕತೆಗೆ ಸಿದ್ಧ ಎಂದು ಜೆಡಿಎಸ್ ಮುಖಂಡರಿಗೆ ಸಂದೇಶ ರವಾನಿಸಿದರು.

    ಸದಸ್ಯರಿಗೆ ವಿಪ್ ಜಾರಿ: ಪಕ್ಷದಲ್ಲಿ ಶಿಸ್ತು ಕಾಪಾಡಲು ಹಾಗೂ ಅಡ್ಡ ಮತದಾನ ತಪ್ಪಿಸಲು ಪಕ್ಷದ 12 ಸದಸ್ಯರಿಗೆ ವಿಪ್ ಜಾರಿ ಮಾಡಲಾಗುವುದು. ಒಂದು ವೇಳೆ ಯಾರಾದರೂ ಉಲ್ಲಂಘಿಸಿದರೆ ಚುನಾವಣೆ ಮುಗಿದ 2 ಗಂಟೆಯೊಳಗೆ ಸದಸ್ಯತ್ವ ಅನರ್ಹಗೊಳಿಸಲು ಕಾನೂನು ಅಸ್ತ್ರ ಪ್ರಯೋಗಿಸುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಎಚ್ಚರಿಸಿದರು.

    ನಮ್ಮಲ್ಲಿ ಟಿಕೆಟ್ ಸಿಗದೆ ಪಕ್ಷೇತರರಾಗಿ ಗೆದ್ದಿರುವ 3 ಸದಸ್ಯರ ಪೈಕಿ 11ನೇ ವಾರ್ಡ್‌ನ ಮಂಜುನಾಥ್ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಇನ್ನುಳಿದ ಪಕ್ಷೇತರ ಸದಸ್ಯರಲ್ಲಿ ಬಹುತೇಕರು ಮುಸ್ಲಿಮರಿದ್ದು, ಈ ಸದಸ್ಯರ ಬೆಂಬಲ ಪಡೆಯಲು ಸಮುದಾಯದ ಮುಖಂಡರು ಪ್ರಯುತ್ನಿಸಬೇಕು ಎಂದು ತಿಳಿಸಿದರು.

    ಇದಕ್ಕೆ ಸ್ಪಂದಿಸಿದ ಅಂಜುಮನ್ ಇಸ್ಲಾಮಿಯಾ ಸಂಸ್ಥೆ ಅಧ್ಯಕ್ಷ ಜಮೀರ್ ಖಾನ್, ನಮ್ಮ ಸಮುದಾಯ ಮುಂಚೆಯಿಂದಲೂ ಕಾಂಗ್ರೆಸ್ ಪರವಿದೆ. ಸಣ್ಣ-ಪುಟ್ಟ ಭಿನ್ನಾಭಿಪ್ರಾಯದಿಂದ ಬೇರೆ ಹೋಗಿರಬಹುದು. ಪಕ್ಷೇತರರನ್ನು ಮನವೊಲಿಸುತ್ತೇವೆ. ಸಮುದಾಯದ ಹಿತಕ್ಕೆ ವಿರುದ್ಧವಾಗಿ ತೀರ್ಮಾನ ಕೈಗೊಂಡಲ್ಲಿ ಬಹಿಷ್ಕಾರ ಹಾಕಲು ಹಿಂದೇಟು ಹಾಕುವುದಿಲ್ಲ ಎಂದು ಭರವಸೆ ನೀಡಿದರು.

    ಚುನಾವಣೆ ಮುಗಿಯುವವರೆಗೂ ನಮ್ಮ ಸದಸ್ಯರು ಎಲ್ಲಿಗೂ ಹೋಗುವಂತಿಲ್ಲ, ಅ.30ರಂದು ಮತ್ತೆ ಸೇರೋಣ, ಈ ಹಿಂದೆ ಆದ ಕೆಲ ಕಹಿ ಘಟನೆಗಳು ನಮಗೆ ಪಾಠ ಕಲಿಸಿವೆ. ಇನ್ನು ಮುಂದೆ ಈ ರೀತಿಯ ತಪ್ಪು ಆಗದಂತೆ ಎಲ್ಲರೂ ಒಗ್ಗೂಡಿ ಪಕ್ಷ ಬೆಳೆಸೋಣ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
    ಕಾಂಗ್ರೆಸ್ ಕಿಸಾನ್ ವಿಭಾಗದ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮೊದಲಾದವರು ಇದ್ದರು.

    ನನ್ನ ಸಂಪರ್ಕದಲ್ಲಿ 3-4 ಪಕ್ಷೇತರ ಸದಸ್ಯರಿದ್ದಾರೆ. ಯಾವುದೇ ಕಾರಣಕ್ಕೂ ನನ್ನ ಮಾತು ಮೀರಲ್ಲ, ಕಾಂಗ್ರೆಸ್ ಹಿತಕ್ಕಾಗಿ ಈ ಬಾರಿ ಅಧಿಕಾರ ಹಿಡಿಯಬೇಕಾಗಿದೆ. ನಮ್ಮ ನಾಯಕರು ಮನಸ್ಸು ಮಾಡಿದಲ್ಲಿ ಪಕ್ಷೇತರ ಸದಸ್ಯರನ್ನು ನಮ್ಮೆಡೆಗೆ ಸೆಳೆಯುವುದು ಕಷ್ಟವೇನಿಲ್ಲ.
    ಬಿ.ಎಂ.ಮುಬಾಕರ್, ಕಾಂಗ್ರೆಸ್ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts