More

    ಕೊಕಟನೂರ ಯಲ್ಲಮ್ಮದೇವಿ ಜಾತ್ರೆ ಸುಸೂತ್ರ

    ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಸುಕ್ಷೇತ್ರ ಕೊಕಟನೂರ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರೆ ಭಾನುವಾರ ಸಂಭ್ರಮದಿಂದ ಜರುಗಿತು. ನಸುಕಿನ ಜಾವ ಗ್ರಾಮದ ಹಿರಿಯರು ಝುಂಜರವಾಡ ಗ್ರಾಮದ ಕೃಷ್ಣಾ ನದಿಗೆ ತೆರಳಿ ಗಂಗಾಪೂಜೆ ನೆರವೇರಿಸಿ, ಗಂಗಾಜಲ ತಂದು ದೇವಿಮೂರ್ತಿಗೆ ಅರ್ಪಿಸಿದರು.

    ಅರ್ಚಕರಿಂದ ಅಭಿಷೇಕ ಹಾಗೂ ವಿಶೇಷ ಅಲಂಕಾರ ಪೂಜೆ ನೆರವೇರಿತು. ಭಕ್ತರು ನೈವೇದ್ಯ ಅರ್ಪಿಸಿ ಹರಕೆ ತೀರಿಸಿದರು.
    ಭಕ್ತರು ಮೊದಲಿಗೆ ಜೋಗುಳಬಾವಿ ಸತ್ಯವ್ವನ ದರ್ಶನ ಪಡೆದು, ಪಾದಯಾತ್ರೆ ಮೂಲಕ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಆಗಮಿಸಿದರು. ಮಧ್ಯಾಹ್ನದಿಂದ ಚೌಡಕಿ ಕಲಾವಿದರಿಂದ ಜರುಗಿದ ಪದಗಳ ಮೇಳ ಜಾತ್ರೆಗೆ ಆಗಮಿಸಿದ ನೃತ್ಯ ಕಲಾವಿದರು ಹಾಗೂ ಮಂಗಳಮುಖಿಯರ ನೃತ್ಯಗಳು ಭಕ್ತರನ್ನು ರಂಜಿಸಿದವು.
    ಸಂಜೆ ದೇವಿ ಜಗದ ಮನೆಯಿಂದ ರೇಣುಕಾ ಯಲ್ಲಮ್ಮದೇವಿಯ ಮೂರ್ತಿ ಪಲ್ಲಕ್ಕಿಯಲ್ಲಿಟ್ಟು ಸಕಲ ವಾದ್ಯಮೇಳದೊಂದಿಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರು ಭಂಡಾರ ಎರಚಿ ದೇವಿ ಸ್ಮರಣೆ ಮಾಡಿದರು.
    ಮೇಕೆ ಬಲಿ ತಡೆ: ಜಾತ್ರೆಯ 2ನೇ ದಿನವೂ ಪ್ರಾಣಿಬಲಿಗಾಗಿ ಮೇಕೆಗಳ ಮಾರಾಟ ಜೋರಾಗಿತ್ತು. ಇದನ್ನು ಕಂಡು ವಿಶ್ವ ಪ್ರಾಣಿ ಕಲ್ಯಾಣ ಸಮಿತಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರು ಪೊಲೀಸ್ ಹಾಗೂ ಪಶು ಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಮಾಹಿತಿ ತಿಳಿಸಿದರು. ಸಿಪಿಐ ರವೀಂದ್ರ ನಾಯ್ಕೋಡಿ ನೇತೃತ್ವದಲ್ಲಿ ದಾಳಿ ನಡೆಸಿ ಎರಡು ಮೇಕೆ ವಶಕ್ಕೆ ಪಡೆದು ಸುಟ್ಟಟ್ಟಿ ಗ್ರಾಮದಲ್ಲಿರುವ ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಿದರು. ಅರ್ಚಕ ಭೀಮಸೇನ ಪೂಜಾರಿ, ಲಕ್ಷ್ಮೀ ಮಾದರ, ಪ್ರಭಾಕರ ಚವ್ಹಾಣ, ಪರಶುರಾಮ ತುಂಗಳಿ, ಸೋನವ್ವ ಟಿಂಗ್ರಿ, ಸಿದ್ದರಾಮ ಹಾರುಗೇರಿ, ಪಾಂಡುರಂಗ ಚವ್ಹಾಣ, ಶಂಕರ ಪಾಟಣಕರ, ಸಾಬು ಭಜಂತ್ರಿ, ಬಂಡು ಚಹ್ವಾಣ, ಪರಶುರಾಮ ಟಿಂಗ್ರಿ, ಭೀಮಪ್ಪ ಭಜಂತ್ರಿ, ಅಪ್ಪಾಸಾಬ ಚಹ್ವಾಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts