More

    ಬಿರುಗಾಳಿ, ಮಳೆಗೆ ದಾಳಿಂಬೆ ಬೆಳೆಹಾನಿ

    ಸಿಂದಗಿ: ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ದಾಳಿಂಬೆ ಬೆಳೆ ಹಾನಿಗೀಡಾಗಿದ್ದಲ್ಲದೇ, ಕೊಕಟನೂರ ಗ್ರಾಮದಲ್ಲಿ ತೋಟದ ವಸತಿ ಮನೆಯೊಂದರೆ ಪತ್ರಾಸ್ ಹಾರಿ ಹೋಗಿದ್ದು, ಕೆಲವು ಜಮೀನುಗಳಲ್ಲಿ ಟಿಸಿ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

    ಕನ್ನೊಳ್ಳಿಯ ಮಹಾಂತೇಶ ಮಣೂರ ಎಂಬುವರು ಬೆಳೆದಿದ್ದ ದಾಳಿಂಬೆ ಬೆಳೆ ಗುರುವಾರ ಬೀಸಿದ ಬಿರುಗಾಳಿ ಹಾಗೂ ಮಳೆಗೆ ನೆಲಕ್ಕುರುಳಿವೆ. ಕೇವಲ ಎರಡು ಎಕರೆ ಜಮೀನು ಹೊಂದಿದ್ದ ರೈತ, ತನ್ನ ಒಂದುವರೆ ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದ. ತೋಟದಲ್ಲಿನ ಎರಡನೂರು ಗಿಡಗಳಲ್ಲಿ ಫಲ ತುಂಬಿ ನಿಂತಿದ್ದವು. ಕಾಯಿ ಕೀಳಲು ಬಿಸಿಲಿಗೆ ಬಣ್ಣ ಬರಲಿ ಎಂದು ಕಾದು ಕುಳಿತಿದ್ದ ರೈತ ಮಹಾಂತೇಶನಿಗೆ ಬಿರುಗಾಳಿ ಸಹಿತ ಮಳೆ ಭಾರಿ ಆಘಾತ ನೀಡಿದ್ದು, ಅಂದಾಜು 5ರಿಂದ 6ಲಕ್ಷ ರೂ.ದ ದಾಳಿಂಬೆ ಬೆಳೆ ಸಂಪೂರ್ಣ ಹಾನಿಗೀಡಾಗಿದೆ.

    ಕೊಕಟನೂರ ಗ್ರಾಮದಲ್ಲಿನ ವಿದ್ಯುತ್ ಟ್ರಾನ್ಸಫರ್‌ಮರ್ ಹಾಗೂ ನಾಲ್ಕಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಯಾವುದೇ ಪ್ರಾಣಾಪಾಯದ ಬಗ್ಗೆ ವರದಿಯಾಗಿಲ್ಲ. ಅದೇ ಗ್ರಾಮದ ಜಗನ್ನಾಥ ಜವಳಗಿ ಅವರಿಗೆ ಸೇರಿದ ತೋಟದ ಮನೆಯಲ್ಲಿನ ಪತ್ರಾಸ್ ಹಾರಿ ಹೋಗಿದ್ದು, ವಸತಿಯಲ್ಲಿದ್ದ ಕುಟುಂಬಸ್ಥರು ಬಯಲಲ್ಲಿಯೇ ರಾತ್ರಿ ಕಳೆದಿದ್ದಾರೆ. ಜಮೀನುಗಳು ವಡ್ಡುಗಳಲ್ಲಿನ ಗಿಡ-ಮರಗಳು ನೆಲಕ್ಕುರುಳಿವೆ.

    ತಾಲೂಕಿನ ಏಳು ಮಳೆ ಕೇಂದ್ರಗಳಲ್ಲಿ ಗುರುವಾರ ರಾತ್ರಿ ಸುರಿದ ಮಳೆಯ ದಾಖಲೆಯಂತೆ ಸಿಂದಗಿ ಮಳೆ ಮಾಪನ ಕೇಂದ್ರದಲ್ಲಿ 8.2ಮಿಮೀ ಹಾಗೂ ಸಾಸಾಬಾಳ ಕೇಂದ್ರದಲ್ಲಿ 2ಮಿಮೀ ಮಳೆಯಾಗಿದೆ. ಆಲಮೇಲ, ರಾಮನಹಳ್ಳಿ, ದೇವರಹಿಪ್ಪರಗಿ, ಕೊಂಡಗೂಳಿ, ಕಡ್ಲೇವಾಡ ಪಿಸಿಎಚ್‌ಗಳಲ್ಲಿ ಮಳೆಯಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts