More

    ‘ಐಪಿಎಲ್​ ಹರಾಜಿನಲ್ಲಿ​ ಕೊಹ್ಲಿಗೆ 42, ಬುಮ್ರಾಗೆ 35 ಕೋಟಿ ರೂ.’!

    ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​)ನ 17ನೇ ಆವೃತ್ತಿಗಾಗಿ ನಿನ್ನೆ (ಡಿ.19) ದುಬೈನಲ್ಲಿ ನಡೆದ ಮಿನಿ ಹರಾಜು, ಕ್ರೀಡಾಭಿಮಾನಿಗಳು ಹುಬ್ಬೇರಿಸುವಂತಹ ಸಂಗತಿಯೊಂದಕ್ಕೆ ಸಾಕ್ಷಿಯಾಯಿತು. ಇತ್ತೀಚೆಗಷ್ಟೇ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ ಟ್ರೋಫಿ ಜಯಿಸಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್​ ಕಮ್ಮಿನ್ಸ್​ ಬರೋಬ್ಬರಿ 20 ಕೋಟಿ ರೂ.ಗೆ ಸನ್​ ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಸೇಲಾದರೆ, ಮಿಚೆಲ್​ ಸ್ಟಾರ್ಕ್​ 24.75 ಕೋಟಿ ರೂ.ಗೆ ಕೋಲ್ಕತ ನೈಟ್​ ರೈಡರ್ಸ್​ ತಂಡಕ್ಕೆ ಬಿಕರಿಯಾಗುವ ಮೂಲಕ ಐಪಿಎಲ್​ ಇತಿಹಾಸದಲ್ಲೇ ದುಬಾರಿ ಆಟಗಾರ ಎನಿಸಿಕೊಂಡರು.

    ಇಬ್ಬರು ಆಸಿಸ್​ ಆಟಗಾರರಿಗೆ ಭಾರಿ ಹಣ ಸುರಿಯುವ ಮೂಲಕ ಕ್ರೀಡಾವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಕೊಂಡಿದೆ. ಅಷ್ಟೊಂದು ಹಣ ಕೊಡಬೇಕಿತ್ತಾ? ಆ ಹಣಕ್ಕೆ ಇಬ್ಬರು ಅರ್ಹರೇ? ತಾವು ಪಡೆದುಕೊಂಡ ಮೊತ್ತಕ್ಕೆ ಇಬ್ಬರು ಟೂರ್ನಿಯಲ್ಲಿ ನ್ಯಾಯ ಒದಗಿಸುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅನೇಕ ಭಾರಿ ಹಣ ಸುರಿದ ಎಸ್​ಆರ್​ಎಚ್​ ಮತ್ತು ಕೆಕೆಆರ್​ ಫ್ರಾಂಚೈಸಿಗಳನ್ನು ಟೀಕಿಸುತ್ತಾರೆ. ಅದರಲ್ಲೂ ವಿದೇಶಿ ಆಟಗಾರರಿಗೆ ಇಷ್ಟೊಂದು ಹಣ ನೀಡಬೇಕಿತ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

    ಇದೆಲ್ಲದರ ನಡುವೆ ಟೀಮ್​ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಆಕಾಶ್​ ಚೋಪ್ರಾ, ಆಸಿಸ್​ ಆಟಗಾರರಿಗೆ ಇಷ್ಟೊಂದು ಹಣ ಸುರಿದಿರುವುದರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈಗಲೂ ಹರಾಜು ಪ್ರಕ್ರಿಯೆಗೆ ಪ್ರವೇಶಿಸಿದರೆ ಎಲ್ಲ ದಾಖಲೆಗಳನ್ನು ಪುಡಿ ಪುಡಿ ಮಾಡುವ ಸಾಮರ್ಥ್ಯವನ್ನು ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್​ ಬುಮ್ರಾ ಹೊಂದಿದ್ದು, ಈ ಆಟಗಾರರ ನಿಜ ಸಾಮರ್ಥ್ಯಕ್ಕೆ ಅನ್ಯಾಯವಾಗಿದೆ ಎಂಬ ಅಭಿಪ್ರಾಯವನ್ನು ಆಕಾಶ್​ ಚೋಪ್ರಾ ವ್ಯಕ್ತಪಡಿಸಿದ್ದಾರೆ.

    ಮಿಚೆಲ್​ ಸ್ಟಾರ್ಕ್​ ಎಲ್ಲ 14 ಪಂದ್ಯಗಳನ್ನು ಆಡಿದರೂ ಅವರು ಬೌಲಿಂಗ್​ ಕೋಟಾ ಕೇವಲ 4 ಓವರ್​ಗಳು ಮಾತ್ರ. ಸ್ಟಾರ್ಕ್​ ಎಸೆಯುವ ಪ್ರತಿ ಬಾಲ್​ಗೆ 7,60,000 ರೂ. ವೆಚ್ಚವಾಗುತ್ತದೆ. ನಿಜಕ್ಕೂ ಇದು ಅಚ್ಚರಿಯ ಸಂಗತಿ. ಆದರೆ, ಇಲ್ಲಿ ಕಾಡುವ ಪ್ರಶ್ನೆ ಏನೆಂದರೆ, ವಿಶ್ವದ ಉತ್ತಮ ಬೌಲರ್​ ಯಾರು? ಐಪಿಎಲ್​ನ ಅತ್ಯುತ್ತಮ ಬೌಲರ್​ ಯಾರು? ಆತ ಬೇರೆ ಯಾರು ಅಲ್ಲ, ಆತನ ಹೆಸರೆ ಜಸ್ಪ್ರೀತ್​ ಬುಮ್ರಾ. ಆದರೆ, ಬುಮ್ರಾಗೆ 12 ಕೋಟಿ ರೂ. ಸಿಕ್ಕಿದ್ದರೆ, ಸ್ಟಾರ್ಕ್​ಗೆ ಸಿಕ್ಕಿರುವ ಹಣ 25 ಕೋಟಿ ರೂ. ಸಮೀಪವಿದೆ. ಇದು ತಪ್ಪು. ಇಲ್ಲಿ ಯಾರೊಬ್ಬರ ಹಣದ ಬಗ್ಗೆ ನನಗೆ ಹೊಟ್ಟೆ ಕಿಚ್ಚು ಇಲ್ಲ. ಎಲ್ಲರಿಗೂ ಸಾಕಷ್ಟು ಹಣ ಸಿಗುತ್ತದೆ ಎಂದು ನಾನು ಬಯಸುತ್ತೇನೆ ಆದರೆ ಇದು ಹೇಗೆ ನ್ಯಾಯೋಚಿತವಾಗಿದೆ ಎಂಬುದು ನನ್ನ ಪ್ರಶ್ನೆಯಾಗಿದೆ ಎಂದು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಚೋಪ್ರಾ ಮಾತನಾಡಿದ್ದಾರೆ.

    ಒಂದು ವೇಳೆ ವಿರಾಟ್​ ಕೊಹ್ಲಿ ಮತ್ತು ಜಸ್ಪ್ರೀತ್​ ಬುಮ್ರಾ ತಮ್ಮ ಫ್ರಾಂಚೈಸಿಗಳಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿ, ಹರಾಜಿನಲ್ಲಿ ಭಾಗಿಯಾದರೆ, ಕೊಹ್ಲಿಗೆ 42 ಕೋಟಿ ಮತ್ತು ಬುಮ್ರಾಗೆ 35 ಕೋಟಿ ರೂ. ಪಕ್ಕಾ ಸಿಗುತ್ತದೆ.

    ಇದು ಇಂಡಿಯನ್ ಪ್ರೀಮಿಯರ್ ಲೀಗ್. ಒಬ್ಬರಿಗೆ ಇಷ್ಟು ಕಡಿಮೆ ಸಂಭಾವನೆ ಮತ್ತು ಇನ್ನೊಬ್ಬರು ಹೇಗೆ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ? ನಾಳೆ ಏನಾದರೂ ಬುಮ್ರಾ ಮತ್ತು ಕೊಹ್ಲಿ, ದಯವಿಟ್ಟು ನಮ್ಮನ್ನು ಬಿಡುಗಡೆ ಮಾಡಿ ಮತ್ತು ನಮ್ಮ ಹೆಸರನ್ನು ಹರಾಜಿನಲ್ಲಿ ಇಡುತ್ತೇವೆ ಎಂದು ತಮ್ಮ ತಂಡಗಳಾದ ಮುಂಬೈ ಇಂಡಿಯನ್ಸ್​ ಮತ್ತು ಆರ್​ಸಿಬಿಗೆ ಹೇಳಿದರೆ ಅವರ ಬೆಲೆಗಳು ಸಹಜವಾಗಿಯೇ ಏರುತ್ತವೆ ಸರಿ? ಮತ್ತು ಅದು ಹೇಗಿರಬೇಕು ಅಂದರೆ, ಮಿಚೆಲ್​ ಸ್ಟಾರ್ಕ್‌ನ ಬೆಲೆ 25 ಕೋಟಿ ಎಂದಾದರೆ, ಕೊಹ್ಲಿಗೆ 42 ಕೋಟಿ ಹಾಗೂ ಬುಮ್ರಾಗೆ 35 ಕೋಟಿ ರೂ. ಆಗಬೇಕು. ಒಂದು ವೇಳೆ ಈ ರೀತಿ ಆಗದಿದ್ದರೆ ಅಲ್ಲಿ ದೋಷವಿದೆ ಎಂದರ್ಥ ಎಂದು ಚೋಪ್ರಾ ಅಸಮಾಧಾನ ಹೊರಹಾಕಿದ್ದಾರೆ.

    ಚೋಪ್ರಾ ಸಹ ಈ ವ್ಯತ್ಯಾಸವನ್ನು ಸರಿಪಡಿಸಲು ಪರಿಹಾರವೊಂದನ್ನು ಪ್ರಸ್ತಾಪಿಸಿದ್ದಾರೆ. ವಿದೇಶಿ ಆಟಗಾರರಿಗೆ ಖರ್ಚು ಮಾಡುವ ಸಾಮರ್ಥ್ಯದ ಮೇಲೆ ಮಿತಿಯನ್ನು ಜಾರಿಗೆ ತರಲು ಸಲಹೆ ನೀಡಿದ್ದಾರೆ. ಇದಕ್ಕಿರುವ ಒಂದು ಪರಿಹಾರವೆಂದರೆ ಸಾಗರೋತ್ತರ ಆಟಗಾರರಿಗೆ ಇರಿಸಲಾಗಿರುವ ಹಣದ ಮೇಲೆ ಮಿತಿಯನ್ನು ಹೇರಬೇಕು ಎಂದರು. (ಏಜೆನ್ಸೀಸ್​)

    ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ: ಶಮಿಗೆ ಒಲಿದ ಅರ್ಜುನ ಪ್ರಶಸ್ತಿ, ಬ್ಯಾಡ್ಮಿಂಟನ್​ ತಾರೆಗಳಿಬ್ಬರಿಗೆ ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಗೌರವ

    ಯುವ ನಿರ್ದೇಶಕನ ಜತೆ ಹಿರಿಯ ನಟ ಪ್ರಭು ಪುತ್ರಿಯ 2ನೇ ಮದ್ವೆ! ಕಾಲಿವುಡ್​ನಲ್ಲೀಗ 500 ಕೋಟಿಯದ್ದೇ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts