More

    ಟ್ರಸ್ಟ್‌ನಿಂದ ಸರ್ಕಾರಿ ಜಾಗ ಅತಿಕ್ರಮಣ : ಕೋಡಿಪುರ ಗ್ರಾಮಸ್ಥರಿಂದ ತಹಸೀಲ್ದಾರ್‌ಗೆ ದೂರು

    ಚನ್ನಪಟ್ಟಣ : ಕೋಡಿಪುರದಲ್ಲಿ ಸರ್ಕಾರಿ ಜಮೀನನ್ನು ಖಾಸಗಿಯವರು ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
    ನೀಲಸಂದ್ರ ಗ್ರಾಪಂ ವ್ಯಾಪ್ತಿಯ ಕೋಡಿಪುರ ಹೊರವಲಯದಲ್ಲಿರುವ ಸರ್ವೇ ನಂ.44 ಸರ್ಕಾರಿ ಜಾಗವನ್ನು ಖಾಸಗಿಯವರು ಅತಿಕ್ರಮಿಸಿದ್ದಾರೆ. ಈ ಸ್ವತ್ತು ಖರಾಬು ಕಟ್ಟೆಯಾಗಿದ್ದು, ಏಕಾಏಕಿ ಈ ಜಾಗದಲ್ಲಿ ಶ್ರೀ ಸ್ಫೂರ್ತಿಧಾಮ ಇಂಟರ್‌ನ್ಯಾಷನಲ್ ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನಿಂದ ಈ ಜಾಗ ನಮಗೆ ಸೇರಿದ್ದು ಎಂದು ನಾಮಫಲಕ ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಟ್ರಸ್ಟ್ ಹೆಸರಿನಲ್ಲಿ ಕಬಳಿಕೆ ಹುನ್ನಾರವೇ?: ಗ್ರಾಮದ ಹೊರವಲಯದಲ್ಲಿರುವ ಈ ಜಾಗ ಸಂಪೂರ್ಣ ಸರ್ಕಾರಿ ಖರಾಬು ಕಟ್ಟೆಯಾಗಿದ್ದು, ಕೆಲ ರೈತರು ಅನುಭೋಗದಲ್ಲಿದ್ದಾರೆ. ಈ ಜಾಗಕ್ಕೆ ಸಂಬಂಧಪಟ್ಟಂತೆ ಒಂದೆಡೆ ಪ್ರದೇಶಕ್ಕೆ ಇದೀಗ, ಸ್ಫೂರ್ತಿಧಾಮ ಟ್ರಸ್ಟ್‌ನವರು ಎನ್ನಲಾದ ಕೆಲವರು ನಾಮಫಲಕ ನೆಟ್ಟಿದ್ದಾರೆ. ಜತೆಗೆ, ಈ ಜಾಗದಲ್ಲಿ ಕಟ್ಟಡ ಕಾಮಗಾರಿ ನಡೆಸಲು ಸಹ ಸಿದ್ಧತೆ ನಡೆಸಲಾಗಿದೆ. ಟ್ರಸ್ಟ್ ಹೆಸರಿನಲ್ಲಿ ಕೆಲವರು ಈ ಜಾಗವನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಯಾವುದೇ ಪರವಾನಗಿ ಇಲ್ಲದೇ ಕೆಲದಿನಗಳ ಹಿಂದೆ ಈ ಜಾಗದಲ್ಲಿ ಟ್ರಸ್ಟ್ ಹೆಸರಿನ ನಾಮಫಲಕ ಹಾಕಲಾಗಿದೆ ಎಂಬ ಆರೋಪ ಗ್ರಾಮಸ್ಥರದ್ದಾಗಿದೆ. ಕೆಲ ಪ್ರಭಾವಿಗಳು ಈ ಜಾಗ ಕಬಳಿಸಲು ಸಾಮಾಜಿಕ ಸೇವೆಯ ಮಾತುಗಳನ್ನು ಆಡುತ್ತಿದ್ದಾರೆ ಎನ್ನಲಾಗುತ್ತಿದೆ.

    ತಹಸೀಲ್ದಾರ್‌ಗೆ ದೂರು: ಈ ಸಂಬಂಧ ತಹಸೀಲ್ದಾರ್ ಎಲ್.ನಾಗೇಶ್‌ಗೆ ಗುರುವಾರ ದೂರು ಸಲ್ಲಿಸಿರುವ ಊರಿನ ಗ್ರಾಮಸ್ಥರು, ಸರ್ಕಾರಿ ಜಾಗ ಕಬಳಿಸುವ ಹುನ್ನಾರದೊಂದಿಗೆ ಟ್ರಸ್ಟ್ ಹೆಸರಿನಲ್ಲಿ ಕೆಲವರು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಸರ್ಕಾರಿ ಜಾಗವನ್ನು ರಕ್ಷಿಸಬೇಕು, ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಅತಿಕ್ರಮಣಕಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts